ಚೌತಿ ಆಚರಣೆಗೆ ಜಿಲ್ಲಾಡಳಿತದಿಂದ ಕೊರೊನಾ ಮಾರ್ಗಸೂಚಿಯಿಲ್ಲ; ಗಣೇಶ ಮೂರ್ತಿ ತಯಾರಕರಿಗೆ ನಷ್ಟ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕಾರವಾರ

ಇನ್ನೊಂದು ತಿಂಗಳಿನಲ್ಲಿ ಗಣೇಶ ಚತುರ್ಥಿ ಬರಲಿದೆ. ಆದರೆ ಗಣೇಶನ ಮೂರ್ತಿ ಮಾಡುವವರಿಗೆ ಕೊರೊನಾ ಮುಂಜಾಗ್ರತಾ ಪೂರ್ವ ಸಿದ್ದತೆಯನ್ನು ಯಾವ ರೀತಿಯಲ್ಲಿ ಮಾಡಕೊಳ್ಳಬೇಕು, ಎಂಬ ಮಾರ್ಗದರ್ಶನವನ್ನು ಜಿಲ್ಲಾಡಳಿತ ಇನ್ನೂ ನೀಡಿಲ್ಲ. ಕಳೆದ ವರ್ಷ ಅಂತಿಮ ಗಳಿಗೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಎರಡೇ ದಿನಕ್ಕೆ ಸೀಮಿತಗೊಳಿಸಲಾಗಿತ್ತು.
ಸೆಪ್ಟೆಂಬರ್.10ರಂದು ಗಣೇಶ ಚತುರ್ಥಿ ಇದ್ದು ಮೂರ್ತಿ ತಯಾರಿಕೆ ಈಗಿನಿಂದಲೇ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಮಾರ್ಗದರ್ಶಿ ಸೂತ್ರಗಳನ್ನು ಮುಂಚಿತವಾಗಿ ತಿಳಿಸಿ ಕಲಾವಿದರು ಮತ್ತು ಸಂಘಟಕರನ್ನು ನಷ್ಟದಿಂದ ಪಾರು ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಹಿಂದಿನ ಬಾರಿ ಕೋವಿಡ್ ನಿಮಿತ್ತ ಗಣೇಶೋತ್ಸವವನ್ನು, ಕೇವಲ 2 ದಿನಕ್ಕೆ ಸೀಮಿತಗೊಳಿಸಿ ಜಿಲ್ಲಾಡಳಿತ ಆದೇಶ ಮಾಡಿತ್ತು.

CHETAN KENDULI

ಇದರಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಪೂಜೆಗಳನ್ನು ಹಮ್ಮಿಕೊಂಡಿದ್ದ ಸಾರ್ವಜನಿಕ ಗಣೇಶೋತ್ಸವ ಸಮೀತಿಯವರು ಅದನ್ನೆಲ್ಲ ಕೊನೆಯ ಹಂತದಲ್ಲಿ ಕೈ ಬಿಡಬೇಕಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಕೊಟ್ಟ ಮುಂಗಡ, ಇನ್ನಿತರ ಸಿದ್ಧತೆಗಳಿಗಾಗಿ ಮಾಡಿಕೊಂಡ ಖರ್ಚಿನಿಂದ ಹಲವಾರು ಸಂಘಟಕರಿಗೆ ನಷ್ಟವಾಯಿತು. ಜಿಲ್ಲೆಯಲ್ಲಿ ಮಣ್ಣಿನಿಂದಲೇ ಗಣೇಶನಮೂರ್ತಿ ತಯಾರಿಸಲಾಗುತ್ತಿದ್ದು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿ ತಯಾರಿಸುವವರು ಕಡಿಮೆ. ಅಲ್ಲದೇ ಮಂಗಲ ಮೂರ್ತಿ ತಯಾರಿಕೆಯ ಅಳತೆ ಮೊದಲಾದ ನಿಯಮಗಳನ್ನು ಕಲಾವಿದರು ಪಾಲಿಸುವುದರಿಂದ ಇಲ್ಲಿನ ಗಣೇಶಮೂರ್ತಿಗಳಿಗೆ ಹೊರ ಜಿಲ್ಲೆ ಹೊರ ರಾಜ್ಯಗಳಲ್ಲೂ ಬೇಡಿಕೆ ಇದೆ. ಕಾರವಾರದಲ್ಲಿ ತಯಾರಾಗುವ ಗಣೇಶನ ಮೂರ್ತಿಗಳು ಮಹಾರಾಷ್ಟ್ರ, ಗೋವಾ ಮೊದಲಾದ ರಾಜ್ಯಗಳಿಗೂ ಹೋಗುತ್ತವೆ. ಇನ್ನು ಘಟ್ಟದ ಮೇಲ್ಬಾಗದಿಂದ ಗದಗ, ಹುಬ್ಬಳ್ಳಿ ಮೊದಲಾದ ಕಡೆಯಿಂದ ಮೂರ್ತಿ ಕೊಂಡೊಯ್ಯುತ್ತಾರೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಕಲಾವಿದರಿದ್ದು ಗಣೇಶನಮೂರ್ತಿ ತಯಾರಿಕೆ ಉದ್ಯಮವಾಗಿ ಬೆಳೆದಿದೆ.


ಪ್ರತಿ ವರ್ಷ ಸುಮಾರು 150 ಮೂರ್ತಿಗಳನ್ನು ತಯಾರಿಸುತ್ತೇವೆ. ಮೂರ್ತಿಗಳಿಗೆ 3 ಸಾವಿರದಿಂದ 15 ಸಾವಿರದವರೆಗೂ ಬೆಲೆ ಇದೆ. ಪ್ರಸಕ್ತ ಒಂದು ಬುಟ್ಟಿ ಮಣ್ಣಿಗೆ ಸುಮಾರು 130 ರೂ. ದರವಿದೆ. ಅಲ್ಲದೇ ಮೂರ್ತಿ ತಯಾರಿಕೆಗೆ ಬರುವ ಕಾರ್ಮಿಕರಿಗೂ ಸಂಬಳ ಕೊಡಬೇಕು. ಆದರೆ ಕಳೆದ ವರ್ಷ ಉಂಟಾದ ಗೊಂದಲದಿಂದ ಅನೇಕರು ಗಣೇಶನಮೂರ್ತಿ ಪ್ರತಿಷ್ಠಾಪನೆಯಿಂದ ಹಿಂದೆ ಸರಿದರು. ಅರ್ಧದಷ್ಟು ಮೂರ್ತಿಗಳು ಮಾರಾಟವಾಗದೆ ಅಪಾರ ನಷ್ಟ ಉಂಟಾಯಿತು ಎನ್ನುವುದು ಕಲಾವಿದರ ಅಳಲಾಗಿದೆ.

Be the first to comment

Leave a Reply

Your email address will not be published.


*