ಜಿಲ್ಲಾ ಸುದ್ದಿಗಳು
ಶಿರಸಿ
ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘ (ರಿ.) ಉತ್ತರ ಕನ್ನಡ ಮತ್ತು ಹುಲೇಕಲ್ ಅರಣ್ಯ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಆ.2 ರಂದು ಶಿರಸಿ ತಾಲೂಕಿನ ಹುಲೇಕಲ್ ವಲಯದ ಕೆಂಗ್ರೆಮಠ ಶ್ರೀ ಆಯುರ್ವೇದಿಕ್ ಫಾರ್ಮಾಸ್ಯುಟಿಕಲ್ಸ ಆವಾರದ ಹತ್ತಿರದಲ್ಲಿ ಹಿಂದಿನ ವರ್ಷ ನೆಟ್ಟ ಗಿಡಗಳ ಅವಲೋಕನ ಮತ್ತು ವನ ಮಹೋತ್ಸವ ಮುಂದುವರಿಕೆ ಕಾರ್ಯಕ್ರಮ ಆಚರಿಸಿದರು.ಪರಿಸರ ತಜ್ಞ ಶಿವಾನಂದ ಕಳವೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಗಿಡಮೂಲಿಕೆಗಳ ಬಾಂಧವ್ಯವನ್ನು ತಿಳಿಸಿ ಗಿಡಮೂಲಿಕೆಯ ಜ್ಞಾನ ಪಾರಂಪರಿಕ ವೈದ್ಯರಲ್ಲಿ ಹೆಚ್ಚಾಗಿ ಇರುವುದು. ವನಮಹೋತ್ಸವ ಮಾಡಿ ಗಿಡಗಳನ್ನು ಸಂರಕ್ಷಣೆ ಮಾಡುವ ಕಾರ್ಯ ಸರಿಯಾಗಿ ಆಗಬೇಕು ಎಂದರು.ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘ (ರಿ.) ಉತ್ತರ ಕನ್ನಡ ಇದರ ಪ್ರಧಾನ ಸಂಯೋಜಕ ವಿಶ್ವನಾಥ ಹೆಗಡೆ ಕಡಬಾಳ ಇವರು ಅತಿಥಿಗಳನ್ನು ಸ್ವಾಗತಿಸಿ ಕಳೆದ ವರ್ಷ ನೆಟ್ಟ ಗಿಡಗಳಲ್ಲಿ ಸುಮಾರು 85% ರಷ್ಟು ಗಿಡಗಳು ಬದುಕಿವೆ ಎಂಬುದನ್ನು ತೋರಿಸಿದರು. ವರಾಹ ಮಿಹಿರರ ತತ್ವವಾದ, ಒಬ್ಬ ಪುರುಷ ಸದ್ಗತಿ ಪಡೆಯಲು ಗಿಡ ನೆಡುವುದೂ ಒಂದು ಸತ್ಕಾರ್ಯ ಎಂದು ತಿಳಿಸುತ್ತಾ ಪಾರಂಪರಿಕ ವೈದ್ಯದ ಮಹತ್ವ ತಿಳಿಸಿ ಇತ್ತೀಚೆಗೆ ನಡೆದ ಒಂದು ಘಟನೆಯನ್ನು ವಿವರಿಸಿದರು.ಹುಲಸಾರಂಗ ಕಚ್ಚಿ ಎಲ್ಲ ವೈದ್ಯರು ಕೈ ಬಿಟ್ಟಾಗ ಒಬ್ಬ ಪಾರಂಪರಿಕ ವೈದ್ಯರಿಂದ ಅವರ ಜೀವ ಉಳಿಯಿತು ಎನ್ನುವ ಸದ್ಯದ ಅನುಭವವನ್ನು ತಿಳಿಸಿದರು. ಹಾಗಾಗಿ ಗಿಡಮೂಲಿಕೆಗಳ ಔಷಧವನ್ನು ಕೊಡುವ ಪಾರಂಪರಿಕ ವೈದ್ಯದಲ್ಲಿ ಅಪಾರ ಶಕ್ತಿಯಿದೆ. ಇದನ್ನು ಎಲ್ಲರೂ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಅಲ್ಲದೇ ರಾಷ್ಟ್ರೀಯ ಮಟ್ಟದಲ್ಲಿ ಪಾರಂಪರಿಕ ವೈದ್ಯಕ್ಕೆ ಮಾನ್ಯತೆ ಸಿಗಬೇಕು ಎನ್ನುವುದನ್ನು ಮತ್ತೊಮ್ಮೆ ಆಗ್ರಹಿಸಿದರು.
ಅರಣ್ಯ ವಲಯ ಅಧಿಕಾರಿಗಳು ಮಾತನಾಡಿ ಹಿಂದಿನ ವರ್ಷ ನೆಟ್ಟ ಗಿಡಗಳ ಅವಲೋಕನವೇ ಸ್ಪೂರ್ತಿದಾಯಕ ಎಂದರು. ಅಲ್ಲದೇ ಗಿಡಗಳ ಸಂರಕ್ಷಣೆಗೆ ಬೇಕಾಗುವ ಕ್ರಮಗಳನ್ನು, ಅಲ್ಲದೇ ಈ ಭಾಗದಲ್ಲಿ ಬೆಳೆಯುವ ಗಿಡಗಳನ್ನು ಬೆಳೆಸಿ ಕೊಡುವುದಾಗಿ ಆಶ್ವಾಸನೆ ನೀಡಿದರು. ಗ್ರಾಮ ಪಂಚಾಯತ ಸದಸ್ಯ ಜಿ.ವಿ.ಹೆಗಡೆ ಮಾತನಾಡಿ ಮೇಲಿನ ಓಣೀಕೇರಿ ಗ್ರಾಮ ಪಂಚಾಯತದಲ್ಲಿ ಔಷಧಿ ವನವನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಸಾಂದರ್ಭಿಕವಾಗಿ ಮಾತನಾಡಿದರು.ಹುಲೇಕಲ್ ಅರಣ್ಯ ಇಲಾಖೆಯ ಆರ್.ಎಫ್.ಓ. ಮಂಜುನಾಥ ಹೆಬ್ಬಾರ್ ಹಾಗೂ ತಾಲೂಕಾ ಪಂಚಾಯತ ಮಾಜಿ ಸದಸ್ಯ ರವಿ ಹಳದೋಟ, ಗ್ರಾಮ ಪಂಚಾಯತ ಸದಸ್ಯ ಜಿ.ವಿ.ಹೆಗಡೆ ಹಾಗೂ ತಾಲೂಕಾ ಪಂಚಾಯತ ಮಾಜಿ ಸದಸ್ಯ ನರಸಿಂಹ ಬಕ್ಕಳ ಹಾಗೂ ಪಾರಂಪರಿಕ ವೈದ್ಯರುಗಳು ಭಾಗವಹಿಸಿದ್ದರು. ಮಹಾಯೋಗಿ ವೇಮನ ಪೀಠ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇದರ ಸಂಯೋಜಕರಾದ ಡಾ. ಹೇಮರೆಡ್ಡಿ ಬಿ ನೀಲಗುಂದ ಅವರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಹುಲಸಾರಂಗ ಕಚ್ಚಿ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಉಳಿಸಿರುವ ಪಾರಂಪರಿಕ ವೈದ್ಯ ಶ್ರೀಧರ ಹೆಗಡೆ ನಕ್ಷೆ ಇವರಿಗೆ ಶ್ರೀಶಕ್ತಿ ಆಯುರ್ವೇದಿಕ್ ಕೇಂದ್ರ, ಶಿರಸಿ ಹಾಗೂ ಧನ್ಯಾ ಫಾರ್ಮಾ, ಶಿರಸಿ ಇವರ ಸಹಯೋಗದಲ್ಲಿ ಸಾಂಕೇತಿಕವಾಗಿ ಸನ್ಮಾನಿಸಲಾಯಿತು. ಎಲ್ಲರೂ ಹಿಂದಿನ ವರ್ಷ ನೆಟ್ಟ ಗಿಡಗಳನ್ನು ಅವಲೋಕಿಸುತ್ತಾ ಮತ್ತೆ ಗಿಡಗಳನ್ನು ನೆಟ್ಟರು.
Be the first to comment