ರಾಜ್ಯ ಸುದ್ದಿ
ಲಾಭಾಂಶ ಪಡೆಯುವಲ್ಲಿ ಮಾದರಿಯಾದ ಕೊಯಿರ ಶ್ರೀ ಶಾರದ ಸಂಘದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅನೇಕ ಕಾರ್ಯಕ್ರಮಗಳಿಂದ ಸಹಕಾರಿಯಾಗುತ್ತಿದೆ ಎಂದು ಬೆಂಗಳೂರು ವಲಯ ಪ್ರಾದೇಶಿಕ ನಿರ್ದೇಶಕ ಶೀನಪ್ಪಮೂಲ್ಯ ತಿಳಿಸಿದರು.
ತಾಲೂಕಿನ ಕೊಯಿರ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಲಾಭಾಂಶ ವಿತರಣೆಯ ಕಾರ್ಯಕ್ರಮದಲ್ಲಿ ಸಂಘದ ಫಲಾನುಭವಿಗಳಿಗೆ ಲಾಭಾಂಶವನ್ನು ಹಸ್ತಾಂತರಿಸಿ ಮಾತನಾಡಿದರು. ಮಹಿಳೆಯರಿಗೆ ಉಳಿತಾಯ, ಆರೋಗ್ಯ ರಕ್ಷ, ಸ್ವ-ಉದ್ಯೋಗ, ಜ್ಞಾನವಿಕಾಸ ಸೇರಿದಂತೆ ಹಲವು ಕಾರ್ಯಕ್ರಮದಡಿಯಲ್ಲಿ ಮಹಿಳೆಯರು ಸಬಲರಾಗಲು ಯೋಜನೆಯನ್ನು ರೂಪಿಸಲಾಗಿದೆ. ದೇವಾಲಯಕ್ಕೆ ಅನುದಾನ, ಮಾಸಾಶನ ನೀಡಲಾಗುತ್ತಿದೆ. ರಾಜ್ಯದಲ್ಲಿ ೨೮೬ ಕೆರೆಗಳ ಹೊಳೆತ್ತುವ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಪೂಜ್ಯರ ಮಾರ್ಗದರ್ಶನದಲ್ಲಿ ಹೊಸದಾಗಿ ೧೦೦ಕೆರೆಗಳನ್ನು ಗುರ್ತಿಸಿ ಹೂಳು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ೧ ಕೆರೆಗೆ ೨೦ ಗಿಡದಂತೆ, ೧ ಲಕ್ಷ ಗಿಡಗಳನ್ನು ನೆಡುವ ವಿನೂತನ ಅಭಿಯಾನ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ೨೪೦ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ೨೦ಲೀ. ನೀರಿಗೆ ೨ರೂ.ಗಳಂತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ೪ಲಕ್ಷ ೪೦ಸಾವಿರ ಸಂಘಗಳಿಗೆ ೬೨೦ಕೋಟಿ ರೂ.ಗಳ ಲಾಭಾಂಶ ವಿತರಣೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕ ಸತೀಶ್ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ೧೪ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಅದರಲ್ಲಿ ದೇವನಹಳ್ಳಿಯಲ್ಲಿಯೇ ೧೨ ಘಟಕಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿನ ಮಹಿಳೆಯರು ಸದೃಢಗೊಳ್ಳಲು ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಗಳು ಪ್ರತಿ ಮನೆಮನೆಗೆ ತಲುಪುವ ಕೆಲಸ ಮಾಡಲಾಗುತ್ತಿದೆ ಎಂದರು.
ತಾಲೂಕು ಯೋಜನಾಧಿಕಾರಿ ಅಕ್ಷತಾರೈ ಮಾತನಾಡಿ, ತಾಲೂಕಿನಲ್ಲಿ ೬೩ ಸಂಘವಿದ್ದು, ೪೭ ಲಕ್ಷರೂ.ಗಳ ಲಾಭಾಂಶ ಬಂದಿರುತ್ತದೆ. ಕೊಯಿರಾದ ಶ್ರೀ ಶಾರದ ಸಂಘಕ್ಕೆ ೪೯ ಸಾವಿರ ರೂ. ಸ್ಪಂದನಾ ಸಂಘಕ್ಕೆ ೪೬ ಸಾವಿರ, ಮಹಾಲಕ್ಷ್ಮೀ ಸಂಘಕ್ಕೆ ೨೩ ಸಾವಿರ ರೂ.ಗಳ ಲಾಭಂಶವನ್ನು ಸಾಂಕೇತಿಕವಾಗಿ ನೀಡಲಾಗುತ್ತಿದೆ. ಉಳಿದ ಸಂಘಗಳಿಗೆ ಸೇವಾ ಕೇಂದ್ರದಲ್ಲಿಯೇ ವಿತರಿಸಲಾಗುವುದು. ದೇವನಹಳ್ಳಿ ತಾಲೂಕಿನಲ್ಲಿ ೨೬೦೦ ಸಂಘಕ್ಕೆ ೨ಕೋಟಿ ೭೦ಲಕ್ಷ ಲಾಂಭಾಶ ವಿತರಣೆ ನಡೆಯುತ್ತಿದೆ ಎಂದರು. ಈ ವೇಳೆಯಲ್ಲಿ ಕೊಯಿರ ಗ್ರಾಪಂ ಅಧ್ಯಕ್ಷೆ ರಮ್ಯ.ವಿ.ಶ್ರೀನಿವಾಸ್, ಕೊಯಿರ ಒಕ್ಕೂಟದ ಅಧ್ಯಕ್ಷೆ ಸುಮಲತಾ, ವಲಯ ಮೇಲ್ವಿಚಾರಕ ಧನಂಜಯ್, ಸೇವಾ ಪ್ರತಿನಿಧಿಗಳಾದ ಭಾಗ್ಯ, ಸವಿತಾ, ಇದ್ದರು.
Be the first to comment