ನಾಳೆ ನಡೆಯಲಿರುವ 4 ಪಂಚಾಯತಿ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಆಲೂರ ಪಂಚಾಯತಿ ಕಾಂಗ್ರೆಸ್ ತೆಕ್ಕೆಗೆ…!!! ಉಳಿದ ಮೂರು ಪಂಚಾಯತಿಗಳಲ್ಲಿ ಪಕ್ಷಾತೀತವಾಗಿ ಅಧಿಕಾರ…?

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ಮುದ್ದೇಬಿಹಾಳ ತಾಲೂಕಿನ ಗ್ರಾಮ ಪಂಚಾಯತಿ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಮುಖಂಡರು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಪಂಚಾಯತಿ ಅಧ್ಯಕ್ಷ ಸ್ಥಾನದ ಗದ್ದುಗೆಗೆ ಕೂರಿಸುವ ಸತತ ಪ್ರಯತ್ನ ನಡೆಸಿದ್ದು ಫ.4 ರಂದು ನಡೆಯಲಿರುವ ರೂಢಗಿ, ಢವಳಗಿ, ಕುಂಟೋಜಿ ಹಾಗೂ ಆಲೂರ ಗ್ರಾ ಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಆಲೂರ ಪಂಚಾಯತಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಪಕ್ಷಕ್ಕಾದರೆ ಇನ್ನೂಳಿದ ಮೂರು ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಎರಡೂ ಪಕ್ಷಗಳ ಬೆಂಬಲದ ಅಧಿಕಾರದಿಂದ ನಡೆಯಲಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಢವಳಗಿ ಪಂಚಾಯತಿಯ ಒಟ್ಟು 18 ಸದಸ್ಯರಲ್ಲಿ 13 ಸದಸ್ಯರು ಪಕ್ಷಾತೀತವಾಗಿ ಎಸ್‌ಸಿ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಢವಳಗಿ ಗ್ರಾಮದ ಎಸ್‌ಸಿ ಮಹಿಳಾ ಕ್ಷೇತ್ರದಿಂದ 312 ಮತಗಳನ್ನು ಪಡೆದ ಹಣಮವ್ವ ಹರಿಜನ ಅವರಿಗೆ ಬೆಂಬಲಿಸಿದರೆ ಸಾಮಾನ್ಯ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಹಳ್ಳೂರ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 348 ಮತಗಳನ್ನು ಪಡೆದ ಬಸವರಾಜ ಬ್ಯಾಲ್ಯಾಳ, ಢವಳಗಿ ಗ್ರಾಮದ ಹಿಂದುಳಿದ ವರ್ಗ ಬ ಕ್ಷೇತ್ರದಿಂದ 663 ಮತಗಳನ್ನು ಪಡೆದ ಸುರೇಶ ಪಾಟೀಲ, ಅಗಸಬಾಳ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 470 ಮತಗಳನ್ನು ಪಡೆದ ದುಂಡಪ್ಪ ಅರಸುಣಗಿ ಮೂವರಿಗೂ 10 ತಿಂಗಳ ಅಧಿಕಾರ ನೀಡುವ ನಿರ್ಧಾರ ಮಾಡಿದ್ದಾರೆ.


ಇನ್ನೂ ರೂಢಗಿ ಗ್ರಾಮ ಪಂಚಾಯತಿ ಸದಸ್ಯತ್ವಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀದೇವಿ ಸಂಗಪ್ಪ ತಳಗಡೆ ಅವರೇ ಅಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮೀಸಲಾತಿ ಪ್ರಕಾರ ಏಕೈಕ ಸದಸ್ಯರಾಗಿದ್ದು ನೇರವಾಗಿ ಆಯ್ಕೆಯಾಗುತ್ತಾರೆ. ಇನ್ನೂ ಸಾಮಾನ್ಯ ಮೀಸಲಾತಿಯಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ರೂಢಗಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 696 ಮತಗಳನ್ನು ಪಡೆದ ಬಸವರಾಜ ಬೆಲ್ಲದ, ಆಲಕೊಪ್ಪರ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 400 ಮತಗಳನ್ನು ಪಡೆದ ಹಣಮಂತ್ರಾಯ ಹುನಗುಂದ ಇಬ್ಬರೂ ಅಭ್ಯರ್ಥಿಗಳಿದ್ದು ಉಪಾಧ್ಯಕ್ಷ ಸ್ಥಾನ ಯಾರಿಗೆ ಒಳಿಯುವುದೆಂದು ಕಾದುನೋಡಬೇಕಿದೆ.
ಕುಂಟೋಜಿ ಗ್ರಾಮ ಪಂಚಾಯತಿ ಒಟ್ಟು 17 ಜನ ಸದಸ್ಯರಲ್ಲಿ 13 ಜನ ಸದಸ್ಯರು ಹಿಂದುಳಿದ ವರ್ಗ ಬ ಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಕುಂಟೋಜಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 371 ಮತಗಳನ್ನು ಪಡೆದ ಶಿವಬಸಪ್ಪ ಸಜ್ಜನ ಅವರಿಗೆ ಬೆಂಬಲಿಸಿದ್ದು ಹಿಂದುಳಿದ ವರ್ಗ ಅ ಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕುಂಟೋಜಿ ಗ್ರಾಮದ ಹಿಂದುಳಿದ ವರ್ಗ ಅ ಕ್ಷೇತ್ರದಿಂದ 180 ಮತಗಳನ್ನು ಪಡೆದ ಮಂಜುಳಾ ಹುಲಗಣ್ಣಿ ಅವರಿಗೆ ಬೆಂಬಲಿಸಲು ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ಇಬ್ಬರು ಅಭ್ಯರ್ಥಿಗಳು ಆಸಕ್ತರಾಗಿದ್ದು ಯಾರಿಗೆ ಉಪಾಧ್ಯಕ್ಷ ಸ್ಥಾನ ಒಲಿಯಲಿದೆ ಎನ್ನುವುದು ಕಾದು ನೋಡಬೇಕಿದೆ.


ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ಗೊಂದಲದಲ್ಲಿ ಕಾಂಗ್ರೆಸ್ ಪಕ್ಷ:
ಮುದ್ದೇಬಿಹಾಳ ತಾಲೂಕಿನ ಆಲೂರ ಗ್ರಾಮ ಪಂಚಾಯತಿಯ ಒಟ್ಟು 21 ಸದಸ್ಯರಲ್ಲಿ 11 ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದು ಪಂಚಾಯತಿಯ ಚುಕ್ಕಾನಿ ಹಿಡಿಯುವಲ್ಲಿ ಯಾವುದೇ ಸಂದೇಹವಿಲ್ಲ. ಆದರೆ 1984ರಲ್ಲಿ ಆಲೂರ ಗ್ರಾಮದಲ್ಲಿದ್ದ ಮಂಡಲ ಪಂಚಾಯತಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಆಲೂರ ಗ್ರಾಮದ ದೊಡ್ಡಬಸಪ್ಪಗೌಡ ಹಿರೇಗೌಡರ ಅವರನ್ನು ಬಿಟ್ಟರೆ 1990ರಲ್ಲಿ ಅಧಿಕಾರ ವಿಕೇಂದ್ರಿಕರಣಗೊಂಡು ಗ್ರಾಮ ಪಂಚಾಯತಿಯಾಗಿ ಮಾರ್ಪಾಡು ಹೊಂದಿದ್ದು ಸ್ಥಳೀಯ ಆಲೂರ ಗ್ರಾಮದ ಯಾವುದೇ ಪಂಚಾಯತಿಯ ಸದಸ್ಯರಿಗೆ ಅಧ್ಯಕ್ಷ ಸ್ಥಾನ ದೊರಕಿಲ್ಲ. ಆದ್ದರಿಂದ ಸಾಮಾನ್ಯ ಮೀಸಲಾತಿ ಹೊಂದಿರುವ ಅಧ್ಯಕ್ಷ ಸ್ಥಾನಕ್ಕೆ ಆಲೂರಿನ ಸದಸ್ಯರಾಗಿ ಆಯ್ಕೆಯಾಗಿರುವವರಿಗೆ ನೀಡಬೇಕು ಎನ್ನುವುದು ಗ್ರಾಮದ ಹಿರಿಯರ ಬೇಡಿಕೆಯಾಗಿದೆ. ಇದರಿಂದ ಪಂಚಾಯತಿಯ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಹುಮತ ಪಡೆದಿರುವ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಸೃಷ್ಠಿಯಾಗಿದೆ.
ಆಲೂರ ಪಂಚಾಯತಿಗೆ ಮದರಿ ನಾಡಗೌಡ ಪೈಪೋಟಿ:
ಈಗಾಗಲೇ ಆಲೂರ ಪಂಚಾಯತಿಯ ಮದರಿ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ 454 ಮತಗಳನ್ನು ಪಡೆದ ಚನ್ನಬಸವರಾಜ ನಾಡಗೌಡ ಅವರನ್ನು ಸಾಮಾನ್ಯ ಮೀಸಲಾತಿಯ ಅಧ್ಯಕ್ಷ ಸ್ಥಾನದ ಗದ್ದುಗೆಗೆ ಏರಿಸಬೇಕೆಂದು ಕಾಂಗ್ರೆಸ್ ಪಕ್ಷ ಮುಖಂಡರು ತಿರ್ಮಾಣಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ಆಲೂರ ಗ್ರಾಮಕ್ಕೆ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕಸ್ತೂರಿಬಾಯಿ ಹುನಗುಂದ ಅವರಿಗೆ ಹಿಂದುಳಿದ ವರ್ಗ ಬ ಮೀಸಲಾತಿಯ ಉಪಾಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿದೆ. ಆದರೆ ಚುನಾವಣೆಯಲ್ಲಿ ಬಹುಮತದ ಅಧಿಕಾರ ಚುಕ್ಕಾಣಿ ಹಿಡಿಯಲಿದೆಯೋ ಅಥವಾ ಗ್ರಾಮದ ಹಿರಿಯರ ಬೇಡಿಕೆ ಚುಕ್ಕಾಣಿ ಹಿಡಿಯಲಿದೆಯೋ ಎನ್ನುವುದು ಕಾದು ನೋಡಬೇಕಿದೆ.

Be the first to comment

Leave a Reply

Your email address will not be published.


*