ರಾಜ್ಯ ಸುದ್ದಿಗಳು
ದೇವನಹಳ್ಳಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಅಲ್ಪವಧಿ ಆಡಳಿತದಲ್ಲಿ ಆಗಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿ ಮನೆಮನೆಗೆ ತಲುಪಿಸುವ ಕೆಲಸವನ್ನು ಪ್ರತಿ ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿಶ್ವನಾಥಪುರ ಗ್ರಾಪಂ ಜೆಡಿಎಸ್ ಬೂತ್ ಕಮಿಟಿ ರಚನೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾನು ಶಾಸಕನಾಗಿ ಬಂದ ನಂತರ ಪ್ರಥಮ ಬಾರಿಗೆ ಕುಂದಾಣದ ಅರದೇಶನಹಳ್ಳಿ ಗ್ರಾಮದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಯಿತು. ಇದುವರೆಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಈಗಾಗಲೇ ಶಾಸಕನಾಗಿ ೩ ವರ್ಷವಾಗಿದ್ದು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಜನರ ಒತ್ತಡ ಹೆಚ್ಚಾಯಿತು. ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತ ಇದ್ದಾಗ ಅನುದಾನವನ್ನು ತಂದು ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸರಕಾರ ಪತನಗೊಂಡು ಬಿಜೆಪಿ ಸರಕಾರ ಬಂದ ಮೇಲೆ ಅನುದಾನ ತಡೆಹಿಡಿದಿದ್ದರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಬ್ರೇಕ್ ಬಿತ್ತು. ಸುಮಾರು ೭೦ ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳು ಆಡಳಿತ ಮಾಡಿವೆ. ಈಗಿನ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕಾದರೆ ಈಗಿರುವ ಡಿಸೆಲ್ ಬೆಲೆಯನ್ನು ೩೫ರೂ.ಗೆ, ಪೆಟ್ರೋಲ್ ಬೆಲೆಯನ್ನು ೬೫ರೂ.ಗಳಿಗೆ ಕೊಡಲಾಗುತ್ತದೆ. ಗ್ಯಾಸ್ ಸಿಲಿಂಡರ್ ೨೫೦ರೂ.ಗೆ, ೫ ವರ್ಷದ ಅಧಿಕಾರವಧಿಯಲ್ಲಿ ೧೦ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ. ಕಪ್ಪು ಹಣವನ್ನು ತಂದು ಪ್ರತಿ ಜನರ ಖಾತೆಗೆ ೧೫ಲಕ್ಷ ರೂ. ಹಾಕಲಾಗುತ್ತದೆ ಎಂದು ಈ ರೀತಿಯ ಭರವಸೆಯನ್ನು ಕೊಟ್ಟು ಜನರಿಗೆ ಮೋಸವನ್ನು ಮಾಡಿರುವುದು ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಿದರು.
ದೇವರ ದರ್ಶನ ಪಡೆಯಲು ೧೮ ಮೆಟ್ಟಿಲು ಹತ್ತಬೇಕು. ಆದರೆ, ಗ್ರಾಪಂ, ತಾಪಂ, ಜಿಪಂ, ಎಂಎಲ್‌ಎ, ಎಂಪಿ ಎಂಬ ೫ ಮಟ್ಟಿಲು ನಾವು ಹತ್ತಬೇಕಾಗುತ್ತದೆ. ೫ ಮೆಟ್ಟಿಲು ನಮ್ಮದಾಗಲು ಪಕ್ಷದ ಬಲವಧನೆಯಾಗಬೇಕು. ಪ್ರತಿಯೊಬ್ಬರು ಮುಂಬರುವ ಜಿಪಂ, ತಾಪಂ ಚುನಾವಣೆಗೆ ಒಗ್ಗಟ್ಟಿನಿಂದ ಪಕ್ಷವನ್ನು ಬೂತ್ ಮಟ್ಟದಲ್ಲಿ ಗಟ್ಟಿಗೊಳಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪಕ್ಷದಲ್ಲಿ ಅಲ್ಪಾವಧಿಯಲ್ಲಿ ನಮ್ಮ ಸರಕಾರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡಿಲ್ಲ. ನಮ್ಮ ಆಡಳಿತಾವಧಿಯಲ್ಲಿ ಆಗಿರುವ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನ ಮಾಡಬೇಕು. ಮುಂದಿನ ದಿನದಲ್ಲಿ ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಲು ಪ್ರತಿ ವಿಷಯವನ್ನು ರಾಜ್ಯದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ಪ್ರತಿ ಹೋಬಳಿಯ ಗ್ರಾಮಗಳಿಗೆ ಶಾಸಕರು ಸಾಕಷ್ಟು ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸಿರುವುದು ತಮಗೆ ತಿಳಿದೇ ಇದೆ. ಶಾಸಕರ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಪ್ರತಿ ಮನೆಗೆ ಮತವನ್ನು ಕೇಳಲು ಧೈರ್ಯದಿಂದ ನಮ್ಮ ಪಕ್ಷದ ಕಾರ್ಯಕರ್ತರು ಹೋಗಬಹುದು. ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದೊಂದೆ ಗುರಿಯಾಗಿರಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಉಪಾಧ್ಯಕ್ಷ ಹನುಮಂತಪ್ಪ, ವಿಶ್ವನಾಥಪುರ ಗ್ರಾಪಂ ಅಧ್ಯಕ್ಷರ ಹಾದಿಯಾಗಿ ನಾರಾಯಣಸ್ವಾಮಿ, ಸದಸ್ಯರು, ಮುಖಂಡರಾದ ವಕೀಲ ಮನೋಜ್, ನರಸಿಂಹಮೂರ್ತಿ, ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಕಾರ್ಯಕರ್ತರು, ಮುಖಂಡರು ಬಿ.ಕೆ.ನಾರಾಯಣಸ್ವಾಮಿ ಇದ್ದರು.
Be the first to comment