ವೈದ್ಯರೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ: ಬ್ಲಾಕ್ ಫಂಗಸ್ ಹರಡದಂತೆ ಮುಂಜಾಗ್ರತಾ ಕ್ರಮ : ಡಿಸಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ :

ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಭೀತಿಯ ಮಧ್ಯೆ ಬ್ಲಾಕ್ ಫಂಗಸ್ ಸಹ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸರಕಾರಿ ಮತ್ತು ಖಾಸಗಿ ವೈದ್ಯರಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್ ನಿರ್ವಹಣೆಯಲ್ಲಿ ತೊಡಗಿರುವ ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 39 ಆಸ್ಪತ್ರೆಗಳ ವೈದ್ಯರ ಜೊತೆ ವಿಡಿಯೋ ಕಾನ್ಪರೇನ್ಸ್ ಮೂಲಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೂ ಸಹ ಈ ಸೋಂಕು ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲೆಯ ಬಾಗಲಕೋಟೆ, ಬೀಳಗಿ ಹಾಗೂ ಮುಧೋಳದ ತಲಾ 1 ಸೇರಿ 3 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿಸಿದರು.

ಕೋವಿಡ್ ಸೋಂಕಿತರಿಗೆ ಹುಮಿಡಿಫೈಯರ್ಸ್ ಮೂಲಕ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದು, ಹೆಚ್ಚಿನ ಆಸ್ಪತ್ರೆಗಳಲ್ಲಿ ಹ್ಯುಮಿಡಿಫೈಯರ್ಸ್ ನಲ್ಲಿ ಸಾದಾ ನೀರನ್ನು ಉಪಯೋಗಿಸುತ್ತಿರುವದರಿಂದ ಈ ಸೋಂಕು ಕಂಡುಬಂದಿದ್ದು, ಈ ರೀತಿ ಸಾದಾ ನೀರನ್ನು ಉಪಯೋಗಿಸುವ ವೇಳೆಯಲ್ಲಿ ಸೋಂಕಿತರಿಗೆ ಬ್ಲಾಕ್ ಫಂಗಸ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ವೈದ್ಯರು ಇದನ್ನು ಗಂಭೀರವಾಗಿ ಪರಿಗಣಿಸಿ ಹ್ಯುಮಿಡಿಫೈಯರ್ಸ್‍ನಲ್ಲಿ ಕಡ್ಡಾಯವಾಗಿ ಡಿಸ್ಟಿಲರಿ ವಾಟರ್ ಬಳಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ಸೋಂಕು ಹೆಚ್ಚಾಗಿ ಮಧುಮೇಹ ರೋಗ ಇದ್ದವರಲ್ಲಿ ಕಂಡುಬರುತ್ತಿ ಈ ಬಗ್ಗೆ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಿದರು.

ವೈದ್ಯರು ಕೋವಿಡ್ ನಿರ್ವಹಣೆಯ ಜೊತೆಗೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ ಬಗ್ಗೆ ಸರಕಾರದಿಂದ ಬಂದಿರುವ ಮಾರ್ಗಸೂಚಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿದರು. ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಆಕ್ಸಿಜನ್ ಜಿಲ್ಲಾಡಳಿತದಿಂದ ಪೂರೈಕೆ ಮಾಡಲಾಗುತ್ತಿದೆ. ಅಗತ್ಯತೆಗೆ ಅನುಗುಣವಾಗಿ ಸೋರಿಕೆಯಾಗದಂತೆ ನಿಗಾವಹಸಲು ಸೂಚಿಸಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇರುವದಿಲ್ಲವೆಂದು ತಿಳಿಸಿದರು.

ಜಿಲ್ಲೆಯಲ್ಲಿ ರೆಮ್ಡಿವಿಸಿಯರ್‍ಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಎಸ್.ಆರ್.ಎಫ್ ಐಡಿ ಹೊಂದಿದವರಿಗೆ ಅಗತ್ಯವಿರುವ ರೆಮ್ಡಿಸಿವಿಯರ್ ನೇರವಾಗಿ ಆಸ್ಪತ್ರೆಗಳಿಗೆ ಪೂರೈಕೆಯಾಗಲಿದ್ದು, ಯಾವುದೇ ರೀತಿಯ ತೊಂದರೆ ಇರವದಿಲ್ಲ. ರೆಮ್ಡಿವಿಸಿಯರ್ ಹೊರಗಡೆ ತರುವಂತ ಬರೆದುಕೊಡುವಂತಿಲ್ಲ. ತಮಗೆ ಅಗತ್ಯವಿರುವ ರೆಮ್ಡಿವಿಸಿಯರ್ ಚುಚುಮದ್ದನ್ನು ಎಸ್‍ಆರ್‍ಎಫ್ ಐಡಿ ಹೊಂದಿದ ಆಸ್ಪತ್ರೆಗಳು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡನೇ ಅಲೆಯಿಂದ ಸಾವನ್ನೊಪ್ಪಿದವರ ಸಂಖ್ಯೆಯನ್ನು ಅಡಿಟ್ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*