ರಾಜಕೀಯ ಸುದ್ದಿ
ವಿಜಯಪುರ (ಆ.09): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಜಿಲ್ಲೆಗಳು ವರುಣನ ಅಬ್ಬರಜ್ಜೆ ತತ್ತರಿಸಿವೆ. ಪ್ರವಾಹ ಸಂತ್ರಸ್ತರ ನೆರವಿಗೆ ಹಲವರು ನಿಂತಿದ್ದು, ಇದೀಗ ಶಾಸಕರೋರ್ವರು ನೆರವು ನೀಡುವುದಾಗಿ ಹೇಳಿದ್ದಾರೆ.
ಪ್ರವಾಹದಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ಜನತೆಗೆ ನೆರವಾಗುವ ದೃಷ್ಟಿಯಿಂದ ಒಂದು ತಿಂಗಳ ವೇತನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ತಿಳಿಸಿದರು.
ಇಲ್ಲಿಯವರೆಗೂ ರಾಜ್ಯದಲ್ಲಿ ಮಳೆ ಇಲ್ಲವೆಂದು ಪರಿತಪಿಸಿದ್ದೇವೆ. ಆದರೆ ಈಗ ಪ್ರವಾಹ ಎದುರಾಗಿ ಪರಿಸ್ಥಿತಿ ಗಂಭೀರವಾಗಿದೆ. ಬಹುತೇಕರು ಸೂರು ಕಳೆದುಕೊಂಡಿದ್ದಾರೆ. ನೆಲೆ ಇಲ್ಲದೇ ಪರದಾಡುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ನಡೆಸಿ ನೆರವು ನೀಡಲು ಸಿದ್ಧರಾಗಿದ್ದಾರೆ ಎಂದರು.
ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಪ್ರಧಾನಿಯವರಿಗೆ ಮುಖ್ಯಮಂತ್ರಿ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಬಳಿ ಪರಿಹಾರಕ್ಕೆ ವಿನಂತಿಸಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ನೈತಿಕ ಮನೋಬಲ ತುಂಬಿದ್ದಾರೆ ಎಂದು ಶಹಾಪುರ ಹೇಳಿದರು.
ಅಲ್ಲದೇ ತಾವು ಒಂದು ತಿಂಗಳ ವೇತನ ನೆರವಾಗಿ ನೀಡುತ್ತಿದ್ದು, ಕಾರ್ಪೊರೇಟ್ ಸಂಸ್ಥೆಗಳು ಸಂತ್ರಸ್ಥರ ನೆರವಿಗೆ ಬಂದು ಕಣ್ಣೀರೊರೆಸುವ ಕೆಲಸ ಮಾಡಬೇಕು ಎಂದು ಇದೇ ವೇಳೆ ವಿಧಾನಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಅರುಣ ಶಹಾಪುರ ಹೇಳಿದರು.
Be the first to comment