ಜೀಲ್ಲಾ ಸುದ್ದಿಗಳು
ಬೀದರ ಮೇ 23 (ಅಂಬಿಗ ನ್ಯೂಸ್ ): ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬಾಕಿ ಮೊತ್ತ ಪಾವತಿಸುವ ಕುರಿತಂತೆ ಚರ್ಚಿಸಲು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿನ ವಿವಿಧ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ.22ರಂದು ಸಭೆ ನಡೆಯಿತು.
2020-21ನೇ ಸಾಲಿನ ಹಂಗಾಮಿನ ಕಬ್ಬು ಬೆಳೆದ ರೈತರು ಸರಬರಾಜು ಮಾಡಿರುವ ಕಬ್ಬಿನ ಬಾಕಿ ಮೊತ್ತ ಕುರಿತಂತೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಚರ್ಚಿಸಿದರು.
2020-21ನೇ ಸಾಲಿನ ಹಂಗಾಮಿನ ಕಬ್ಬು ಬೆಳೆದ ರೈತರ ಬಾಕಿ ಮೊತ್ತವನ್ನು ಪೂರ್ಣವಾಗಿ ರೈತರಿಗೆ ಪಾವತಿಸಿದ್ದಾಗಿ ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.
2020-21ನೇ ಸಾಲಿನ ಹಂಗಾಮಿಗೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪಾವತಿ ಮಾಡಬೇಕಾದ ಒಟ್ಟು ಮೊತ್ತದಲ್ಲಿ ಈಗ 5 ಕೋಟಿಯನ್ನು ಈ ತಿಂಗಳ ಅಂತ್ಯದವರೆಗೆ ಪಾವತಿ ಮಾಡುವುದಾಗಿ ಸಭೆಗೆ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಮತ್ತು ಬೀದರ ಕಿಸಾನ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು. ಈ ತಿಂಗಳ ಅಂತ್ಯದವರೆಗೆ ತಮ್ಮ ಕಾರ್ಖಾನೆಯಿಂದ ಒಟ್ಟು ಮೊತ್ತದಲ್ಲಿ ಈಗ 4 ಕೋಟಿ ರೂ. ಪಾವತಿಸುವುದಾಗಿ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಸಭೆಗೆ ತಿಳಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಬೀದರ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ರೈತರಿಗೆ ಪಾವತಿ ಮಾಡಬೇಕಾದ ಮೊತ್ತವನ್ನು ಇತರೆ ಬ್ಯಾಂಕುಗಳಿಂದ ವ್ಯವಸ್ಥೆ ಮಾಡಿಕೊಂಡು ಸಂಬಂಧಿಸಿದ ರೈತರಿಗೆ ಮೇ ಮಾಹೆಯೊಳಗಡೆನೇ ಹಣ ಪಾವತಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಬರುವ ಜೂನ್ 15ದರೊಳಗೆ ರೈತರ ಸಂಪೂರ್ಣ ಬಾಕಿ ಮೊತ್ತವನ್ನು ಪಾವತಿಸುವುದಾಗಿ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಮತ್ತು ವ್ಯವಸಾಪಕ ನಿರ್ದೇಶಕರು ಸಭೆಗೆ ತಿಳಿಸಿದರು. ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಕಾಪು ದಾಸ್ತಾನು ಮತ್ತು ಜೆಸ್ಕಾಂನಿಂದ ಬಾಕಿ ಮೊತ್ತ ಕೂಡ ಬರಬೇಕಾದ ಕಾರಣ ರೈತರಿಗೆ ಹಣ ಪಾವತಿಸಲು ವಿಳಂಬವಾಗುತ್ತಿದೆ ಎಂದು ಸಕ್ಕರೆ ಕಾರ್ಖಾನೆಯವರು ಇದೆ ವೇಳೆ ತಿಳಿಸಿದರು.
Be the first to comment