ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ತಮ್ಮ ಕ್ಯಾಬಿನೇಟ್ ಸಚಿವ ಸಂಪುಟ ದರ್ಜೆಯಲ್ಲಿ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಸ್ಥಾನ ನೀಡಬೇಕು ಎಂದು ತಾಲೂಕಾ ವಿಕಲಚೇತನ ಒಕ್ಕೂಟ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ವಿಜಯಪುರ ಅತೀ ಹಿಂದುಳಿದ ಜಿಲ್ಲೆಯಾಗಿದೆ. ಇಂತಹ ಕ್ಷೇತ್ರಗಳಿಗೆ ಮಾನ್ಯತೆ ನೀಡಿ ಸಚಿವ ಸ್ಥಾನಮಾನ ನೀಡಿದರೆ ಅಭಿವೃದ್ಧಿ ಕಾರ್ಯಗಳಾಗಲು ಅನುಕೂಲವಾಗುತ್ತದೆ. ಆದ್ದರಿಂದ ಈಗಾಗಲೇ ಸಾಕಷ್ಟು ಜನಪರ ಕಾರ್ಯಗಳಿಂದ ಪ್ರಸಿದ್ಧಿಯಾಗಿರುವ ಶಾಸಕ ನಡಹಳ್ಳಿ ಅವರಿಗೆ ಸಚಿವ ಸ್ಥಾನ ನೀಡಿದರೆ ಜಿಲ್ಲೆ ಸೇರಿದಂತೆ ಸಮಗ್ರ ರಾಜ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಆದ್ದರಿಂದ ಸಚಿವ ಸಂಪುಟ ದರ್ಜೆ ಮಾಡುವ ವೇಳೆಯಲ್ಲಿ ಶಾಸಕ ನಡಹಳ್ಳಿ ಅವರಿಗೆ ಸಚಿವಗಿರಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಸಚಿವ ಸ್ಥಾನವಿಲ್ಲ ಎಂದರೆ ಬೀದಿಗಿಳಿದು ಹೋರಾಟ:
ಮುದ್ದೇಬಿಹಾಳ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಂತಹ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಶಾಸಕ ನಡಹಳ್ಳಿ ಅವರು ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡಿದರೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ವಿವಿಧ ಜಿಲ್ಲೆಗಳಲ್ಲಿಯೂ ನಡೆಯುವಂತಾಗುತ್ತದೆ. ಈಗಾಗಲೇ ನಡಹಳ್ಳಿ ಅವರು ಸಾಕಷ್ಟು ಜನಪರ ಹೋರಾಟಗಳನ್ನು ಮಾಡಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನಮಾನ ನೀಡದಿದ್ದರೆ ತಾಲೂಕಿನ ವಿಕಲಚೇತನರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅಡಿವೆಪ್ಪ ಕೊಡಗಾನೂರ, ಯಲ್ಲಪ್ಪ ಮಾದರ, ಪವಾಡೆಪ್ಪ ಚಲವಾದಿ, ಉಮೇಶ ಜತ್ತಿ, ಸಂತೋಷ ದಾಸರ, ನಾಗೇಶ ಅಮರಾವತಿ, ಎಸ್.ಬಿ.ತೆಗ್ಗಿನಮಠ, ನಿಂಗಪ್ಪ ಇಂಗಳಗೇರಿ, ಮಾರುತಿ, ರಾಜು ರಆಠೋಡ, ಸುಧೀರ ಝಿಂಗಾಡೆ, ಎಸ್.ಕೆ.ಘಾಟೆ, ಜಿ.ಬಿ.ಹಿರೇಮಠ ಇದ್ದರು.
Be the first to comment