ಜಿಲ್ಲಾ ಸುದ್ದಿಗಳು
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದಕ್ಕಾಗಿ ಜಿಲ್ಲೆಯ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಒಟ್ಟು ನಾಲ್ವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಪ್ರಶಸ್ತಿ ಲಭಿಸಿದೆ.
ಬಾಗಲಕೋಟೆ : ಜಿಲ್ಲಾ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ, ಅಗ್ನಿಶಾಮಕ ಮಹಾಂತೇಶ ರಾಠೋಡ, ಅಗ್ನಿಶಾಮಕ ಚಾಲಕ ಟಿ.ವಾಯ್.ಗೌಡರ, ಮುಧೋಳ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ.ಬಂಡಿವಡ್ಡರ ಅವರು ಜುಲೈ 13 ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಅತ್ಯುತ್ತಮ ಸೇವಾ ಪ್ರಶಸ್ತಿಯ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಅವರಿಗೆ 2019ನೇ ಸಾಲಿನ ನೆಲಮಂಗಲದಲ್ಲಿ ಅಗ್ನಿ ಅವಘಡದಲ್ಲಿ ಸಿಲುಕಿದ್ದ 7 ವರ್ಷದ ಬಾಲಕಿ ರಕ್ಷಣೆ ಹಾಗೂ ಇಲಾಖೆಯಲ್ಲಿನ ಉತ್ತಮ ಸೇವೆ ಹಿನ್ನಲೆಯಲ್ಲಿ ಚಿನ್ನದ ಪದಕ ಪಡೆದರೆ, ಅಗ್ನಿಶಾಮಕ ಮಹಾಂತೇಶ ರಾಠೋಡ ಹಾಗೂ ಅಗ್ನಿಶಾಮಕ ಚಾಲಕ ಟಿ.ವಾಯ್.ಗೌಡರ ಅವರು ಧಾರವಾಡದಲ್ಲಿ ನಡೆದಿದ್ದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ 17 ಜನ ರಕ್ಷಿಸಿದ್ದನ್ನು ಗುರುತಿಸಿ 2018-19ನೇ ಸಾಲಿನ ಅತ್ಯುತ್ತಮ ಪ್ರಶಸ್ತಿ ನೀಡಲಾಗಿದೆ. ಇನ್ನು ಮುಧೋಳ ಅಗ್ನಿಶಾಮಕ ಠಾಣಾಧಿಕಾರಿ ಬಿ.ಎಂ.ಬಂಡಿವಡ್ಡರ ಅವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ತಮ್ಮ ಸೇವಾವಧಿಯಲ್ಲಿ, ಅನೇಕ ಅಗ್ನಿ ಅವಘಡ, ತುರ್ತು ಸಂದರ್ಭ ಹಾಗೂ ಜೀವ ರಕ್ಷಣೆ ಕಾರ್ಯದಲ್ಲಿ ಸಲ್ಲಿಸಿರುವ ಅತ್ಯುನ್ನತ ಸೇವೆಯನ್ನು ಹಾಗೂ ಇವರ ಉತ್ತಮ ಕಾರ್ಯದ ನಿರ್ವಹಣೆಯನ್ನು ಪುರಸ್ಕರಸಿ ರಾಜ್ಯ ಸರ್ಕಾರವು ಚಿನ್ನದ ಪದಕವನ್ನು ನೀಡಿ ಗೌರವಿಸಿರುತ್ತದೆ. ಪ್ರಶಸ್ತಿ ದೊರೆತಿರುವದಕ್ಕೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
Be the first to comment