ಕಳ್ಳಭಟ್ಟಿ ಹಾವಳಿ ತಡೆಗಟ್ಟಲು ಕಟ್ಟುನಿಟ್ಟಿನ  ಕ್ರಮವಹಿಸಿ: ಡಾ.ಹೆಚ್.ಆರ್.ಮಹಾದೇವ್

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

 ಕ್ರೈ-ಫೋಕಸ್

ಬೀವರ ಪೊಲೀಸ್, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ಸಹಕಾರ ಪಡೆದು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಳ್ಳಭಟ್ಟಿ ಹಾವಳಿಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಹೇಳಿದರು.

ಏ.25ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಕಳ್ಳಭಟ್ಟಿ ಸಾರಾಯಿ ಹಾಗೂ ಮಿಶ್ರ ಮದ್ಯದ ತಯಾರಿಕೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸ್ಥಾಪಿಸಲಾದ ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಬೀದರ ಜಿಲ್ಲೆಯಲ್ಲಿ ಮದ್ಯಪಾನ ನಿಷೇಧದ ದುರ್ಬಳಕೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪಡೆದು ಜಿಲ್ಲೆಯ ಕೆಲವು ಕಡೆ ಕಳ್ಳಭಟ್ಟಿ ತಯಾರಿಕೆ ಮಾಡುತ್ತಿದ್ದಾರೆ ಎನ್ನುವ ದೂರುಗಳಿವೆ. ಆದ್ದರಿಂದ ಇಂತಹ ಕಳ್ಳಭಟ್ಟಿ ಮತ್ತು ಅಕ್ರಮ ಹೆಂಡ/ಮಿಶ್ರ ಮದ್ಯದ ತಯಾರಿಕೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ ಅಬಕಾರಿ ಇಲಾಖೆಯ ನಿಯಂತ್ರಣ ಕೊಠಡಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು.  ಸಾರ್ವಜನಿಕರಿಗೆ ಮಾಹಿತಿ ನೀಡಲು ಅನುಕೂಲವಾಗುವಂತೆ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳನ್ನು ಕೊಡಬೇಕು ಎಂದು ಸೂಚಿಸಿದರು.

ಅಬಕಾರಿ ಉಪ ಆಯುಕ್ತರಾದ ಈರಣ್ಣ ಬಾಗೇವಾಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೀದರ ಅಬಕಾರಿ ಇಲಾಖೆಯಿಂದ ಹಲವಾರು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದೇವೆ. ಜಿಲ್ಲಾದ್ಯಂತ ಬಂದ ದೂರುಗಳನ್ವಯ ಹಾಗೂ ಸ್ವಯಂ ಪ್ರೆರೀತ ಅಬಕಾರಿ ದಾಳಿಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಬಕಾರಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ವಿವಿಧ ವಲಯ/ತಾಲ್ಲೂಕು ವ್ಯಾಪ್ತಿಗಳಲ್ಲಿ ದಾಳಿಗಳನ್ನು ಕೈಗೊಂಡು ಮೊಕದ್ದಮೆಗಳನ್ನು ದಾಖಲಿಸಿ, ಮದ್ಯ, ಬೀಯರ್, ಕಳ್ಳಭಟ್ಟಿ ಸಾರಾಯಿ, ಸೇಂದಿ ಅಲ್ಲದೇ ದ್ವಿಚಕ್ರ ವಾಹನವನ್ನು ಜಪ್ತು ಪಡಿಸಿಕೊಂಡಿದ್ದಾರೆ.

ಜಿಲ್ಲೆಯ ಅಬಕಾರಿ ಇಲಾಖೆ ಹಾಗೂ ರವೀಂದ್ರ ಡಿಸ್ಟಿಲರಿ ಪ್ರೆ.ಕಂ, ಬೀದರ ಕೆಮಿಕಲ್ ಮತ್ತು ಫಾರ್ಮಾ ಸಂಘಟನೆಗಳ ಸಹಯೋಗದಲ್ಲಿ  700 ಲೀ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ತಯಾರಿಸಿ ಬೀದರ ಆರೋಗ್ಯ ಇಲಾಖೆಗೆ ನೀಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ಎಲ್.ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಬೀದರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಅನಿಲಕುಮಾರ ಪೋದ್ದಾರ, ಬೀದರ, ಹುಮನಾಬಾದ್, ಭಾಲ್ಕಿ, ಔರಾದ್, ಬಸವಕಲ್ಯಾಣದ ಅಬಕಾರಿ ನಿರೀಕ್ಷಕರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*