ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಬೀದರ್- ಬೆಂಗಳೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ಯೋಜನೆಯಡಿ ನಿರ್ಮಿಸಲಾದ ಮನೆಗಳು ಈಗ ಮೋಜುಗಾರರ ತಾಣಗಳಾಗಿವೆ.
ದಶಕದ ಹಿಂದೆ 5.65 ಕೋಟಿ ರೂ. ವೆಚ್ಚದಲ್ಲಿ 35 ಮನೆಗಳನ್ನು ನಿರ್ಮಿಸಲಾಗಿತ್ತು. ನಿರ್ಮಾಣಗೊಂಡಾಗಿನಿಂದ ಇಲ್ಲಿಯವರೆಗೆ ಮನೆಗಳ ಮಾರಾಟ ಮಾಡದೆ ಇಲಾಖೆ ನಿರ್ಲಕ್ಷ್ಯ ತೋರಿದ್ದರಿಂದ, ಯೋಜನೆಗೆ ವ್ಯಯಿಸಿದ ಕೋಟ್ಯಾಂತರ ರೂಪಾಯಿ ಹಣ ಹೊಳೆಯಲ್ಲಿ ಹುಣಸೆ ತೆಯ್ದ ರೀತಿ ಆಗಿದೆ.
ಇನ್ಸಿಕಾನ್ ಎಜಿ ಬೆಂಗಳೂರು ಎಂಬ ಗುತ್ತಿಗೆದಾರ ಸಂಸ್ಥೆ ಮನೆಗಳನ್ನು ನಿರ್ಮಿಸಿದ್ದು, ಸುಮಾರು 20 ವರ್ಷಗಳವರೆಗೆ ನಿರ್ವಹಣೆ ಮಾಡಬೇಕೆಂಬ ಕರಾರಿದೆ ಎಂದು ಹೇಳಲಾಗುತ್ತಿದೆ. ಆದರೆ ಮನೆ ನಿರ್ಮಾಣಗೊಂಡ ನಂತರ ಇದುವರೆಗೆ ಅತ್ತ ಗುತ್ತಿಗೆದಾರರು ಮುಖ ಕೂಡ ಹಾಕಿಲ್ಲ. ಹೀಗಾಗಿ ಮನೆಯ ಕಿಟಕಿ ಬಾಗಿಲುಗಳನ್ನು ಕಿಡಿಗೇಡಿಗಳು ಕಲ್ಲು ಎಸೆದು ಒಡೆದು ಹಾಕಿದ್ದಾರೆ.
ಮನೆಗಳ ಮುಂದೆ ಹಾಗೂ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿವೆ. ಮನೆಗಳು ಕುಡುಕರ ಅಡಗುದಾಣಗಳಾಗಿವೆ. ಅಲ್ಲದೇ ಮೋಜು ಮಸ್ತಿ ಜೂಜುಗಾರರ ಆಶ್ರಯ ತಾಣವಾಗಿದ್ದು, ಸಧ್ಯ ಅಶ್ಲೀಲ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮನೆಗಳನ್ನು ನಿರ್ಮಿಸಿದ ಸಂಸ್ಥೆ ನಿರ್ವಹಣೆಗೊಳಿಸಬೇಕು ಹಾಗೂ ಸರ್ಕಾರ ಕೂಡಲೇ ಮನೆಗಳ ಹರಾಜು ನಡೆಸಿ ಜನರ ಉಪಯೋಗಕ್ಕೆ ವಿತರಿಸಬೇಕೆಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಒತ್ತಾಯಿಸಿದ್ದಾರೆ.
Be the first to comment