ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಅವರ ಜೀವನ ಶೈಲಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಘಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಹುನಗುಂದ ತೋಟಗಾರಿಕೆ ರೈತ ಉತ್ಪಾದಕ ಕಂ.ಲಿ, ಸೆಲ್ಕೋ ಫೌಂಡೇಶನ್ ಮತ್ತು ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ 5ಎಂಟಿ ಸಾಮಥ್ರ್ಯದ ಸೋಲಾರ್ ಶೀತಲ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ ರೈತರಿಗೆ ಉತ್ಪಾದನಾ ಸಂಸ್ಕರಣಾ ಘಟಕ ಸ್ಥಾಪನೆ ಅಗತ್ಯವನ್ನು ಮನಗಂಡು ಶೀತಲ ಘಟಕ ಸ್ಥಾಪಿಸಲು ಮುಂದಾಗಿರುವ ಎಫ್‍ಪಿಓಗಳ ಕಾರ್ಯವನ್ನು ಶ್ಲಾಘಿಸಿದರು.
ಜಿಲ್ಲೆಯಲ್ಲಿರುವ ರೈತ ಉತ್ಪಾದಕ ಸಂಘಗಳು ಕ್ರೀಯಾಶೀಲವಾಗಿ ಕೆಲಸ ಮಾಡಿ ಇತರರಿಗೆ ಮಾದರಿಯಾಗಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಎರಡೆರಡು ಎಫ್‍ಪಿಓಗಳು ಇದ್ದರೆ ಸಾಕು ಇದರಿಂದ ರೈತರು ತಮ್ಮ ಅಭಿವೃದ್ದಿಯನ್ನು ಹೆಚ್ಚಿಸಿ ಅವರ ಜೀವನ ಮಟ್ಟ ಸುಧಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಶೀತಲ ಘಟಕದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಸೋಲಾರ ಶೀತಲ ಘಟಕ ಸ್ಥಾಪಿಸಿರುವುದರಿಂದ ವಿದ್ಯುತ್ ಸಂಪರ್ಕ ಕಡಿತ ಸಮಯದಲ್ಲಿ ಅನುಕೂಲವಾಗಲಿದೆ. ಸೋಲಾರ ಬಳಕೆಯಿಂದ ಹೊಲಿಗೆಯಂತ್ರ, ರೊಟ್ಟಿ ಮಷೀನ್‍ಗಳಿಗೆ ಬಳಕೆ ಮಾಡಬೇಕು ಇದರಿಂದ ಸಮಯ ಉಳಿತಾಯದ ಜೊತೆಗೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಎನ್‍ಜಿಓ ಮತ್ತು ಎಫ್‍ಪಿಓಗಳು ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತೋಟಗಾರಿಕೆ ವಿವಿಯ ಸಂಶೋಧನಾ ನಿರ್ದೇಶಕ ಡಾ.ಟಿ.ಬಿ.ಅಲ್ಲೋಳ್ಳಿ ಮಾತನಾಡಿ ಜಿಲ್ಲೆಯ ರೈತರಿಗೆ ಉತ್ಪಾದನೆ ಮಾಡಲು ಯಾವುದೇ ರೀತಿಯ ತೊಂದರೆ ಇಲ್ಲ. ಆದರೆ ಬೆಳೆದ ಉತ್ಪಾದನೆಗೆ ಸಂಸ್ಕರಣ ಘಟಕ ಅಗತ್ಯವಾಗಿದ್ದು, ಗ್ರಾಮೀಣ ಭಾಗದಲ್ಲಿ ಶೀತಲ ಘಟಕ ಸ್ಥಾಪಿಸಿರುವುದು ಇಲ್ಲಿಯ ತೋಟಗಾರಿಕೆ ಬೆಳೆಯ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕೃಷಿ ಪದವೀಧರ ಮತ್ತು ಕೃಷಿ ಸಹಾಯಕ ವಿ.ಜಿ.ಕೂಡಲಗಿಮಠ ಮಾತನಾಡಿ ರೈತರ ಕೃಷಿ ಉತ್ಪನ್ನ ಮೌಲ್ಯೀಕರಣಗೊಳಿಸಲು ಶೀತಿಲ ಘಟಕ ಅನುಕೂಲವಾಗಿದೆ. ಇಂತ ಶೀತಲ ಘಟಕ ಸ್ಥಾಪಿಸುವ ಮೂಲಕ ತಾಲೂಕಿನ ಅತ್ಯುತ್ತಮ ಎಫ್‍ಪಿಓ ಎಂದು ಪ್ರಸಂಶೆಗೆ ಪಾತ್ರವಾಗಿದೆ. ಇಂತಹ ಕ್ರೀಯಾಶೀಳ ಸಂಘಗಳು ಬೆಳೆಯಬೇಕಾದರೆ ಎಲ್.ಡಿ.ಎಂ, ನಬಾರ್ಡಗಳ ಸಹಕಾರ ಅಗತ್ಯವಾಗಿದೆ ಎಂದರು. ಸೆಲ್ಕೋ ಕಂಪನಿಯ ಡೆಪ್ಯೂಟಿ ಜನರಲ್in ಮ್ಯಾನೇಜರ್ ಪ್ರಸನ್ನ ಹೆಗಡೆ ಮಾತನಾಡಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸೂಳೇಭಾವಿ ತೋಟಗಾರಿಕೆ ರೈತ ಉತ್ಪಾದಕ ಕಂ.ಲಿನ ರವಿ ಸಜ್ಜನ ಅವರು ಸೆಲ್ಕೋ ಕಂಪನಿಯವರು ರಾಜ್ಯದಲ್ಲಿ ಒಟ್ಟು 5 ಕಡೆಗಳಲ್ಲಿ ಶೀತಲ ಘಟಕ ಸ್ಥಾಪನೆಗೆ ಮುಂದಾಗಿದ್ದು, ಅದರಲ್ಲಿ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಸ್ಥಾಪಿಸಿರುವುದು ಮೊದಲನೆಯಾಗಿದೆ. ಈ ಭಾಗದ ರೈತರಿಗೆ ಅವಶ್ಯಕತೆ ಇರುವದನ್ನು ಗಮನಿಸಿ ಶೀತಲ ಘಟಕ ಸ್ಥಾಪಿಸಲಾಗಿದೆ. ಅಲ್ಲದೇ ಬೆಳೆಗಳಿಗೆ ಔಷಧ ಸಿಂಪಡಿಸುವ ಸ್ಪ್ರೇ ಮಷಿನ್ ಸಹ ಸಂಘದಲ್ಲಿ ಇಡಲಾಗಿದ್ದು, ರೈತರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ಎಲ್‍ಡಿಎಂ ವ್ಯವಸ್ಥಾಪಕ ಗೋಪಾಲರೆಡ್ಡಿ, ಎಫ್‍ಪಿಓ ಅಧ್ಯಕ್ಷ ಗದಗಯ್ಯ ನಂಜಯ್ಯನಮಠ, ಹುನಗುಂದ ತಹಶೀಲ್ದಾರ ಬಸವರಾಜ ನಾಯ್ಕೋಡಿ, ಉಪ ತಹಶೀಲ್ದಾರ ಎಂ.ಆರ್.ಹೆಬ್ಬಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment