ಕೋವಿಡ್ 3ನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಹಲವು ನಿರ್ಬಂಧ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :ರಾಜ್ಯದ ಗಡಿ ಭಾಗಗಳಲ್ಲಿ ಮತ್ತು ಕೆಲವು ಪ್ರದೇಶಗಳಲ್ಲಿ ಕೋವಿಡ್-19 ಪುನರುತ್ಥಾನದ ಹಿನ್ನಲೆಯಲ್ಲಿ ಸೂಕ್ತ ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ಜಿಲ್ಲೆಯಾದ್ಯಂತ ಕೆಲವೊಂದು ನಿರ್ಬಂದಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಮದುವೆ ಸಮಾರಂಭ, ಇತರೆ ಕೌಟುಂಬಿಕ ಕಾರ್ಯಗಳಿಗೆ 100 ಜನಕ್ಕೆ ಮಾತ್ರ ಸೀಮಿತಗೊಳಿಸಲಾಗಿದ್ದು, ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸತಕ್ಕದ್ದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಿದ್ದು, ಇತರೆ ಎಲ್ಲ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಕೋವಿಡ್ ಸೂಕ್ತ ನಡುವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಉದ್ಯಾನವನಗಳನ್ನು ಬೆಳಿಗ್ಗೆ 7 ರಿಂದ ಸಂಜೆ 6 ವರೆಗೆ ಮಾತ್ರ ತೆರೆಯಲು ಅನುಮತಿಸಿದ್ದು, ಗುಂಪು ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಮರಣ, ಅಂತ್ಯಕ್ರಿಯೆ ಮತ್ತು ಶವ ಸಂಸ್ಕಾರಗಳಿಗೆ ಕೇವಲ 20 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳ ಲಸಿಕಾ ಸ್ಥಿತಿಯನ್ನು ಪರಿಗಣಿಸದೇ 72 ಗಂಟೆಯೊಳಗಿನ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. ವಿಮಾನಯಾನ, ರೈಲ್ವೆ ಮತ್ತು ರಸ್ತೆ ಸಾರಿಗೆ ಅಧಿಕಾರಿಗಳು, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರ ಲಸಿಕಾ ಸ್ಥಿತಿಯನ್ನು ಪರಿಗಣಿಸದೇ 72 ಗಂಟೆಯೊಳಗಿನ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರವನ್ನು ಖಚಿತಪಡಿಸಿಕೊಳ್ಳತಕ್ಕದ್ದು.

ಇದರ ಜೊತೆಗೆ ಟೆಸ್ಟ್, ಟ್ರೀಟ್, ಟ್ರ್ಯಾಕ್ ಮತ್ತು ವ್ಯಾಕ್ಸಿನೇಶನ್‍ಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಕೋವಿಡ್ ಸೂಕ್ತ ನಡುವಳಿಕೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮ ಮಟ್ಟದಲ್ಲಿ ನಿಯಂತ್ರಣ, ಕಣ್ಗಾವಲು ಮತ್ತು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*