ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಅಥವಾ ವಿನಾಯಿತಿ ನೀಡುವುದರ ಜೊತೆಗೆ ಅದನ್ನು ಜಾರಿಗೊಳಿಸುವುದರಲ್ಲೂ ವಿನಾಯಿತಿ ನೀಡಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದವರಿಗೆ ಕಲ್ಪಿಸಲಾಗಿರುವ ಮೀಸಲಾತಿ ಅಥವಾ ವಿನಾಯಿತಿ ನೀಡುವುದರ ಹಿಂದಿನ ಉದ್ದೇಶಗಳನ್ನು ಉಲ್ಲೇಖಿಸಿರುವ ದೆಹಲಿ ಹೈಕೋರ್ಟ್ ತಾಂತ್ರಿಕ ಕಾರಣಗಳನ್ನು ಒಡ್ಡಿ ಅವರಿಗೆ ಕಲ್ಪಿಸಲಾಗಿರುವ ಸೌಲಭ್ಯಗಳನ್ನು ಹಿಂಪಡೆಯಲಾಗದು ಎಂದು ಹೇಳಿದೆ (ಲೇಖರಾಜ್ ಮೀನಾ ವರ್ಸಸ್ ಭಾರತ ಸರ್ಕಾರ).
ಎಸ್‌ಟಿ ಸಮುದಾಯವರು ಶತಮಾನಗಳಿಂದ ಅನುಭವಿಸಿರುವ ಯಾತನೆ ಮತ್ತು ಇತರೆ ಸಮುದಾಯದವರಿಗಿಂತ ಹಿಂದುಳಿದಿರುವುದನ್ನು ಪರಿಗಣಿಸಿ ಅವರಿಗೆ ಮೀಸಲಾತಿ/ವಿನಾಯಿತಿ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಎಂಡ್‌ಲಾ ಮತ್ತು ಆಶಾ ಮೆನನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೇಳಿದೆ. ಎಸ್‌ಟಿ ಸಮುದಾಯಕ್ಕೆ ಸೇರಿದ ಲೇಖರಾಜ್ ಮೀನ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠವು ಮೇಲಿನಂತೆ ಹೇಳಿದೆ.
“ಸಾಕ್ಷರತೆ ಮತ್ತು ಜಾಗೃತಿ ಸೇರಿದಂತೆ ಸಣ್ಣ ವಿಚಾರಗಳಿಗೂ ಈ ಸಮುದಾಯದ ಜನರು ಅನುಭವಿಸು ಯಾತನೆಯನ್ನು ಮರೆತು ಒಂದು ಕಡೆ ಅವರಿಗೆ ಮೀಸಲಾತಿ/ವಿನಾಯಿತಿ ಕಲ್ಪಿಸಿ ತಾಂತ್ರಿಕ ಕಾರಣಗಳನ್ನು ನೀಡಿ ಇನ್ನೊಂದು ಕೈಯಿಂದ ವಾಪಸ್ ಪಡೆಯುವಂತಿಲ್ಲ. ದಿನನಿತ್ಯದ ಬದುಕಿನಲ್ಲಿ ಅಂಥ ಅನಾನುಕೂಲಗಳನ್ನು ಎಲ್ಲದಕ್ಕೂ ವಿಸ್ತರಿಸುವುದರಿಂದ ಇತರರಿಗಿಂತ ಹೆಚ್ಚಾಗಿ ಅವರಿಗೆ ಸಮಸ್ಯೆಯಾಗುತ್ತದೆ,” ಎಂದು ನ್ಯಾಯಾಲಯ ಹೇಳಿದೆ.
ಎಸ್‌ಎಸ್‌ಸಿ ಅಧಿಸೂಚನೆಯ ಅನುಬಂಧ- IXರಲ್ಲಿ ಎಸ್‌ಟಿ ಸಮುದಾಯದವರಿಗೆ ನೀಡಿರುವ ಎತ್ತರದ ವಿನಾಯಿತಿಗೆ ಸಂಬಂಧಿಸಿದಂತೆ ತಡವಾಗಿ ಸರ್ಟಿಫಿಕೇಟ್ ಸಲ್ಲಿಸಿದ್ದಕ್ಕೆ ಲೇಖರಾಜ್ ಅವರ ಅರ್ಜಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ನೇಮಕಾತಿ ವೇಳೆ ನಿರಾಕರಿಸಿತ್ತು.
ಆ ದಾಖಲಾತಿಯನ್ನು ಪಡೆದುಕೊಳ್ಳಲು ಅಭ್ಯರ್ಥಿಯು ರಾಜಸ್ಥಾನದಲ್ಲಿರುವ ಕರೌಲಿಗೆ ತೆರಳಬೇಕಿತ್ತು. ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರಿಯಾದ ಸಮಯಕ್ಕೆ ಆ ದಾಖಲಾತಿಯನ್ನು ಲೇಖರಾಜ್ ಅವರು ಪ್ರಸ್ತುತಪಡಿಸಲು ಸಾಧ್ಯವಾಗಿರಲಿಲ್ಲ.
ಅಭ್ಯರ್ಥಿಯು ಗುಡ್ಡಗಾಡು ಪ್ರದೇಶಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ಜಿಲ್ಲಾ ತಹಶೀಲ್ದಾರ್ ಅವರು ಅಭ್ಯರ್ಥಿಗೆ ಎತ್ತರದ ವಿನಾಯಿತಿ ಸರ್ಟಿಫಿಕೇಟ್ ನೀಡುವಲ್ಲಿ ಸಂಪೂರ್ಣವಾಗಿ ತಪ್ಪೆಸಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಎಸ್‌ಟಿ ಸಮುದಾಯದ ಸದಸ್ಯರಿಗೆ ಮೀಸಲಾತಿ ಕಲ್ಪಿಸುವುದರ ಜೊತೆಗೆ ಮೀಸಲಾತಿ ಜಾರಿಗೊಳಿಸಲೂ ಸಮಯಾವಕಾಶ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. “ಅವಶ್ಯಕತೆ ಇರುವುದರಿಂದ ಶಾಸನಾತ್ಮಕವಾಗಿ ಜೊತೆಗೆ ಸಾಂವಿಧಾನಿಕವಾಗಿ ಎಸ್‌ಟಿ ಸಮುದಾಯಕ್ಕೆ ಕೆಲವೊಂದು ಮೀಸಲಾತಿ/ವಿನಾಯಿತಿ ಕಲ್ಪಿಸಲಾಗಿದೆ. ಇದನ್ನು ಪೂರೈಸಲು ಮೀಸಲಾತಿ/ವಿನಾಯಿತಿ ನೀಡಿದರಷ್ಟೇ ಸಾಲದು. ಅದನ್ನು ಜಾರಿಗೊಳಿಸಲು ಕಾಲಾವಕಾಶವನ್ನೂ ನೀಡಬೇಕು,” ಎಂದು ಪೀಠ ಹೇಳಿದೆ.
ವಕೀಲರಾದ ಆದಿತ್ಯ ಜೈನ್, ನೇಹಾ ಗ್ಯಾಮ್ಲಾನಿ ಮತ್ತು ಭವ್ಯಾ ಗೊಲೆಚಾ ಅವರು ಅರ್ಜಿದಾರರನ್ನು ಪ್ರತಿನಿಧಿಸಿದ್ದರು. ಪ್ರತಿವಾದಿಗಳನ್ನು ವಕೀಲೆ ನಿಧಿ ರಾಮನ್ ಪ್ರತಿನಿಧಿಸಿದ್ದರು.
Be the first to comment