ಡಿಇಸಿ ಮತ್ತು ಅಲ್ಬೆಂಡಜೋಲ್‌ ಗುಳಿಗೆಗಳು ಅತ್ಯಂತ ಸುರಕ್ಷಿತವಾದ ಔಷಧಿಗಳು: ಡಾ.ಬೀಳಗಿ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 



ಮುದ್ದೇಬಿಹಾಳ:

ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧಾಪ್ಯದಿಂದಿರುವವರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಂದ ನರಳುತ್ತಿರುವವರು ಡಿಇಸಿ ಮತ್ತು ಅಲ್ಬೆಂಡಜೋಲ್‌ ಮಾತ್ರೆ ಸೇವಿಸು ವಂತಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಜೈಬುನ್ನೀಸಾ ಬೀಳಗಿ ಹೇಳಿದರು. 



ಮುದ್ದೇಬಿಹಾಳ ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ಆನೆಕಾಲು ರೋಗಮುಕ್ತ ಸಮಾಜಕ್ಕಾಗಿ ಜಿಲ್ಲೆಯಾದ್ಯಂತ ಸೆ.27ರಿಂದ ಅಕ್ಟೋಬರ್‌ 11 ರ ವರೆಗೆ ಸಾಮೂಹಿಕ ಡಿಇಸಿ ಮತ್ತು ಅಲ್ಬೆಂಡಜೋಲ್‌ ಮಾತ್ರೆ ನುಂಗಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.



 ಆರೋಗ್ಯದಿಂದಿರುವ ಹಾಗೂ ಬಿಪಿ, ಸಕ್ಕರೆ ಕಾಯಿಲೆ ಇರುವ ರೋಗಿಗಳು ಸಹ ಮಾತ್ರೆ ಸೇವಿಸಬಹುದು. ಡಿಇಸಿ ಮತ್ತು ಅಲ್ಬೆಂಡಜೋಲ್‌ ಗುಳಿಗೆಗಳು ಅತ್ಯಂತ ಸುರಕ್ಷಿತವಾದ ಔಷಧಿಗಳಾಗಿದ್ದು, ಕಳೆದ 50 ವರ್ಷಗಳಿಂದ ವಿಶ್ವ ದಾದ್ಯಂತ ಉಪಯೋಗಿಸಲ್ಪಡುತ್ತಿವೆ. ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳು ಈ ಮಾತ್ರೆಗಳನ್ನು ಸೇವಿಸಿದಾಗ ಮಾತ್ರ ಅವರ ರಕ್ತದಲ್ಲಿರುವ ಜಂತುಗಳು ನಾಶ ಹೊಂದುವುದರಿಂದ ತಾತ್ಕಾಲಿಕವಾಗಿ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ವಾಂತಿ, ತಲೆ ಸುತ್ತುವಿಕೆ ಕಂಡು ಬರುತ್ತವೆ.  5ರಿಂದ 6 ವರ್ಷಗಳ ಕಾಲ ಪ್ರತಿಯೊಬ್ಬರೂ ಈ ಮಾತ್ರೆಗಳನ್ನು ಸೇವಿಸಿದಲ್ಲಿ ಮುಂದಿನ ಪೀಳಿಗೆಯವರು ಆನೆಕಾಲು ರೋಗದಿಂದ ಮುಕ್ತವಾಗುತ್ತಾರೆ. ಸಣ್ಣ-ಪುಟ್ಟ ತೊಂದರೆಗಳಿಗೆ ಹೆದರಿ ಈ ಮಾತ್ರೆ ಸೇವಿಸದಿದ್ದಲ್ಲಿ ಆನೆಕಾಲು ರೋಗ ನಿಯಂತ್ರಣ ಅಸಾಧ್ಯ ಎಂದು  ತಿಳಿಸಿದರು.



ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ಆಯ್ದ ಗ್ರಾಮಗಳಲ್ಲಿ ಆರೋಗ್ಯವಂತ ಮೈಕ್ರೋಫೈಲೇರಿಯಾ ಪಾಸಿಟಿವ್‌ ವ್ಯಕ್ತಿಗಳನ್ನು ಕಂಡು ಹಿಡಿಯಲು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಮುದ್ದೇಬಿಹಾಳ ತಾಲೂಕಿನ ವಿವಿಧ ಗ್ರಾಮದಲ್ಲಿ ರಾತ್ರಿ ರಕ್ತಲೇಪನ ಸುಮಾರು1560 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.



ತಾಲೂಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ, ಮಾತನಾಡಿ ಮುದ್ದೇಬಿಹಾಳ ತಾಲೂಕಿನಾದ್ಯಂತ ಒಟ್ಟು 307807 ಜನರಿಗೆ ಔಷಧ ನುಂಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 669 ಜನರನ್ನು ನಿಯೋಜಿಸಲಾಗಿದೆ. ಪ್ರತಿದಿನ ಸಿಬ್ಬಂದಿಗಳು ಬೆಳಗ್ಗೆ 8 ಗಂಟೆಯಿಂದ ಸಂಜೆ  ವರಗೆ ಮನೆ ಮನೆಗೆ ಭೇಟಿ ನೀಡಿ ಮಾತ್ರೆ ನುಂಗಿಸುವರು. ಮೇಲ್ವಿಚಾರಣೆಗಾಗಿ 68 ಜನ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಹೇಳಿದರು. 



ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಂ.ಎಸ್. ಮನಹಳ್ಳಿ, ಐ.ಸಿ.ಮಾನಕರ್, ಈರಣ್ಣ ಚಿನಿವಾರ,  ಶಿವಾನಂದ ಬೊಮ್ಮನಹಳ್ಳಿ,  ಆನಂದ ಬಾಗೇವಾಡಿ,  ಎಂ.ಎಸ್. ಗೌಡರ, ಎಸ್.ಆರ್.ಸಜ್ಜನ,  ಆಶಾ ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಕೆಂಭಾವಿ, ಸುನಂದಾ ಅಸ್ಕಿ, ಮೊದೀನ್ಮ್ ಮುಲ್ಲಾ ಉಪಸ್ಥಿತರಿದ್ದರು.



 

Be the first to comment

Leave a Reply

Your email address will not be published.


*