ರಾಜ್ಯ ಸುದ್ದಿಗಳು
ಮುದ್ದೇಬಿಹಾಳ:
ಯಡಿಯೂರಪ್ಪನವರಿಗೆ ಸಿಎಂ ಹುದ್ದೆ ಸಿಕ್ಕಿದ್ದು ಭಿಕ್ಷೆಯಲ್ಲ ಅದು ಅವರ ಪರಿಶ್ರಮದ ಫಲ ಮತ್ತು ಇವರ ನಾಯಕತ್ವದಲ್ಲಿ ವಿಶ್ವಾಸ ಇಟ್ಟಿರುವ ಪಕ್ಷದ ರಾಷ್ಟ್ರೀಯ ನಾಯಕರ ವಿಶ್ವಾಸ ಹಾಗೂ ರಾಜ್ಯದ ಜನತೆಯ ಬೆಂಬಲದ ಪ್ರತೀಕ. ಇದನ್ನು ಯಾರೂ ಅಲುಗಾಡಿಸುವುದು ಸಾಧ್ಯವಿಲ್ಲ. 40-45 ವರ್ಷಗಳಿಂದ ದಿ. ಅನಂತಕುಮಾರ ಅವರ ಜತೆ ಸೇರಿ ಯಡಿಯೂರಪ್ಪನವರು ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಈ ಮಟ್ಟಕ್ಕೆ ತಂದಿದ್ದಾರೆ. ಅವರೊಬ್ಬ ಪ್ರಶ್ನಾತೀತ ನಾಯಕರು.
ರಾಷ್ಟ್ರಮಟ್ಟದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಬಿಜೆಪಿ ಭೀಷ್ಮ ಲಾಲಕೃಷ್ಣ ಅಡ್ವಾಣಿ ಅವರಂತೆಯೇ ಅನುಭವಿಸ್ತರಾಗಿದ್ದು ರಾಷ್ಟ್ರಮಟ್ಟದ ವರ್ಚಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣರಾದರೆ, ರಾಜ್ಯಮಟ್ಟದ ವರ್ಚಸ್ಸಿಗೆ ಸಿಎಂ ಯಡಿಯೂರಪ್ಪ ಕಾರಣ ಅನ್ನೋದನ್ನ ಷಡ್ಯಂತ್ರಕರು ಮೊದಲು ಅರಿತುಕೊಳ್ಳಬೇಕಿದೆ. 2023ರ ಚುನಾವಣೆಯವರೆಗೂ ಯಡಿಯೂರಪ್ಪನವರೇ ಈ ರಾಜ್ಯದ ಸಿಎಂ ಆಗಿರುತ್ತಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಸ್ಪಷ್ಟಪಡಿಸಿದ್ದಾರೆ.
ಮುದ್ದೇಬಿಹಾಳದ ತಮ್ಮ ಗೃಹ ಕಚೇರಿ ದಾಸೋಹ ನಿಲಯದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿದ್ದುಕೊಂಡು ಸಿಎಂ ಬದಲಾವಣೆಗೆ ಷಡ್ಯಂತ್ರ ನಡೆಸುತ್ತಿರುವ ಸಚಿವರನ್ನು ಸಂಪುಟದಿಂದ ಕೈಬಿಡಬೇಕು. ನಾಯಕತ್ವದ ವಿರುದ್ಧ ಧ್ವನಿ ಎತ್ತುವ ಶಾಸಕರ ವಿರುದ್ಧ ಪಕ್ಷದ ರಾಜ್ಯಾಧ್ಯಕ್ಷರ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಷಡ್ಯಂತ್ರ ನಡೆಸುವುದು ಪಕ್ಷಕ್ಕೆ ದ್ರೋಹ ಬಗೆದಂತೆ. ಸಮಸ್ಯೆ ಇದ್ದರೆ ಯಡಿಯೂರಪ್ಪನವರನ್ನು ನೇರವಾಗಿ ಭೇಟಿ ಮಾಡಿ ಬಗೆಹರಿಸಿಕೊಳ್ಳಲು ಅವಕಾಶ ಇದೆ. ಇದನ್ನು ಬಳಸಿಕೊಳ್ಳಬೇಕೆ ಹೊರತು ಷಡ್ಯಂತ್ರ ನಡೆಸಬಾರದು. ಮುಖ್ಯಮಂತ್ರಿ ವಿರುದ್ಧ ನಡೆಸುವ ಷಡ್ಯಂತ್ರ, ಅಪಪ್ರಚಾರ ಪಕ್ಷದ ಇಮೇಜಿಗೆ ಧಕ್ಕೆ ತಂದು ಕೊಡುತ್ತದೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
Be the first to comment