ಸಾಂಕ್ರಾಮಿಕ ರೋಗವ್ಯಾಧಿ ಕೊರೊನಾ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಶೇಷ ಪ್ರೋತ್ಸಾಹಾಂಕ ನೀಡಲು ಜಿಲ್ಲಾಡಳಿತಭವನದ ಮುಂಭಾಗದಲ್ಲಿ ಪ್ರತಿಭಟನೆ

ವರದಿ: ಹೈದರ್ ಸಾಬ್, ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಠಕ್ಕೆ ಬಿದ್ದು, ೨೦೨೧ರ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಡೆಸಿರುವುದು ಸರಿಯಷ್ಟೇ ಆದರೆ ಮಕ್ಕಳಿಗೆ ಆಗುತ್ತಿರುವ ಅಸಮಾನತೆಯನ್ನು ಸರಿಪಡಿಸುವುದು ಸರಕಾರದ ಕರ್ತವ್ಯವಾಗಿದೆ ಎಂದು ದಸಂಸ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ತಿಳಿಸಿದರು.ದೇವನಹಳ್ಳಿ ತಾಲೂಕಿನ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘದಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ಪ್ರೋತ್ಸಾಹಾಂಕ ನೀಡಲು ಹಾಗೂ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸರಕಾರಕ್ಕೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಸಹ ಗ್ರಾಮೀಣ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಪಾಲಿಗೆ ಕಳೆದ ಎರಡು ವರ್ಷಗಳು ನಿಜಕ್ಕೂ ಶೂನ್ಯ ಕಲಿಕಾ ವರ್ಷಗಳೇ ಆಗಿವೆ. ಡಿಜಿಟಲ್ ಆನ್‌ಲೈನ್ ತರಬೇತಿ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟದ ಆಧಾರದಲ್ಲಿ ಅಂಕಗಳನ್ನು ನೀಡಿ ಸರಕಾರವೇನೋ ಪಾಸ್ ಎಂಬ ಎರಡಕ್ಷರ ನೀಡಿ ಸಮಧಾನ ಪಡಿಸಬಹುದು. ಆದರೆ, ಕೆಲವು ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಮೊಬೈಲ್‌ಗಳಿಲ್ಲದೆ ಪರಿತಪಿಸಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಸಾಕಷ್ಟು ಅನ್ಯಾಯವಾಗಲಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಂಕಗಳು ಡಿಜಿಟಲ್-ನಾನ್ ಡಿಜಿಟಲ್ ವಿದ್ಯಾರ್ಥಿ ವರ್ಗಗಳ ನಡುವೆ ಭೀಕರ ಅಸಮಾನತೆಯನ್ನು ಸೃಷಿಸಿದೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಅವರ ಹಿಂದಿನ ೮-೯ನೇ ತರಗತಿಗಳ ಪರೀಕ್ಷಾ ಅಂಕಗಳನ್ನು ಗಣನೆಗೆ ತೆಗೆದುಕೊಂಡು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಾಂಕ ನೀಡಲು ಸರಕಾರ ಮುಂದಾಗಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅಸಮಾನತೆಯನ್ನು ಸರಿಪಡಿಸುವಂತೆ ಸರಕಾರಕ್ಕೆ ಒತ್ತಾಯಿಸಿದರು.

CHETAN KENDULI

ವಿಭಾಗೀಯ ಸಂಘಟನಾ ಸಂಚಾಲಕ ಕೆ.ಆರ್.ಮುನಿಯಪ್ಪ ಮಾತನಾಡಿ, ಎಸ್ಸೆಸ್ಸೆಲ್ಸಿ ನಂತರದ ಶೈಕ್ಷಣಿಕ ಆಯ್ಕೆಗಳು, ಶಿಷ್ಯವೇತನ, ಪ್ರೋತ್ಸಾಹಧನ ಎಲ್ಲದರಲ್ಲೂ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕವನ್ನು ಖಾಸಗಿ ಮತ್ತು ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರಿಗೆ ತರುವ ಬಗ್ಗೆ ಸರಕರ ಕ್ರಮ ಕೈಗೊಳ್ಳಬೇಕು. ಕಳೆದೆರಡು ವರ್ಷಗಳಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಗರಗಳ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ಸರಕಾರಿ ಉದ್ಯೋಗಗಳ ಸಂದರ್ಭದಲ್ಲೂ ಜಾರಿಗೊಳಿಸುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಹಿತರಕ್ಷಿಸಲು ಪ್ರಾಮಾಣಿಕ ಬದ್ಧತೆಯಿಂದ ಕಾರ್ಯ ಪ್ರವೃತ್ತವಾಗಬೇಕೆಂದು ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಾಗಿದೆ ಎಂದರು.

ಈ ವೇಳೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಜೋಗಹಳ್ಳಿ ನಾರಾಯಣಸ್ವಾಮಿ, ತಾಲೂಕು ಸಂಚಾಲಕರಾದ ಸಿ.ಮುನಿರಾಜು, ವಿ.ರಮೇಶ್, ಸಿ.ಬಿ.ಮೋಹನ್, ಸಿ.ಎಂ.ಮುರಳೀಧರ, ವೆಂಕಟೇಶ್, ಕೃಷ್ಣಪ್ಪನಾಯ್ಕ, ಚನ್ನಕೃಷ್ಣ, ಅಂಬರೀಶ್, ಸುರೇಶ್, ಕೆ.ಮಂಜುನಾಥ್, ಚನ್ನಕೃಷ್ಣ, ಮುಖಂಡರಾದ ರಮೇಶ್, ಮುನಿಶಾಮಪ್ಪ.ಸಿ, ನಾಗರಾಜ್, ನರಸಿಂಹ, ವಿನೋದ್‌ಕುಮಾರ್, ಶಶಿಕುಮಾರ್ ಹಾಗೂ ಇತರರು ಇದ್ದರು.

Be the first to comment

Leave a Reply

Your email address will not be published.


*