ರಾಜ್ಯ ಸುದ್ದಿ
ಬೆಂಗಳೂರು: ನಗರದ ಗೃಹ ಕಛೇರಿ ಕೃಷ್ಣಾದಲ್ಲಿ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಈವರೆಗಿನ ಜೀವವೈವಿಧ್ಯ, ಪರಿಸರ ಕಾರ್ಯಚಟುವಟಿಕೆಗಳು, ಕೋವಿಡ್ ಪರಿಸ್ಥಿತಿಯಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಲೆನಾಡಿನಲ್ಲಿ ಅರಣ್ಯ ನಾಶ ಮಾಡಿದ ಕೆಲವು ಘಟನೆಗಳ ಬಗ್ಗೆ ಮಾಹಿತಿ ನೀಡಿದರು. ಜುಲೈ ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜೀವವೈವಿಧ್ಯ ಜಾಗೃತಿ ಅಭಿಯಾನವನ್ನು ನಡೆಸುವ ಕುರಿತು ತಿಳಿಸಿದರು ಹಾಗೂ ಆಹ್ವಾನ ನೀಡಿದರು. ಅಭಿಯಾನದಲ್ಲಿ ಪಾಲ್ಗೊಳ್ಳುವುದಾಗಿ ಯಡಿಯೂರಪ್ಪ ತಿಳಿಸಿ, ಮಲೆನಾಡಿನಲ್ಲಿನ ಕೋವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಭಾರೀ ಮಳೆಯಿಂದ ಮಲೆನಾಡಿನಲ್ಲಿ ಭೂ ಕುಸಿತ ಆಗುವ ಸಂದರ್ಭಗಳಿವೆ. ಈ ಕುರಿತು ಮುನ್ನೆಚ್ಚರಿಕೆ ಬಗ್ಗೆ ಇನ್ನೊಮ್ಮೆ ಜಿಲ್ಲಾಧಿಕಾರಿಗಳಿಗೆ ನೆನಪಿಸಬೇಕು ಎಂದು ಅಶೀಸರ ಮನವಿ ಮಾಡಿದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ಅವರ ಜೊತೆ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಹಾಗೂ ಅಧಿಕಾರಿಗಳು ರಾಜ್ಯದ ಪಂಚಾಯತ್ ಜೀವವೈವಿಧ್ಯ ಸಮಿತಿಗಳ ಸಬಲೀಕರಣ ಕಾರ್ಯಯೋಜನೆ ಜಾರಿ ಬಗ್ಗೆ ಜೂನ್ 16 ಸಂಜೆ ಸಮಾಲೋಚನಾ ಸಭೆ ನಡೆಸಿದರು. ಜುಲೈನಲ್ಲಿ ರಾಜ್ಯದ ಎಲ್ಲಾ ಪಂಚಾಯತ್‍ಗಳಲ್ಲಿ ಜೀವವೈವಿಧ್ಯ ಅಭಿಯಾನ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಪಂಚಾಯತ್ ರಾಜ್ ಕಮೀಷನರ್ ಅವರಿಗೆ ಈ ಅಭಿಯಾನ ಕುರಿತು ಸಂಯೋಜನೆ ಮಾಡಲು ಉಮಾಮಹದೇವನ್ ಸೂಚನೆ ನೀಡಿದರು. ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಪೂರ್ವಭಾವೀ ತಯಾರಿ ಮಾಡಲು ಸೂಚನೆ ನೀಡಿದರು. ಪಂಚಾಯತ್‍ರಾಜ್ ಇಲಾಖೆ ಕಮೀಷನರ್ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಮಂಡಳಿ ಅಧಿಕಾರಿ ಪ್ರಸನ್ನ ಮುಂತಾದವರು ಸಭೆಯಲ್ಲಿ ಪಾಲ್ಗೊಂಡರು.
Be the first to comment