ಜೀಲ್ಲಾ ಸುದ್ದಿಗಳುಬೀದರ ಮೆ.23 (ಅಂಬಿಗ ನ್ಯೂಸ್ ): ಮಾಸ್ಕ ಹಾಕದೇ ಇದ್ದಲ್ಲಿ, ಸಾಮಾಜಿಕ ಅಂತರ ಪಾಲನೆ ಮಾಡದಿದ್ದಲ್ಲಿ, ಕಂಡಕಂಡಲ್ಲಿ ಉಗುಳಿದಲ್ಲಿ ಅಂತವರಿಗೆ ಯಾವುದೇ ಮುಲಾಜಿಲ್ಲದೇ ಕಡ್ಡಾಯ ದಂಡ ವಿದಿಸಿ, ಚುರುಕು ಮುಟ್ಟಿಸುವ ಕಾರ್ಯವನ್ನು ಮೇ.24ರಿಂದಲೇ ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ತಿಳಿಸಿದರು.
ಮೇ.22 ರಂದು ವೈದ್ಯಾಧಿಕಾರಿಗಳು ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೊವಿಡ್-19 ಕರೋನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಇದಕ್ಕೆ ಸಂಬಂಧಿಸಿದ ನಿಯಮಗಳ ಪಾಲನೆ ಮಾಡಬೇಕು ಎಂದು ತಿಳಿಸಿದಾಗ್ಯೂ ಬಹುತೇಕ ಜನರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಲಂ 144 ನಿಷೇಧಾಜ್ಞೆ ಜಾರಿ ಇರುವ ಅವಧಿಯಲ್ಲೂ ಕೆಲವರು ಗುಂಪಾಗಿ ಸೇರುವುದು ಕಂಡು ಬರುತ್ತಿದೆ. ಕೆಲ ಔಷಧಿ ಅಂಗಡಿಗಳಲ್ಲಿರುವವರೇ ಮಾಸ್ಕ ಹಾಕುತ್ತಿಲ್ಲ. ಹೀಗೆ ಸಾರ್ವಜನಿಕರು ನಿಯಮಗಳ ಪಾಲನೆ ಮಾಡದಿದ್ದಲ್ಲಿ ಕರೋನಾ ವೈರಾಣು ತೀವ್ರ ಹರಡಲಿದೆ. ನಿಯಮ ಪಾಲನೆ ಮಾಡದವರ ವಿರುದ್ಧ ದಂಡ ವಿಧಿಸುವುದನ್ನು ಕಡ್ಡಾಯಗೊಳಿಸುವುದು ಈಗ ಅನಿವಾರ್ಯವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಕೋವಿಡ್-19 ಜನಜಾಗೃತಿ: ಮಾಸ್ಕ ಬಳಕೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವ ಕಾರ್ಯವು ಜಿಲ್ಲಾದ್ಯಂತ ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸಲಹೆ ಮಾಡಿದರು. ಮೊದಲ ಹಂತದಲ್ಲಿ ಪುರಸಭೆ, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಜಿಲ್ಲೆಯ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಜನಜಾಗೃತಿ ಕಾರ್ಯಕ್ರಮ ಆರಂಭವಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಆ ಬಳಿಕ ಎಲ್ಲಾ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಕರೋನಾ ಹಿನ್ನೆಲೆಯ ಜನಜಾಗೃತಿ ಕಾರ್ಯ ಜಿಲ್ಲಾದ್ಯಂತ ತೀವ್ರಗೊಳ್ಳಬೇಕು ಎಂದು ತಿಳಿಸಿದರು.
Be the first to comment