ಕಳೆದ 15 ದಿನಗಳಿಂದ ದಿನದಿಂದ ದಿನಕ್ಕೆ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ರೈತರು ತಮ್ಮ ಜಮೀನುಗಳಲ್ಲಿ ಮತ್ತು ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿರುವ ತೊಗರಿ ಹತ್ತಿ ಸಜ್ಜೆ ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಹಾಳಾಗುತ್ತಿದ್ದು ರೈತರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು ಅನ್ನದಾತರ ಗೋಳು ಹೇಳತೀರದಾಗಿದೆ .
ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ಕುಳಿತುಕೊಂಡು ಬಾಯಿ ಬಾಯಿ ಬಿಡುವಂಥ ಪರಿಸ್ಥಿತಿ ಅನ್ನದಾತರಲ್ಲಿ ನಿರ್ಮಾಣವಾಗಿದೆ.
ದೇಶದಲ್ಲಿ ಅಧೀಕ ಮಳೆ ಗಾಳಿ ಪ್ರವಾಹ ಬರಗಾಲ ಯಾವುದೇ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೂ ಮೊದಲು ಬಲಿಯಾಗುವುದು ದೇಶದ ಬೆನ್ನೆಲುಬು ರೈತರು..
ಪ್ರಸ್ತುತ ವರ್ಷದ 2020 ಸಾಲಿನಲ್ಲಿ ಪ್ರವಾಹ ಮತ್ತು ಅಧಿಕ ಮಳೆಯಿಂದ ತಾಲೂಕಿನ ಅನ್ನದಾತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂದೆಂದೂ ಕಾಣದಂತಹ ರುದ್ರಾವತಾರ ಮಳೆಯು ಈ ಬಾರಿ ಹೆಚ್ಚಾಗಿರುವುದರಿಂದ ಜಮೀನುಗಳಲ್ಲಿ ಅಧಿಕ ತೇವಾಂಶದ ಪ್ರಯುಕ್ತ ರೈತರ ಬೆಳೆಗಳು ನೀರಿನಲ್ಲಿ ಸಂಪೂರ್ಣ ಕೊಳೆತು ಹೋಗುತ್ತಿವೆ.
ಹುಣಸಿಗಿ ತಾಲೂಕಿನ ಯಡಹಳ್ಳಿ, ಅರಕೇರಾ, ರಾಜನಕೋಳೂರು, ಬಲಶೆಟ್ಟಿಹಾಳ ,ಇಸಾಂಪೂರ, ಕುಪ್ಪಿ ,ದ್ಯಾಮನಾಳ, ಹೆಬ್ಬಾಳ ದೇವಾಪೂರ.ಜೆ ಬನ್ನೆಟ್ಟಿ, ಗುಳಬಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಸುಮಾರು 50 ಹಳ್ಳಿಗಳಲ್ಲಿ ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಮೌಲ್ಯದ ಸಾವಿರಾರು ಎಕರೆ ಭತ್ತ ಗಾಳಿ ಸಮೇತ ಭಾರೀ ಮಳೆಗೆ ನೆಲಕ್ಕೆ ಬಿದ್ದು ಹಾಳಾಗಿದೆ.
ಹೀಗಾಗಿ ಸಾವಿರಾರು ಎಕರೆ ಭತ್ತ ನೆಲಕಚ್ಚಿರುವ ರೈತರು ಕಂಗಾಲಾಗಿದ್ದಾರೆ ಆದಷ್ಟು ಬೇಗನೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಪರಿಹಾರ ವಿತರಿಸಬೇಕು ಎಂದು ರೈತಾಪಿ ವರ್ಗ ಒತ್ತಾಯಿಸುತ್ತಿದೆ.
ಲಕ್ಷಾಂತರ ರೂಪಾಯಿ ಸಾಲ ಸೂಲ ಮಾಡಿ ಬಿತ್ತನೆ ಮಾಡಿದ ಬೆಳೆ ಕಣ್ಮುಂದೆ ಹಾನಿಯಾಗುತ್ತಿರುವುದು ರೈತರ ಬಾಳಿನಲ್ಲಿ ಬಿರುಗಾಳಿ ಬಿಟ್ಟಂತಾಗಿ. ರೈತಾಪಿ ವರ್ಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಸರ್ಕಾರ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿದ್ದು ಕಳೆದ ಹದಿನೈದು ದಿನಗಳ ಹಿಂದೆ ಹಾನಿಯಾದ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿದ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ ಈಗ ಮತ್ತೆ ಮಳೆಯಿಂದ ಬೆಳೆಗಳು ಹಾನಿ ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ
ವಾಸ್ತವ ಅದೇನೇ ಇರಲಿ ಆದಷ್ಟು ಬೇಗನೆ ಸರ್ಕಾರ, ಸಂಬಂಧಿಸಿದ ಇಲಾಖೆ ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ರೈತರ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.
Be the first to comment