ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳವನ್ನು ಕೈಬಿಡುವಂತೆ ಸರ್ಕಾರಕ್ಕೆ ಒತ್ತಾಯ.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ 2020 21 ನೇ ಸಾಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ಏಕಾಏಕಿಯಾಗಿ ಶೇಕಡಾ 25 ರಷ್ಟು ಏರಿಕೆ ಮಾಡಿರುವುದರಿಂದ ಜನಜೀವನದ ಮೇಲೆ ಸರಕಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾಜಿಕ ಹೋರಾಟಗಾರ ನಾಗರಾಜ್ ಹೊಂಗಲ್ ಹೇಳಿದರು.

ಹುನಗುಂದ ಪಟ್ಟಣದ ಜನಾದ್ರಿ ವಕೀಲರ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳ ಹಿಂದೆ ಸದಸ್ಯರು ಆಯ್ಕೆಯಾಗಿದ್ದರು ಅವರಿಗೆ ಅಧಿಕಾರವಿಲ್ಲದೆ ರಾಜ್ಯದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳ ಅಧಿಕಾರ ಇರುವುದರಿಂದ ದರವನ್ನು ಹೆಚ್ಚಳ ಮಾಡಿ ಪ್ರಕಟಣೆ ಹೊರಡಿಸಿದ್ದು,ಮೊದಲೆ ಕೊರೊನಾ ರೋಗದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರೈತಾಪಿ ವರ್ಗ ಮತ್ತು ಮತ್ತಿತರ ಜನತೆಯ ಮೇಲೆ ಮತ್ತಷ್ಟು ಭಾರವನ್ನು ಏರಿದಂತಾಗಿದೆ.

ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಂತೆ ಏಪ್ರಿಲ್ 30ರೊಳಗೆ ಪಾವತಿಸುವ ಆಸ್ತಿದಾರರಿಗೆ ಮೊದಲ ಹಂತದ ಲಾಕ್ಡೌನ್ ಗಮನದಲ್ಲಿಟ್ಟುಕೊಂಡು ಶೇಕಡಾ 5%ರಷ್ಟು ರಿಯಾಯಿತಿಯನ್ನು ನೀಡಿ ಮೇ 31ರವರೆಗೆ ಆಸ್ತಿ ತೆರಿಗೆ ಕಟ್ಟಲು ಕಾಲಮಿತಿಯನ್ನು ವಿಸ್ತರಿಸಿ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆಯನ್ನು ಹೊರಡಿಸಿತ್ತು ಆದರೆ ಸದ್ಯ ಮಹಾಮಾರಿ ಕರೋನ ವೈರಸ್ ದಿನದಿಂದ ದಿನಕ್ಕೆ ಕಬಂಧಬಾಹುಗಳನ್ನು ಹೆಚ್ಚಿಸುತ್ತಿರುವುದರಿಂದ ಎಲ್ಲ ವರ್ಗದ ಜನತೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಇದರಿಂದ ತೆರಿಗೆದಾರರಿಗೆ ಶೇಕಡ 25 ರಷ್ಟು ತೆರಿಗೆ ಹೆಚ್ಚಿರುವುದು ನುಂಗಲಾರದ ತುತ್ತಾಗಿದೆ.

ಈ ನೀತಿಯನ್ನು ಹಿಂಪಡೆದು ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರಿಸಬೇಕು ಸರ್ಕಾರ ಮೇಲ್ನೋಟಕ್ಕೆ ಶೇಕಡಾ 25 ರಷ್ಟು ತೆರಿಗೆ ಏರಿಕೆ ಮಾಡಿದೆ ಆದರೆ ವಾಸ್ತವದಲ್ಲಿ ಶೇಕಡಾ 40 ರಿಂದ 60 ರಷ್ಟು ತೆರಿಗೆ ಹೆಚ್ಚಳವಾಗಿರುತ್ತದೆ. 2005 – 06 ರಲ್ಲಿ ಸ್ವಯಂಘೋಷಿತ ತೆರಿಗೆ ಅನುಸಾರ ಕನಿಷ್ಠ ಶೇ15 ರಷ್ಟು ದರವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಹೆಚ್ಚಳಮಾಡುವ ನಿಯಮವಿದ್ದು ಅದನ್ನು ಲೆಕ್ಕಿಸದೆ ತೆರಿಗೆ ಹೆಚ್ಚಳ ಮಾಡಿದೆ ಎಂದು ಆರೋಪಿಸಿದರು. ಸರ್ಕಾರ ಕರೋನವೈರಸ್ ಭೀಕರತೆಯನ್ನು ಗಣನೆಗೆ ತೆಗೆದುಕೊಂಡು ಏಕಾಏಕಿಯಾಗಿ ಶೇಕಡ 25 ರಷ್ಟು ತೆರಿಗೆ ಹೆಚ್ಚಳದ ಕ್ರಮವನ್ನು ಕೈಬಿಡಬೇಕು ಮತ್ತು ಪ್ರಸಕ್ತ ವರ್ಷದ ತೆರಿಗೆ ಪಾವತಿಗಾಗಿ ಮೇ 31ರವರೆಗೆ ನೀಡುವ ಶೇ 5 ರ ರಿಯಾಯಿತಿಯನ್ನು 2020 ಡಿಸೆಂಬರ್ 31ರವರೆಗೆ ವಿಸ್ತರಿಸಬೇಕು. ಇದರ ಕುರಿತು ಈಗಾಗಲೇ ಮುಖ್ಯಮಂತ್ರಿ, ಪೌರಾಡಳಿತ ಸಚಿವರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ನಿರ್ದೇಶನಾಲಯದ ನಿರ್ದೇಶಕರಿಗೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಒಂದು ವೇಳೆ ತೆರಿಗೆ ಹೆಚ್ಚಳದ ಧೋರಣೆಯನ್ನು ಸರಕಾರ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ವಿ.ಡಿ.ಜನಾದ್ರಿ, ಜಿ.ವಿ.ಕಂಬಾಳಿಮಠ, ರೈತ ಮುಖಂಡ ಶ್ರೀಕೃಷ್ಣ ಜಾಲಿಹಾಳ, ಚನ್ನಬಸಪ್ಪ ಇಲಕಲ್ಲ,ವಿಜಯ ಚಿನ್ನನ್ನನವರ ಸೇರಿದಂತೆ ಅನೇಕರು ಇದ್ದರು.

Be the first to comment

Leave a Reply

Your email address will not be published.


*