ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ:
ಬಿ.ಜೆ.ಪಿ. ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂದು ಹೇಳುತ್ತಿರುವ ಜನರು ಮೊದಲು ಯಾವ ಸರಕಾರದ ಅವಧಿಯಲ್ಲಿ ಅತೀ ಹೆಚ್ಚು ಅನುಧಾನವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ನೀಡಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಶಾಸಕ ಹಾಗೂ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಇಣಚಗಲ್ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲಾ ಭೂಮಿ ಪೂಜಾ ನೆರವೇರಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕುಟುಂಬದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿನ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಬಿ.ಜೆ.ಪಿ.ಯ ಸರಕಾರ ಹೊತ್ತುಕೊಂಡಿದೆ. ಇದರ ಬಗ್ಗೆ ಬಿ.ಜೆ.ಪಿ. ಪಕ್ಷ ಅಲ್ಪಸಂಖ್ಯಾತರ ವಿರೋಧವಾಗಿದೆ ಎನ್ನುವವರು ತಿಳಿದುಕೊಳ್ಳಬೇಕು. ಅಲ್ಲದೇ ಇಂತಹ ವ್ಯಕ್ತಿಗಳ ಬಗ್ಗೆ ನಿಜವಾದ ಅಲ್ಪಸಂಖ್ಯಾತ ಜನರು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಇಣಚಗಲ್ ಗ್ರಾಮದಲ್ಲಿ ಅಲ್ಪಸಂಖ್ಯಾತರ ವಸತಿ ಶಾಲಾ ಕಟ್ಟಡಕ್ಕೆ ಅನುಧಾನ ತಂದಿರುವ ಶಾಸಕರ ಜೊತೆಗೆ ಈ ಶಾಲೆಗಾಗಿ ಹಿಂದಿನಿಂದಲೂ ಹೋರಾಟ ಮಾಡುತ್ತಾ ಬಂದ ನಿವೃತ್ತ ನ್ಯಾಯಾಧೀಶರಾದ ಜೆ. ಡಿ. ಇನಾಮದಾರ ಅವರನ್ನು ನೆನಸಬೇಕು. ಇಂತಹ ಶಾಲೆ ನನ್ನ ಜಿ.ಪಂ. ವ್ಯಾಪ್ತಿಯಲ್ಲಿ ಬರುತ್ತಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು. ಗೋವಾ ವಿಮೋಚನಾ ಹೋರಾಟಗಾರ ಎಂ. ಎಚ್. ಮಾಗಿ, ಬಿಜೆಪಿ ಮುಖಂಡರಾದ ಮಲಕೇಂದ್ರರಾಯ ಪಾಟೀಲ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಸುರೇಶ ಕೋಕರೆ ಮಾತನಾಡಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ತಾ.ಪಂ. ಅಧ್ಯಕ್ಷೆ ಎಲ್.ಪಿ. ಹವಾಲ್ದಾರ, ಎ.ಪಿ.ಎಂ.ಸಿ. ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ಕಲಬುರಗಿ ವಿಭಾಗದ ಕಟನಾಟಕ ಗೃಹ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಕಾಂತ ಅಂಬುರೆ ಇದ್ದರು.
Be the first to comment