ಅಂಬಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ’

ಬೆಂಗಳೂರು: ‘ರಾಜ್ಯದಲ್ಲಿ ಸರ್ಕಾರಗಳು ಬದಲಾಗುತ್ತಿದ್ದರೂ, ಅಂಬಿಗರ ಸಮುದಾಯದ ಮಡಿಲಿಗೆ ಹರಿಯುತ್ತಿರುವ ಸವಲತ್ತುಗಳು ಹನಿಯಷ್ಟು ಮಾತ್ರ. ನಮ್ಮ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ಸಮರ್ಪಕವಾಗಿ ದೊರೆಯುವಂತಾಗಬೇಕು’ ಎಂದು ರಾಜ್ಯ ಅಂಬಿಗರ ಚೌಡಯ್ಯ ಅಕಾಡೆಮಿ ಕಾರ್ಯದರ್ಶಿ ಎ.ಎಸ್.ಮೇಲಕಾರ ಒತ್ತಾಯಿಸಿದರು.

ನಗರದ ಸಚಿವಾಲಯ ಕ್ಲಬ್‌ನಲ್ಲಿ ಭಾನುವಾರ ‘ಕರ್ನಾಟಕ ಟೋಕರೆಕೋಲಿ, ಕಬ್ಬಲಿಗ-ಅಂಬಿಗರ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಮನಾಥ ಕೋವಿಂದ್‌ ಅವರನ್ನು ಗುರುತಿಸಿ ರಾಷ್ಟ್ರಪತಿ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸಮುದಾಯಕ್ಕೆ ಗೌರವ ದೊರೆತಿದೆ. ಆದರೆ, ರಾಜ್ಯದಲ್ಲಿ ಸರ್ಕಾರಗಳು ಇಂದಿಗೂ ನಮ್ಮವರನ್ನು ತುಳಿಯುತ್ತಲೇ ಇವೆ. ಸಂಘಟನೆ ಹಾಗೂ ಹೋರಾಟದ ಕೊರತೆಯೇ ಸಮುದಾಯದ ಅಭಿವೃದ್ಧಿಗೆ ಕೊಡಲಿ ಪೆಟ್ಟು ಬೀಳಲು ಪ್ರಮುಖ ಕಾರಣ’ ಎಂದು ಹೇಳಿದರು.

‘ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಗಂಗಾಮತ ಸಮುದಾಯವರು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸಿಗುವ ಸವಲತ್ತುಗಳು ಪಡೆಯಲು ಈ ಸಮುದಾಯಗಳೂ ಅರ್ಹತೆ ಹೊಂದಿದೆ

ಹಾಗಾಗಿ ಈ ಸಮುದಾಯಗಳನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇಲ್ಲವಾದಲ್ಲಿ ನಮ್ಮ ಹಕ್ಕುಗಳನ್ನು ಹೋರಾಟಗಳ ಮೂಲಕ ಪಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಶರಣಪ್ಪ ಮಾನೇಗಾರ, ‘ನಾವು ಅನ್ಯ ಸಮಾಜದವರಿಂದ ತುಳಿತಕ್ಕೆ‌ ಒಳಗಾದವರಲ್ಲ.‌ ನಮ್ಮ‌ ಸಮುದಾಯವರ ಕುತಂತ್ರಗಳಿಂದಾಗಿಯೇ ಹಿಂದೆ ಉಳಿದಿದ್ದೇವೆ. ಇದಕ್ಕೆ ಬೇರೆ ಸಮುದಾಯವನ್ನು ದೂಷಿಸುವುದು ಸರಿಯಲ್ಲ’ ಎಂದರು.

Be the first to comment

Leave a Reply

Your email address will not be published.


*