ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಕೋವಿಡ್-19 ಎರಡನೇ ಅಲೇ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸರಕಾರ ಎಪ್ರೀಲ್ 27ರ ರಾತ್ರಿ 9 ರಿಂದ ಮೇ 12ರ ಬೆಳಿಗ್ಗೆ 6 ಗಂಟೆವರೆಗೆ ಲಾಕ್‍ಡೌನ್ ಮಾದರಿಯ ಕಪ್ರ್ಯೂ ಹೊರಡಿಸಿದ್ದು, ಅನುಷ್ಠಾನ ವೇಳೆಯಲ್ಲಿ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 14 ದಿನಗಳ ಕಪ್ರ್ಯೂ ಸಮಯದಲ್ಲಿ ರಾಜ್ಯ ಸರಕಾರ ಹೊರಡಿಸಿದ ಮಾರ್ಗಸೂಚಿಗಳ ಪಾಲನೆಗೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಮಾರ್ಗಸೂಚಿ ಅನುಷ್ಠಾನದಲ್ಲಿ ಹಲ್ಲೆ ಮಾಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಮುಂದಾಗುವುದಾಗಿ ಜಿಲ್ಲಾಧಕಾರಿಗಳು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮನೋಬಲ ತುಂಬುವ ಕೆಲಸ ಮಾಡಲಾಗಿದೆ. ಹೆಚ್ಚಿನ ಕೇಸ್‍ಗಳು ಬಂದಲ್ಲಿ ಕುಮಾರೇಶ್ವರ ಆಸ್ಪತ್ರೆಯಲ್ಲಿ 500 ಬೆಡ್‍ಗಳ ವ್ಯವಸ್ಥೆ ಮಾಡಿದ್ದು, ಸುವರ್ಣ ಆರೋಗ್ಯ ಟ್ರಸ್ಟ್ ಮೂಲಕ ರೆಫರೆನ್ಸ್ ಮಾಡಿದ ಕೋವಿಡ್ ರೋಗಿಗಳಿಗೆ ಉಚಿವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಜ್ವರ ಕಾಣಿಸಿಕೊಂಡಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ರಿಪೋರ್ಟ ಬರುವವರೆಗೂ ಕಾಯದೇ ಕೋವಿಡ್ ಔಷಧಿ ಪಡೆದಲ್ಲಿ ಬೇಗ ಗುಣಮುಖರಾಗಬಹುದು. ಸ್ಟೆರಾಯಿಡ್ ಜಿಲ್ಲೆಯಲ್ಲಿ ಮಾರ್ಗಸೂಚಿ ಪ್ರಕಾರ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದರ ಬಗ್ಗೆ ನಿಗಾವಹಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಸರಕಾರದ 14 ದಿನಗಳ ಕಪ್ರ್ಯೂ ಅವಧಿಯಲ್ಲಿ ಯಾವ ಯಾವದಕ್ಕೆ ಅವಕಾಶ ಇರುವುದಾಗಿ ವಿವರವಾಗಿ ತಿಳಿಸಿದರು. ಅಗತ್ಯವಾದ ಆಹಾರಧಾನ್ಯ, ಹಣ್ಣು, ಹಾಲು, ಮಾಂಸ ಹಾಗೂ ಮೀನು ಮಳಿಗೆಗಳಿಗೆ ಪ್ರತಿದಿನ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅವಕಾಶವಿರುತ್ತದೆ. ಹೊಟೇಲ್, ಬಾರ್ & ರೆಸ್ಟೋರಂಟ್‍ಗಳಿಗೆ ಪಾರ್ಸಲ್‍ಗೆ ಲಭ್ಯವಿದ್ದು, ಹೋಮ್ ಡಿಲೆವರಿಗೆ ವೆಹಿಕಲ್ ಪಾಸ್ ನೀಡಲಾಗುತ್ತದೆ. ಕಟ್ಟಡ ಕೆಲಸಗಳಿಗೆ ಅನುಮತಿ ಇದ್ದು, ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ವಾಹನಕ್ಕೆ ಪಾಸ್ ನೀಡಲಾಗುತ್ತದೆ ಎಂದು ತಿಳಿಸಿದರು.
ಮೆಡಿಕಲ್ ಶಾಪ್, ಲ್ಯಾಬ್, ರಕ್ತನಿಧಿ, ಆಸ್ಪತ್ರೆಗಳು ತೆರೆದಿರುತ್ತವೆ. ಖಾಸಗಿ, ಸರಕಾರಿ ಬಸ್‍ಸಂಚಾರ ಇರುವದಿಲ್ಲ. ಟ್ಯಾಕ್ಸಿ, ಕ್ಯಾಬ್, ಆಟೋ ಸೇವೆ ಇರುವದಿಲ್ಲ. ಸಿನೇಮಾ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೊಳ, ಕ್ಲಬ್, ರಂಗಮಂದಿರ, ಸಭಾಂಗಣ ನಿಷೇಧವಿರುತ್ತದೆ. ಸಾಮಾಜಿಕ, ರಾಜಕೀಯ, ಮನರಂಜನಾ, ಧಾರ್ಮಿಕ, ಸಾಂಸ್ಕøತಿಕ ಸಮಾರಂಭಕ್ಕೆ ಅವಕಾಶವಿರುವದಿಲ್ಲ. ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ನಿರ್ಬಂದವಿರುವದಿಲ್ಲ. ಬ್ಯಾಂಕ್ ಸರಕಾರಿ ಕಚೇರಿ, ಎಟಿಎಂ ತೆರೆದಿರುತ್ತವೆ. ಗಾರ್ಮೆಂಟ್ ಹೊರತುಪಡಿಸಿ ಕೈಗಾರಿಕಾ ಉತ್ಪಾದನಾ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್ ಮಾತನಾಡಿ ಕಪ್ರ್ಯೂ ಸಮಯದಲ್ಲಿ ನರೇಗಾ ಕಾಮಗಾರಿಗಳಿಗೆ ಯಾವುದೇ ರೀತಿಯ ತೊಂದರೆ ಇರುವದಿಲ್ಲ. ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಲಾಗುತ್ತಿದೆ. ಅಲ್ಲದೇ ಬೆಂಗಳೂರು, ಮಹಾರಾಷ್ಟ್ರದಿಂದ ಬಂದವರ ಮೇಲೆ ನಿಗಾವಹಿಸಿ ಪರೀಕ್ಷೆಗೆ ಒಳಪಡಿಸಿದ ನಂತರವೇ ಕೆಲಸ ನೀಡಲಾಗುತ್ತಿದೆ. ಜಿಲ್ಲೆಗೆ ಆಗಮಿಸಿದ ವಲಸಿಗರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಉಪಸ್ಥಿತರಿದ್ದರು.
ಮದುವೆ ಕಾರ್ಯಕ್ರಮಗಳಿಗೆ 50 ಹಾಗೂ ಅಂತ್ಯಸಂಸ್ಕಾರಕ್ಕೆ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆ ಕಾರ್ಯಕ್ರಮಗಳಲ್ಲಿ 50ಕ್ಕೂ ಹೆಚ್ಚುಜನ ಪಾಲ್ಗೊಳ್ಳುವಂತಿಲ್ಲ. ಅಲ್ಲದೇ ಮದುವೆ ದಿನ ಬೆಳಿಗ್ಗೆ 10 ಗಂಟೆವರೆಗೆ ಮಾತ್ರ ಓಡಾಟಕ್ಕೆ ಅವಕಾಶವಿರುತ್ತದೆ. ಉಳಿದ ಸಮಯದಲ್ಲಿ ಅವಕಾಶ ಇರುವದಿಲ್ಲ.
ಲೋಕೇಶ ಜಗಲಾಸರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
Be the first to comment