ವಿಶ್ವ ಜಲದಿನ: ದಾಹವನ್ನು ನೀಗಿಸುವ ಆ ಲೋಟವನ್ನು ತುಂಬಿಸೋಣ

ಮಾ.22 ಅನ್ನು ವಿಶ್ವ ಜಲದಿನವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ, ನೀರಿನ ಮಹತ್ವ ಮತ್ತು ಅದರ ಸಂರಕ್ಷಣೆಯಲ್ಲಿ ನಮ್ಮ ಪಾತ್ರದ ಕುರಿತು ಕಿರು ಲೇಖನ.

ನೀರಿನಿಂದ ಸಮೃದ್ಧವಾದ ದೇಶಗಳಲ್ಲಿ ಬರಗಾಲ ಕಾಡುತ್ತಿರುವಾಗ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ನೀರನ್ನು ಅಲ್ಪಸ್ವಲ್ಪವಾಗಿ ಹಂಚಲಾಗುತ್ತಿರುವಾಗ, ಪ್ರವಾಹವೆಂದಿಗೂ ಆಗದ ಸ್ಥಳಗಳಲ್ಲಿ ಪ್ರವಾಹವಾಗುತ್ತಿರುವಾಗ, ಆಗಿಂದಾಗ ಚಂಡಮಾರುತ ಬೀಸುತ್ತಿರುವಾಗ, ಜಾಗತಿಕ ನೀರಿನ ಅಭಾವ ಕೇವಲ ಕುಡಿಯುವ ನೀರಿನ ಅಭಾವವಾಗಿ ಉಳಿದಿಲ್ಲ.
ಭಾರತದಲ್ಲೂ ಈ ಪರಿಸ್ಥಿತಿ ಅಧಮವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ, ವೇಗವಾದ ನಗರೀಕರಣ ಮತ್ತು ಉದ್ದಿಮೆಗಳು, ಸಂಪನ್ಮೂಲಗಳ ದುರುಪಯೋಗ, ಹೆಚ್ಚು ನೀರಿನ ಅವಶ್ಯಕತೆಯುಳ್ಳಂತಹ ಜೀವನಶೈಲಿಯಿಂದಾಗಿ ದೇಶ ನೀರಿನ ಅನಾಹುತದೆಡೆಗೆ ಸಾಗುತ್ತಿದೆ. ದೇಶದ 54% ವಿಪರೀತ ನೀರಿನ ಒತ್ತಡದಿಂದ ಬಳಲುತ್ತಿದೆ ಮತ್ತು ನೀರಿನ ಸಂಪನ್ಮೂಲಗಳು ಬತ್ತಿ ಹೋಗುತ್ತಿವೆ ಅಥವಾ ಬಲು ಕಲುಷಿತಗೊಂಡಿವೆ.
ಇದಲ್ಲದೆ ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ. ಭಾರತದ ಅರ್ಧದಷ್ಟು ಅಂತರ್ಜಲದ ಮಟ್ಟ ಕುಸಿದಿದೆ ಮತ್ತು 60%ನಷ್ಟು ಕೃಷಿ ಹಾಗೂ 85%ನಷ್ಟು ಕೌಟುಂಬಿಕ ಅವಲಂಬನೆ ಈ ಅಂತರ್ಜಲದ ಮೇಲಿದೆ. ಸರಿಯಾದ ತ್ಯಾಜ್ಯ ಸಂಸ್ಕರಣೆ ನಡೆಯದೆ , ಹೆಚ್ಚಿನ ಅಪಾಯಕಾರಿ ಕ್ರಿಮಿನಾಶಕ ಹಾಗೂ ಗೊಬ್ಬರದ ಬಳಕೆಯಿಂದ ಅಂತರ್ಜಲವು ಅಪಾರವಾಗಿ ಕಲುಷಿತವಾಗುತ್ತಿದೆ.
ಒಳ್ಳೆಯ ಸುದ್ದಿಯೆಂದರೆ, ದೇಶವನ್ನು ಭೂತಾಕಾರವಾಗಿ ಕಾಡುತ್ತಿರುವ ಈ ಸಮಸ್ಯೆಗೆ ಪ್ರಾಯೋಗಿಕವಾದ ಹಾಗೂ ಪರಿಣಾಮಕಾರಕಾವಾದ ಹುಡುಕುವುದು ಕಷ್ಟಕರವಾದ ಕೆಲಸವೇನಲ್ಲ. ಸಮಸ್ಯೆಯನ್ನು ಸಮಗ್ರವಾಗಿ ಕಾಣಬೇಕಷ್ಟೆ. 2017ರ ಬೇಸಿಗೆಯಲ್ಲಿ ನಾವು ಮಹಾರಾಷ್ಟ್ರದ ಲಾತೂರಿಗೆ ಭೇಟಿ ನೀಡಿದಾಗ, ಮಳೆ ಬೀಳದ ನಾಲ್ಕನೆಯ ವರ್ಷ ಅದಾಗಿತ್ತು ಮತ್ತು ಎಲ್ಲೆಲ್ಲೂ ಭೂಮಿ ಬರುಡಾಗಿತ್ತು.
ನಗರದ ಎಲ್ಲೆಡೆಯೂ ರಾಜ್ಯ ಸರ್ಕಾರ ಅಥವಾ ಅನೇಕ ಸಾಮಾಜಿಕ ಸಂಸ್ಥೆ ಗಳು ಕಳುಹಿಸುತ್ತಿದ್ದ ನೀರಿನ ಟ್ಯಾಂಕರ್ ಗಳನ್ನು ಕಾಣಬಹುದಿತ್ತು. ದೂರದ ರಾಜಸ್ತಾನದಿಂದ ನೀರನ್ನು ತರಲು ವಿಶಿಷ್ಟ ಟ್ರೇನ್ ಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಹಿಂಸಾಚಾರಕ್ಕೆ ಹೆದರಿ ಲಾತೂರಿನ ರಾಜ್ಯ ಆಡಳಿವು , ನೀರಿನ ಶೇಖರಣಾ ಘಟಕಗಳ ಸುತ್ತಲೂ ಐದು ಜನರಿಗಿಂತಲೂ ಹೆಚ್ಚು ಜನ ಸೇರಬಾರದೆಂಬ ಆದೇಶವನ್ನು ಹೊರಡಿಸಿತ್ತು.

ಸ್ವಯಂಸೇವಕರ ಸಂಕಲ್ಪ

ನಮ್ಮ ಸ್ವಯಂಸೇವಕರು ಮಂಜರ ನದಿಯ ಪುನಶ್ಚೇತನ ಗೊಳಿಸಲು ನಿರ್ಧರಿಸಿದರು. ತಮ್ಮ ಶ್ರಮದಾನದಿಂದ ಮತ್ತು ಸಂಯೋಜಕ ಪ್ರಯತ್ನಗಳಿಂದ ಸ್ಥಳೀಯ ಗ್ರಾಮಸ್ಥರನ್ನು, ನಾಗರಿಕ ಸಮಾಜದ ಸದಸ್ಯರನ್ನು, ಸ್ಥಳೀಯ ಸರ್ಕಾರವನ್ನು ,ಕಾರ್ಪೊರೇಟ್ ಸಂಸ್ಥೆಗಳನ್ನು ಮತ್ತು ತಾಂತ್ರಿಕ ತಜ್ಞರನ್ನು ಒಂದಾಗಿ ಸೇರಿಸಿ ಪರಿಸ್ಥಿತಿಯ ಸಮೀಕ್ಷೆ ನಡೆಸಿ, ಸಮಗ್ರವಾದ ವೈಜ್ಞಾನಿಕ ಯೋಜನೆಯನ್ನು ಮಾಡಿ, ಕೂಡಲೆ ಕಾರ್ಯ ಪ್ರವೃತ್ತರಾದರು.
ಹಗಲು ಇರುಳು ಶ್ರಮಿಸಿ, ವೈವಿಧ್ಯಮಯವಾದ ಸ್ವಯಂಸೇವಕರ ಗುಂಪು , ಒಂಭತ್ತು ತಿಂಗಳು ಮಾಡಬೇಕಾದ ಕಾರ್ಯವನ್ನು ಮೂರೇ ತಿಂಗಳಲ್ಲಿ ಮಾಡಿ ಮುಗಿಸಿದರು. ಈ ಯೋಜನೆಯಿಂದಾಗಿ ಆ ಪ್ರದೇಶದಲ್ಲಿ ದಾಖಲೆಯ ಮಳೆಯಾಯಿತು . ಐದು ವರ್ಷಗಳ ನಂತರ ಮಂಜರ

ನದಿಯಲ್ಲಿ ನೀರು ಕಂಡು ಬಂದಿತು. ಒಣಗಿ ಹೋಗಿದ್ದ ನದಿಯಲ್ಲಿ ಈಗ ಮೀನುಗಳೂ ಸಹ ಬಂದಿವೆ. ಸಮುದಾಯದ, ದಾನಿಗಳ ಮತ್ತು ಸ್ಥಳೀಯ ಸರ್ಕಾರದ ಸಹಾಯದಿಂದ ಸ್ಥಳೀಯ ವೃಕ್ಷಗಳಾದ ಆಲದ ಮರ, ಬೇವು, ವಟವೃಕ್ಷ, ಮಾವು, ಹಲಸು, ಜಾಮೂನು ಮರಗಳನ್ನು ನದಿಯ ದಡದಲ್ಲಿ ನೆಡಲಾಗಿದೆ.

ನದಿಗಳ ಪುನರುಜ್ಜೀವನಕ್ಕೆ ಒತ್ತು

2013ರಿಂದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಸಾವಿರಾರು ಜಲದಮೂಲಗಳನ್ನು ಹಾಗೂ ಬತ್ತಿ ಹೋಗಿರುವ ನದಿಗಳನ್ನು ಭಾರತಾದ್ಯಂತ ಪುನರುಜ್ಜೀವಿಸುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೆರಳದ 35 ನದಿಗಳ ಪುನಶ್ಚೇತನ ಕಾರ್ಯ ವಿಜ್ಞಾನಿಗಳ, ನಾಗರಿಕ ಸಮಾಜದ, ಕಾರ್ಪೊರೇಟ್ಗಳ ಹಾಗೂ ಸರ್ಕಾರದ ಸಹಾಯದಿಂದ ಮಾಡಲಾಗುತ್ತಿದೆ.

ಈ ಪ್ರಯತ್ನದಿಂದ ಅಪಾರ ಪರಿಣಾಮ ಉಂಟಾಗುತ್ತಿದೆ . ಈ ಪ್ರದೇಶದ ಸಮುದಾಯಗಳು ಹೆಚ್ಚಿನ ಅಂತರ್ಜಲದ ಮಟ್ಟಕ್ಕೆ ಸಾಕ್ಷಿಯಾಗಿವೆ. ಅನೇಕ ವರ್ಷಗಳಿಂದ ಬತ್ತಿ ಹೋಗಿದ್ದ ಬಾವಿಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ.ಕಡಿಮೆ ಫಸಲಿಗೇ ಒಗ್ಗಿ ಹೋಗಿದ್ದ ರೈತರಿಗೆ ಈಗ ಅಪಾರ ಬೆಳೆ ಸಿಗುತ್ತಿದೆ. ಆತ್ಮಹತ್ಯೆ ಯ ಬಗ್ಗೆ ಆಲೋಚಿಸುತ್ತಿದ್ದವರು ಈಗ ಹೆಚ್ಚಿನ ಆದಾಯವುಳ್ಳ ವಿಶ್ವಾಸದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಅನೇಕ ಪ್ರದೇಶಗಳಲ್ಲಿ ಬಲು ದೂರ ನಡೆದು ನೀರನ್ನು ತರುತ್ತಿದ್ದ ಮಹಿಳೆಯರು ಈಗ ಸರಾಗವಾಗಿ ಬದುಕುತ್ತಿದ್ದಾರೆ.

ವೈಜ್ಞಾನಿಕ ಯೋಜನೆಗಳ ಅನುಷ್ಠಾನ

ನದಿಗಳ ಪುನಶ್ಚೇತನಕ್ಕಾಗಿ ವ್ಯವಸ್ಥಿತವಾದ, ವೈಜ್ಞಾನಿಕವಾದ ಯೋಜನೆಗಳನ್ನು ನಿರೂಪಿಸಲಾಯಿತು. ರೀಚಾರ್ಜ್ ಕಟ್ಟಡ ಗಳ ನಿರ್ಮಾಣದಿಂದ, ಸ್ಥಳೀಯ ಗಿಡಗಳನ್ನೇ ವ್ಯಾಪಕವಾಗಿ ನೆಟ್ಟು ಕಾಡುಗಳಿಗೆ ಮರುಜೀವ ನೀಡಿ, ಸುಸ್ಥಿರವಾದ ಕೃಷಿಯಲ್ಲಿ ರೈತರಿಗೆ ತರಬೇತಿಯನ್ನು ನೀಡಲಾಯಿತು. ಭೂ ವಿಜ್ಞಾನಿಗಳ, ಪರಿಸರ ತಜ್ಞರ, ನೀರಿನ ಭೂವಿಜ್ಞಾನಗಳ, ಉಪಗ್ರಹದಿಂದ ಮಾಹಿತಿಯನ್ನು ನೀಡುವ ತಜ್ಞರ ಮತ್ತು ರೈತರ ತಂಡವು ಗ್ರಾಮೀಣ ಸಮುದಾಯದ ನಾಯಕರೊಡನೆ ಕೆಲಸ ಮಾಡಿ, ಜನರಿಗೆ ಶುದ್ಧ ನೀರನ್ನು ಒದಗಿಸಲಾಗುತ್ತಿದೆ ಮತ್ತು ನದಿಗಳು ವರ್ಷವಿಡೀ ಹರಿಯುವಂತೆ ಶ್ರಮಿಸುತ್ತಿದ್ದೇವೆ.

 

ಸ್ಥಳೀಯ ಸಮುದಾಯಗಳು ಈ ಸವಾಲಿನ ಬಗ್ಗೆ ಹೇಗೆ ಹೆಚ್ಚಾಗಿ ತಿಳಿದುಕೊಂಡಿದ್ದಾರೆ ಮತ್ತು ನೀರನ್ನು ಮಿತವಾಗಿ ಬಳಸುತ್ತಿದ್ದಾರೆ ಮತ್ತು ನೀರನ್ನು ಕಡಿಮೆಯಾಗಿ ಬಳಸುವಂತಹ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಯತ್ನಗಳ ಹಿಂದೆ ಪ್ರಮುಖವಾಗಿ ಯುವಕರ ನಾಯಕತ್ವ ಹಾಗೂ ಸಮುದಾಯದ ನಾಯಕತ್ವಕ್ಕೆ ನಾವು ನೀಡಿದ ಪೋಷಣೆಯೇ ಕಾರಣವಾಗಿದೆ. ಇದರಿಂದ ಮುಲಭೂತ ಹಂತದಲ್ಲಿ ಅದ್ಭುತ ಫಲಿತಾಂಶವನ್ನು ಕಾಣುತ್ತಿದ್ದೇವೆ.

8

ಜಲ ಜೀವನಾಧಾರ

ನೀರು ಜೀವನದ ಆಧಾರ. ನಮ್ಮ ದೇಹದ 70% ನೀರಿನಿಂದ ಕೂಡಿದೆ. ನೀರು ಎಲ್ಲೆಡೆಯೂ ಇದೆ. ಭೂಮಿಯನ್ನು ಆಳವಾಗಿ ಅಗೆದರೂ, ಮೇಲೆ ಆಕಾಶದಲ್ಲಿ ಮೋಡಗಳಲ್ಲೂ ನೀರು ಸಿಗುತ್ತದೆ. ವಾತಾವರಣದಲ್ಲಿ ಹಬೆಯ ರೂಪದಲ್ಲಿದೆ. ನೀರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತದ ಒಂದು ಹೇಳಿಕೆಯು, ” ಜನರಿಗೆ ನೀರೇ ದೈವ. ನೀರಿಲ್ಲದ ದೈವವಿಲ್ಲ” ಎಂದು ಹೇಳುತ್ತದೆ. ಕುಂಟಗಳ, ಕೆರೆಗಳ ಮತ್ತು ನದಿಗಳ ಸಹಜ ಸಂಪನ್ಮೂಲವನ್ನು ಸಂರಕ್ಷಿಸುವುದು ಅನಿವಾರ್ಯವಾಗಿದೆ.ಜಗತ್ತಿನ ಪ್ರಾಚೀನ ನಾಗರಿಕತೆಗಳಲ್ಲಿ , ಅದರಲ್ಲೂ ಭಾರತದಲ್ಲಿ ನೀರನ್ನು ಸಂರಕ್ಷಿಸಿ, ಪೂಜಿಸುವುದು ಪದ್ಧತಿಯಾಗಿದೆ. ಹಿಂದಿನ ಕಾಲದಲ್ಲಿ ಒಬ್ಬ ರಾಜನ ಹಿರಿಮೆಯನ್ನು, ಆತ ಕಟ್ಟಿಸಿದ ಕುಂಟೆಗಳ ಸಂಖ್ಯೆಯಿಂದ ನಿರ್ಧರಿಸಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆಯೂ ಸಹ ಭಾರತವು ತನ್ನ ನೀರಿನ ಸಂಪನ್ಮೂಲಗಳನ್ನು ಅದ್ಭುತವಾಗಿ ನಿಭಾಯಿಸುತ್ತಿತ್ತು.
ದಕ್ಷಿಣ ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಕಲ್ಯಾಣಿಯಿತ್ತು ಮತ್ತು ಅವುಗಳ ಪರಸ್ಪರ ಸಂಬಂಧಪಟ್ಟಿದ್ದವು. ಈ ಕಲ್ಯಾಣಿಗಳು ನೀರನ್ನು ಶೇಖರಿಸುತ್ತಿದ್ದವು ಮತ್ತು ಅಂತರ್ಜಲದ ನೀರಿನ ಮಟ್ಟವನ್ನು ಸದಾ ಮೇಲ್ಮಟ್ಟದಲ್ಲಿ ಇಡುತ್ತಿದ್ದವು. ಪ್ರತಿಯೊಂದು ದೇವಸ್ಥಾನದಲ್ಲೂ ಒಂದು ಕಲ್ಯಾಣಿಯಿತ್ತು ಮತ್ತು ಬರದ ಕಾಲದಲ್ಲಿ ಅದು ಕುಡಿಯುವ ನೀರಿನ ಮೂಲವಾಗಿತ್ತು. ಈ ವ್ಯವಸ್ಥೆಯನ್ನು ಸ್ಥಳೀಯ ನಾಯಕರು ಬೆಳೆಸಿ ಪೋಷಿಸಿದರು ಮತ್ತು ಸ್ಥಳೀಯ ಸಮುದಾಯ ಇದರ ಯಾಜಮಾನವನ್ನು ವಹಿಸಿ ಸಂರಕ್ಷಿಸುತ್ತಿದ್ದರು. ಇಂದು ನೀರಿನ ಸಂಪನ್ಮೂಲಗಳ ಜನರ ಯಜಮಾನತ್ವದ ಭಾವನೆ ಹೊರಟುಹೋಗಿದೆ. ಪ್ರಕೃತಿಯ ಬಗ್ಗೆ ಈ ಸ್ವಕೀಯ ಭಾವನೆಯನ್ನು ಮರುತರಿಸಬೇಕಾಗಿದೆ. ನಮ್ಮ ನದಿಗಳನ್ನು ಶುದ್ಧವಾಗಿಟ್ಟುಕೊಳ್ಳುವುದಕ್ಕೆ ಒತ್ತು ನೀಡಬೇಕು. ಧರ್ಮದ ಹೆಸರಿನಲ್ಲಿ ನೀರಿನಲ್ಲಿ ಪದಾರ್ಥಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ಪರಿಸರ ಹಾನಿಯನ್ನು ಉಂಟು ಮಾಡುವ ಎಲ್ಲಾ ಪದ್ಧತಿಗಳನ್ನೂ ಕೂಡಲೆ ನಿಲ್ಲಿಸಬೇಕು.

ನದಿ ಸಂರಕ್ಷಣೆ ನಮ್ಮ ರಾಷ್ಟ್ರೀಯ ಆದ್ಯತೆ

  • ಪ್ರಕೃತಿ ಸಂರಕ್ಷಣೆಯನ್ನು ನಮ್ಮ ರಾಷ್ಟ್ರೀಯ ಚಳವಳಿಯಾಗಿ ಮಾಡಬೇಕು ಮತ್ತು ನದಿಗಳ ಸಂರಕ್ಷಣೆ ಯೇ ನಮ್ಮ ರಾಷ್ಟ್ರೀಯ ಆದ್ಯತೆಯಾಗಬೇಕು. ನದಿಗಳ ಪುನಶ್ಚೇತನಕ್ಕೆ ಸರ್ಕಾರವೂ ಕೈಜೋಡಿಸುತ್ತಿರುವುದು ಬಹಳ ಸಂತಸದ ಸಂಗತಿ. ಸರ್ಕಾರವು ನದಿಗಳ ಪುನಶ್ಚೇತನಕ್ಕಾಗಿ ಅನೇಕ ಯೋಜನೆಗಳನ್ನು ಮಾಡುತ್ತಿದೆ ಮತ್ತು ಹೊಸ ನಿಯಮಗಳನ್ನು ಜಾರಿಗೆ ತರುವ ಯತ್ನದಲ್ಲಿದೆ. ಇವುಗಳಲ್ಲಿ ದೇಶದ ನದಿಗಳ ಜೋಡಣೆಯೂ ಒಂದು. ನದಿಗಳ ಜೋಡಣೆಯಿಂದ ನದಿಯ ನೀರನ್ನು ಉತ್ತಮವಾಗಿ ನಿಭಾಯಿಸಬಹುದು ಮತ್ತು ಪ್ರವಾಹವನ್ನು ತಡೆಗಟ್ಟಬಹುದು. ಆದರೆ ಇದರ ಮುಖ್ಯ ಅನಾನುಕೂಲವೆಂದರೆ ಮಲ, ಕೈಗಾರಿಕೆಗಳ ತ್ಯಾಜ್ಯ ಮತ್ತು ನೀರಿನೊಳಗೆ ಎಸೆಯಲಾದ ಕಲುಷಿತವಾದ ಪದಾರ್ಥ ಗಳೆಲ್ಲವೂ ಒಂದು ನದಿಯಿಂದ ಮತ್ತೊಂದು ನದಿಗೆ ಹರಡುವುದು. ಆದ್ದರಿಂದ ನದಿಗಳನ್ನು ಜೋಡಿಸುವ ಮೊದಲು ನೀರನ್ನು ಪ್ರದೂಷಣೆಗಾಗಿ ಪರೀಕ್ಷಿಸಬೇಕು ಮತ್ತು ಈ ನದಿಗಳಲ್ಲಿ ಯಾವ ತ್ಯಾಜ್ಯವೂ ಪ್ರವೇಶಿಸದಂತೆ ಮತ್ತು ಕಸವನ್ನು ಎಸೆಯದಂತೆ ಎಚ್ಚರ ವಹಿಸಬೇಕು.

    ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರ ಮನ್ರೇಗ ಯೋಜನೆಯಡಿ ಪ್ರಾಕೃತಿಕ ಸಂಪನ್ಮೂಲಗಳ ನಿಭಾವಣೆಗೆ ಒತ್ತೆ ನೀಡಿದೆ. ಗಂಗಾ ನದಿಯ ಪುನರುಜ್ಜೀವಕ್ಕಾಗಿ ಪ್ರಧಾನ ಮಂತ್ರಿ ಗಳೆ ಸ್ವಯಂ ನಮಾಮಿ ಗಂಗೆ ಯೋಜನೆಯ ಮುಂದಾಳತ್ವವನ್ನು ವಹಿಸಿದ್ದಾರೆ. ಆದರೆ ಮನ್ರೇಗ ಅಥವಾ ನಮಾಮಿ ಗಂಗೆ ಯೋಜನೆಗಳಲ್ಲಿ ಇತರ ಭಾಗೀದಾರರೂ ಪಾಲ್ಗೊಂಡರೆ ಮಾತ್ರ ಯಶಸ್ವಿಯಾಗುತ್ತದೆ. ಕರ್ನಾಟಕದಲ್ಲಿ ಮತ್ತು ತಮಿಳುನಾಡಿನಲ್ಲಿ ನಾವು ಸರ್ಕಾರಕ್ಕೆ ಸಮುದಾಯ ವನ್ನು ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿ ಸಹಾಯಕರಾಗಿದ್ದೇವೆ ಮತ್ತು ಈ ರೀತಿಯ ಯೋಜನೆಗಳಿಂದ 30,000 ಜನರಿಗೆ ಉದ್ಯೋಗಾವಕಾಶ ದೊರೆತಿದೆ.

ಅಂತರ್ಜಲ ಮಟ್ಟದಲ್ಲಿ ಕುಸಿತ

ಅದೇ ರೀತಿಯಾಗಿ ಅನೇಕ ರಾಜ್ಯ ಸರ್ಕಾರಗಳು ವ್ಯಾಪಕವಾಗಿ ಕಾಡನ್ನು ಬೆಳೆಸಲು ಶ್ರಮಿಸುತ್ತಿವೆ. ಜಲಾನಯನ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವುದು ಸಹಾಯಕವಾದರೂ, ಸರಿಯಾದ, ನೀರಿನ ಸ್ನೇಹಿಯಾದ ಗಿಡಗಳನ್ನು ಅಆಯ್ದುಕೊಳ್ಳುವುದು ಮುಖ್ಯ. ಇಲ್ಲವಾದರೆ, ಭಾರತವಿಡೀ ಅಕೆಷಿಯ ಗಿಡಗಳನ್ನು ನೆಟ್ಟು ಉಂಟಾದ ಆಪತ್ತಿನಂತಾಗುತ್ತದೆ. ಅಕೇಷಿಯ ಈ ಭೂಮಿಯ ಗಿಡವಲ್ಲದಿದ್ದರೂ ಬೇಗ ಬೆಳೆದು ಹಸಿರನ್ನು ಹಬ್ಬಿಸುತ್ತದೆ. ಆದರೆ ಈ ಗಿಡ ಅಪಾರವಾದ ನೀರನ್ನು ಹೀರಿಕೊಳ್ಳುತ್ತದೆ. ಈ ಗಿಡಗಳನ್ನು ನೆಟ್ಟ ನಂತರವೇ ನಮ್ಮ ಅಂತರ್ಜಲದ ಮಟ್ಟ ಕುಸಿಯಲಾರಂಭಿಸಿದ್ದು.

  • ನಮಗೆ ಬೇಕಾದದ್ದು ರಾಷ್ಟ್ರೀಯ ನೀರಿನ ನಿಭಾವಣಾ ಯೋಜನೆ ಮತ್ತು ಇದು ಸಮಗ್ರವಾಗಿಯೂ ಇರಬೇಕು ಮತ್ತು ವೈಜ್ಞಾನಿಕವಾಗಿರಬೇಕು. ನಾಗರಿಕ ಸಮಾಜ, ಕಾರ್ಪೊರೇಟ್ ಗಳು, ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಕಲಾಕಾರರು, ವಿದ್ಯಾರ್ಥಿಗಳು, ರೈತರು, ಸರ್ಕಾರೇತರ ಸಂಸ್ಥೆಗಳು ಮತ್ತು ಪ್ರತಿಯೊಬ್ಬರೂ ಈ ಯೋಜನೆಯ ಭಾಗವಾಗಬೇಕು. ಪರಿಸರವನ್ನು ಅತ್ಯಧಿಕವಾಗಿ ಕಲುಷಿತಗೊಳಿಸುವ ಒಂದು ವಿಷಯವೆಂದರೆ ಮಾನವನ ಲೋಭ. ಅಲ್ಪ ಲಾಭಕ್ಕಾಗಿ ಇರುವ ಜ್ವರತೆಯಿಂದಾಗಿ, ಇಡೀ ಭೂಮಿ ವಾಸ್ತವವಾಗಿ ಒಂದೇ ಜೀವ ಮತ್ತು ನದಿಗಳೇ ಭೂಮಿಯ ಜೀವಪೋಷಕಗಳು ಎಂಬ ಸತ್ಯಕ್ಕೆ ಕುರುಡಾಗುವಂತೆ ಮಾಡಿದೆ. ಈ ಜೀವಪೋಪಕಗಳು ಆರೋಗ್ಯದಿಂದಿದ್ದಾಗ ಮಾತ್ರ ನಮ್ಮ ಜೀವನಗಳು ಸಮೃದ್ಧವಾಗಲು ಸಾಧ್ಯ.

Be the first to comment

Leave a Reply

Your email address will not be published.


*