ಬಾಗಲಕೋಟೆ:ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷದ ಪ್ರವಾಹ ಮತ್ತು ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 12093 ಮನೆಗಳು ಹಾನಿಗೀಡಾಗಿವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.
ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಾನಿಗೊಳಗಾದ ಮನೆಗಳಲ್ಲಿ ಎ ಕೆಟಗರಿಯಲ್ಲಿ 577, ಬಿ ಕೆಟಗರಿಯಲ್ಲಿ 2719 ಹಾಗೂ ಸಿ ಕೆಟಗರಿಯಲ್ಲಿ 8797 ಮನೆಗಳು ಎಂದು ಗುರುತಿಸಲಾಗಿದೆ. ಈ ಸಂಖ್ಯೆ ಇನ್ನು ಹೆಚ್ಚಿಗೆ ಆಗುವ ಸಾದ್ಯತೆ ಇರುವುದಾಗಿ ತಿಳಿಸಿದರು. ಹಾನಿಗೊಳಗಾದ ಕುಟುಂಬಗಳಿಗೆ ಈಗಾಗಲೇ 154 ಕೋಟಿ ರೂ.ಗಳ ಪರಿಹಾರಧನ ವಿತರಿಸಲಾಗಿದೆ ಎಂದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆ ಸೇರಿದಂತೆ ಒಟ್ಟು 1,12,525 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಈಗಾಗಲೇ 7.21 ಕೋಟಿ ರೂ.ಗಳನ್ನು 89829 ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ 128 ಕಿ.ಮೀ ರಾಜ್ಯ ಹೆದ್ದಾರಿ, 309 ಕಿ.ಮೀ ಜಿಲ್ಲಾ ಮುಖ್ಯ ರಸ್ತೆ, 54 ಬ್ರೀಡ್ಜ ಹಾಗೂ ಬಾಂದಾರಗಳು ಹಾನಿಗೀಡಾಗಿದ್ದು, ಸರಕಾರದಿಂದ 25 ಕೋಟಿ ರೂ.ಗಳ ಅನುದಾನ ಬಿಡುಗಡೆಮಾಡಲಾಗಿದೆ. ಈ ಪೈಕಿ 26 ಕಾಮಗಾರಿಗಳನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು. . ಪಂಚಾಯರ ರಾಜ್ ಇಲಾಖೆಯಿಂದ 1448 ಕಿ.ಮೀ ರಸ್ತೆ, 29 ಕುಡಿಯುವ ನೀರಿನ ಯೋಜನೆಗಳು ಹಾಗೂ 34 ಬ್ರೀಡ್ಜ್ ಹಾಗೂ ಬಾಂದಾರುಗಳು ಹಾನಿಯಾಗಿವೆ. ಜಿಲ್ಲೆಯ 5 ತಾಲೂಕುಗಳಲ್ಲಿ ಒಟ್ಟು 117 ಕೈಮಗ್ಗದ ಉಪಕರಣ ಹಾಗೂ ಸಾಮಗ್ರಿಗಳು ಹಾನಿಯಾಗಿದ್ದು, ಅದಕ್ಕಾಗಿ 7 ಲಕ್ಷಗಳ ಪರಿಹಾರವನ್ನು ಪಾವತಿಸಲು ಸೂಚಿಸಲಾಗಿದೆ. ಕಳೆದ ಒಂದು ವರ್ಷ ರಾಜ್ಯದಲ್ಲಿ ಪ್ರವಾಹ, ಮಳೆ ಹಾಗೂ ಕೊರೊನಾದಿಂದ ಸಾಕಷ್ಟು ಹಾನಿ ಉಂಟಾಗಿದ್ದು, 11 ತಿಂಗಳ ರಾಜ್ಯಕ್ಕೆ ಬರಬೇಕಾದ ಆದಾಯ ಬರುತ್ತಿಲ್ಲ. ಸರಕಾರಕ್ಕೆ ಬರುವ ನಿಗದಿತ ಆದಾಯ ಬರುತ್ತಿಲ್ಲ. ಶೇ.30 ಕ್ಕಿಂತ ಹೆಚ್ಚಿನ ಆದಾಯ ಬಂದಿರುವದಿಲ್ಲ. ಇದರಿಂದ ಅಭಿವೃದ್ದಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಪ್ರವಾಹ, ನೆರೆ ಹಾಗೂ ಕೋವಿಡ್ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡೆಯೂರಪ್ಪನವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಬೇರೆ ರಾಜ್ಯದಲ್ಲಿ ಸರಕಾರಿ ನೌಕರರಿಗೆ ಸಂಬಳ ನಿಲ್ಲಿಸಿದ್ದಾರೆ. ಆದರೆ ರಾಜ್ಯದಲ್ಲಿ ಸರಕಾರಿ ನೌಕರರ ಸಂಬಳ ನಿಲ್ಲಿಸದೇ ನೀಡಿದ್ದಾರೆ. ಕೋವಿಡ್-19 ಸೋಂಕು ತಡೆಗಟ್ಟಲು ಹಾಗೂ ಕಡಿಮೆ ಮಾಡಲು ಎಲ್ಲ ರೀತಿಯಿಂದ ಕ್ರಮಕೈಗೊಂಡಿದ್ದಾರೆ. ಬರುವ ಜನವರಿ ಮಾಹೆಯಲ್ಲಿ ಕೋವಿಡ್-19ಗೆ ಸಲಿಕೆ ಕೂಡ ಬರಲಿದ್ದು, ಎಲ್ಲರಿಗೂ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment