ಜಲ ಗಂಡಾಂತರವಾದೀತೆ ಉಷಾರ್…! ಎಚ್-ಎನ್ ವ್ಯಾಲಿ ನೀರು ಗ್ರಾಮೀಣ ಭಾಗದ ಕೆರೆಗಳಿಗೆ ಹರಿಸುವುದಕ್ಕೆ ವಿರೋಧ

ವರದಿ: ಹೈದರ್‌ಸಾಬ್ ಕುಂದಾಣ, ದೇವನಹಳ್ಳಿ

ರಾಜ್ಯ ಸುದ್ದಿಗಳು

CHETAN KENDULI

ದೇವನಹಳ್ಳಿ:

ಗ್ರಾಮೀಣ ಭಾಗದಲ್ಲಿನ ಕೆಲ ಕೆರೆಗಳಲ್ಲಿ ಎಚ್.ಎನ್.ವ್ಯಾಲಿ ನೀರು ಹರಿಸುವುದು ಸೂಕ್ತವಲ್ಲ. ಕಲುಷಿತಗೊಂಡಿದ್ದ ನೀರನ್ನು ಶುದ್ಧಿಕರಿಸಿ ಈ ಭಾಗದ ಕೆರೆಗಳಿಗೆ ಹರಿಸುವುದು ಮುಂದಿನ ದಿನಗಳಲ್ಲಿ ಜಲ ಗಂಡಾಂತರವಾಗಲು ಮುಖ್ಯ ಕಾರಣವಾಗಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ದೇವನಹಳ್ಳಿ ತಾಲೂಕಿನ ಬನ್ನಿಮಂಗಲ ಕೆರೆಯನ್ನು ಹೂಳು ತೆಗೆದು ಎತ್ತಿನಹೊಳೆ ನೀರನ್ನು ಹರಿಸಲು ಸರಕಾರ ಮುಂದಾಗಬೇಕು. ಇದೀಗ ಎತ್ತಿನಹೊಳೆ ನೀರು ಹರಿಸಲು ವಿಳಂಬವೆಂಬ ಕಾರಣಕ್ಕೆ ಎಚ್.ಎನ್.ವ್ಯಾಲಿ ನೀರು ಹರಿಸಲು ಮುಂದಾದರೆ, ಇಲ್ಲಿನ ವಾತಾವರಣ ಕಲುಷಿತಗೊಳ್ಳುವುದರಲ್ಲಿ ಸಂದೇಹವಿಲ್ಲ. ಜತೆಗೆ ಬನ್ನಿಮಂಗಲ ಕೆರೆಯಿಂದ ಸ್ಥಳೀಯವಾಗಿ ಅರದೇಶನಹಳ್ಳಿ ಕೆರೆ, ಹೆಸರಘಟ್ಟ ಕೆರೆಗಳಿಗೂ ಸಹ ಇದೇ ನೀರು ಹರಿಯುವುದರಿಂದ ಕೆರೆಯಲ್ಲಿ ನೀರು ಕಲುಷಿತಗೊಂಡು ಅನಾರೋಗ್ಯಕ್ಕೆ ಆಹ್ವಾನ ನೀಡುವಂತೆ ಆಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಿಳಂಬವಾದರೂ ಸಹ ಎತ್ತಿನಹೊಳೆ ನೀರು ಹರಿಸಲು ಕ್ಷೇತ್ರದ ಶಾಸಕರು ಶಿಫಾರಸ್ಸು ಮಾಡಬೇಕು ಎಂದು ಸ್ಥಳೀಯರ ಒತ್ತಾಯವಾಗಿದೆ.

ಮಾರಕವಾಗಬಹುದು ಕಲುಷಿತ ನೀರು:
ಎಚ್.ಎನ್.ವ್ಯಾಲಿ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೆರಮಿಲೋನದಂತಹ ಅಂಶಗಳು ಕಂಡುಬಂದಿರುತ್ತದೆ. ಅದನ್ನು ತೆಗೆಯದೆ, ಆ ನೀರನ್ನು ಹರಿಸಿದಾಗ ಅಂತರ್ಜಲ ಕಲುಷಿತಗೊಂಡು ಜನರಿಗೆ ಅಂಗವೈಫಲ್ಯ, ಕ್ಯಾನ್ಸರ್, ಕಿಡ್ನಿ ಸಮಸ್ಯೆ ಆಗುವಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಮಾರಕವಾಗುತ್ತದೆ ಎಂಬುವುದು ತಿಳಿದು ಸಹ ಈ ನೀರನ್ನು ಈ ಭಾಗಗಳಿಗೆ ಹರಿಸುವುದು ಸೂಕ್ತವಲ್ಲ ಎಂದು ಕುಂದಾಣ ಯುವ ಶಕ್ತಿ, ರೈತ ಮತ್ತು ಕಾರ್ಮಿಕ ಮಕ್ಕಳು ಸೇವಾ ಪ್ರತಿಷ್ಠಾನ ವಿರೋಧ ವ್ಯಕ್ತಪಡಿಸುತ್ತಿದೆ.

ಜೀವ ಸಂಕುಲಕ್ಕೆ ಯೋಗ್ಯವಲ್ಲದ ನೀರು ಬೇಡ:
ದೇವನಹಳ್ಳಿ ಕ್ಷೇತ್ರದಲ್ಲಿ ಯಾವುದೇ ನದಿ ಮೂಲಗಳು ಇಲ್ಲ. ಬಯಲುಸೀಮೆಯ ಪ್ರದೇಶವಾಗಿರುವುದರಿಂದ ಮಳೆಯಾಶ್ರಿತವಾಗಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈಗಾಗಲೇ ಎಚ್.ಎನ್.ವ್ಯಾಲಿ ನೀರಿಗೆ ಬೆಂಗಳೂರಿನ ಹಲವು ಕೈಗಾರಿಕೆಗಳಿಂದ ಹೊರಬಂದಂತಹ ತ್ಯಾಜ್ಯದ ನೀರನ್ನು ಎಷ್ಟೇ ಸಂಸ್ಕರಿಸಿದರೂ ಜೀವ ಸಂಕುಲಕ್ಕೆ ಯೋಗ್ಯವಲ್ಲ ಇದರಿಂದ ಅನಾನುಕೂಲವೇ ಹೆಚ್ಚು ಇದೆ. ಅದ್ದರಿಂದ ಸ್ಥಳೀಯ ಶಾಸಕರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಎತ್ತಿನಹೊಳೆ ನೀರು ಶೀಘ್ರವಾಗಿ ಬನ್ನಿಮಂಗಲ ಕೆರೆಗೆ ಬರುವಂತೆ ಮಾಡಬೇಕು ಎಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ೧೦೦ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ೬೦% ನೀರು ಬಂದಿದೆ. ಉಳಿದಂತೆ ಕೊಳವೆಬಾವಿಗಳು ಬತ್ತಿಹೋಗಿವೆ. ೧೫೦೦-೧೬೦೦ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ ಇದೆ. ಸದ್ಯಕ್ಕೆ ಅಂತರ್ಜಲ ವೃದ್ಧಿಯಾಗಬೇಕು. ಎತ್ತಿನಹೊಳೆ ನೀರು ಎಂಬುವುದು ಕಾಂಗ್ರೆಸ್‌ನ ಆಟವಾಗಿದೆ. ಅದನ್ನು ಆಟವಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ದೇವನಹಳ್ಳಿಯ ಕೆರೆಗಳಿಗೆ ನೀರು ತುಂಬಿಸಲು ಸರಕಾರ ವೃಷಭಾವತಿಯಾಗಲೀ, ಎಚ್.ಎಚ್.ವ್ಯಾಲಿ ನೀರು ಆಗಲಿ ಅಂರ್ಜಲ ವೃದ್ಧಿಗೆ ಒಂದುಬಾರಿಯಲ್ಲ-ಮೂರುಬಾರಿ ಶುದ್ಧಿಕರಿಸಿ ಕೊಟ್ಟರೆ ಸ್ವಾಗಿಸುತ್ತೇನೆ.


– ಎಲ್.ಎನ್.ನಾರಾಯಣಸ್ವಾಮಿ | ಶಾಸಕ, ದೇವನಹಳ್ಳಿ ವಿ.ಸ.ಕ್ಷೇತ್ರ

ಬಯಲು ಸೀಮೆ ಆದ ಮಾತ್ರಕ್ಕೆ ಈ ಭಾಗದಲ್ಲಿ ಕಲುಷಿತ ನೀರು ಹರಿಸಲು ನಾವು ಬಿಡುವುದಿಲ್ಲ. ಶುದ್ಧ ನೈಸರ್ಗಿಕ ಎತ್ತಿನಹೊಳೆ ನೀರು ಈ ಭಾಗದ ಕೆರೆಗಳಿಗೆ ಹರಿಸಬೇಕು. ಎಷ್ಟೇ ಹಸಿವಾದರೂ, ವಿಷ ಸೇವಿಸಲು ಸಾಧ್ಯವೇ. ಮುಂದಿನ ಪೀಳಿಗೆಗೆ ಶಾಶ್ವತ ಶುದ್ಧ ನೀರಾವರಿ ವ್ಯವಸ್ಥೆ ಕಲ್ಪಿಸುವ ಕೆಲಸ ಸರಕಾರ ಮಾಡಬೇಕು. ಹೆಸರಘಟ್ಟ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಜೀವ ಸಂಕುಲಗಳಿವೆ. ಕಲುಷಿತ ನೀರು ಸೇವಿಸಿ ಜೀವಸಂಕುಲಗಳಿಗೆ ಕುತ್ತು ಎರಗಬಹುದು. ಇದಕ್ಕೆ ನಮ್ಮ ವಿರೋಧವಿದೆ.
– ಚಂದ್ರಶೇಖರ್ | ಸಂಚಾಲಕ, ಕುಂದಾಣ ಯುವ ಶಕ್ತಿ

Be the first to comment

Leave a Reply

Your email address will not be published.


*