ದೇಶದಲ್ಲಿ ಪಶು ಸಂಪತ್ತು ವೃದ್ಧಿಸಲಿದೆ : ಪ್ರಭು ಚವ್ಹಾಣ್

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ ಮೇ 15 (ಅಂಬಿಗ ನ್ಯೂಸ್ ):-ದೇಶದಲ್ಲಿರುವ ಒಟ್ಟು 53 ಕೋಟಿ ಪಶುಸಂಪತ್ತು ಉತ್ತಮ ಆರೋಗ್ಯವನ್ನು ಹೊಂದಿರಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಗೆ ಕೋಟಿ ನಮನಗಳು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದ್ದಾರೆ.
ದೇಶದಲ್ಲಿನ ಎಲ್ಲ ಪಶುಗಳು ಆರೋಗ್ಯದಿಂದ ಇರಬೇಕೆಂದರೆ ಲಸಿಕೆ ಹಾಕಿಸುವುದು ಅತೀ ಮುಖ್ಯ ಇದರ ಸಲುವಾಗಿ 13,343 ಕೋಟಿ ರೂ. ನಿಗದಿ ಮಾಡಿದ್ದು ಕುರಿ, ಎಮ್ಮೆ ಹಂದಿ, ಆಡು, ಮೇಕೆಗಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು ಕೃಷಿ ಪರ ಕೇಂದ್ರ ಸರ್ಕಾರದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಹಾಗೂ ಗರ್ಭಪಾತವನ್ನು ತಡೆಗಟ್ಟುವಲ್ಲಿ ಶೇ.100 ಲಸಿಕೆ ಹಾಕುವುದರ ಮೂಲಕ ಪಶು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದಂತಾಗುತ್ತದೆ.
ಅಲ್ಲದೇ ಪಶುಸಂಗೋಪನೆಯ ಮೂಲಸೌಕರ್ಯ ಅಭಿವೃದ್ಧಿಗೆ 15,000 ಕೋಟಿ ರೂ. ನೀಡಲಾಗಿದ್ದು, ಪಶು ಆಹಾರ ಉತ್ಪಾದನೆ, ಡೈರಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸಚಿವರಾದ ಚವ್ಹಾಣ್ ಅವರು ತಿಳಿಸಿದ್ದಾರೆ.

ಕುರಿಗಾಹಿಗಳ ಕೈ ಹಿಡಿದ ಮುಖ್ಯಮಂತ್ರಿ
ಯಡಿಯೂರಪ್ಪನವರಿಗೆ ಅಭಿನಂದನೆ: ಪ್ರಭು ಚವ್ಹಾಣ್

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರೈತರಿಗೆ, ಕುರಿಗಾಹಿಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು ಬೋನಸ್ ನೀಡಿದಂತಾಗಿದೆ ಎಂದು ಸಚಿವರಾದ ಪ್ರಭು ಚವ್ಹಾಣ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ ಕುರಿ ಹಾಗೂ ಮೇಕೆಗಳು ಆಕಸ್ಮಿಕ ಅಪಘಾತದಲ್ಲಿ ಹಾಗೂ ರೋಗದಿಂದ ಸತ್ತರೆ ಪರಿಹಾರ ನೀಡಬೇಕೆಂದು ಸಿಎಂ ಅವರಿಗೆ ಕೋರಿಕೊಳ್ಳಲಾಗಿತ್ತು. ಅಲ್ಲದೆ ಇತ್ತೀಚೆಗೆ ಕೆಲವು ಜಿಲ್ಲೆಗಳಲ್ಲಿ ಕುರಿ ಸಾಕಾಣಿಕೆದಾರರಿಂದ ಇದೇ ಕೋರಿಕೆ ಕೇಳಿ ಬಂದಿತ್ತು. ಆಗಲೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಗಿತ್ತು. ಇಂದು 500 ಕೋಟಿ ರೂ.ಗಳ ಪ್ಯಾಕೇಜ್‌ನಲ್ಲಿ ಕುರಿಗಾಹಿಗಳಿಗೆ ನೈಸರ್ಗಿಕ ವಿಕೋಪದಲ್ಲಿ ಕುರಿ/ಮೇಕೆಗಳು ಸತ್ತರೆ 5000 ರೂ. ಪರಿಹಾರ ಧನ ಘೋಷಣೆ ಮಾಡಿದ್ದಕ್ಕೆ ರಾಜ್ಯದ ಎಲ್ಲ ಕುರಿ ಹಾಗೂ ಮೇಕೆ ಸಾಕಾಣಿಕೆದಾರರ ಪರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.
ಅಲ್ಲದೆ ಪಶುಗಳಿಗೆ ಆಹಾರದಲ್ಲಿ ಮೆಕ್ಕೆ ಜೋಳದ ಪಾತ್ರ ಬಹುದೊಡ್ಡದಾಗಿದ್ದು, ಮೆಕ್ಕೆ ಜೋಳ ಬೆಳೆಗಾರರಿಗೂ ಈ ಸಂಕಷ್ಟದ ಸಮಯದಲ್ಲಿ 5000 ರೂ. ಘೋಷಣೆ ಮಾಡಿದ್ದು ಪರೋಕ್ಷವಾಗಿ ಪಶುಪಾಲಕರಿಗೆ ಹಾಗೂ ಪಶುಗಳಿಗೆ ಸಹಾಯ ಮಾಡಿದಂತಾಗಿದೆ. ಇದರಿಂದ 10 ಲಕ್ಷ ಮೆಕ್ಕೆ ಜೋಳ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಲಿದೆ. ಕಷ್ಟದ ಸಮಯದಲ್ಲಿ ಸಮಯೋಚಿತವಾಗಿ ಪ್ಯಾಕೇಜ್ ಘೋಷಣೆ ಮಾಡಿದ ರೈತಪರ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*