ಮುದ್ದೇಬಿಹಾಳ:
ಕೆಬಿಜೆೆಎನ್ಎಲ್ ಕಾಲುವೆ ವಿಭಾಗದ ಇಇ ಎಂ.ಆರ್.ಹಲಗತ್ತಿ ಅವರು ಕೊರೊನಾ ಪರಿಸ್ಥಿತಿಯ ದುರ್ಲಾಭ ಪಡೆದು ಸರಕಾರದ ನಿಯಮ ಉಲ್ಲಂಘಿಸಿ ಕೆಲ ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಕೋಟಿಗಟ್ಟಲೆ ಹಣ ಲೂಟಿ ಮುಂದಾಗಿದ್ದು ಇವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಲುಕಿನ ಪ್ರಥಮ ದರ್ಜೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಎಎಲ್‌ಬಿಸಿ ವಿಭಾಗದಲ್ಲಿ ರೋಡ್‌ಬ್ರಿಜ್, ಕ್ಯಾನಲ್‌ಲೈನಿಂಗ್ ಸೇರಿ ೯ ಕಾಮಗಾರಿಗಳಿಗೆ ಮಾ.೨೬ರಂದು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಟೆಂಡರ್‌ನ ಕೊನೇದಿನವನ್ನು ಕೊರೊನಾ ಹಿನ್ನೆಲೆ ಮೇ ೪ರವರೆಗೂ ಮುಂದೂಡಲಾಗಿದೆ. ಅದರಂತೆ ಏ.೨೦ರಂದು ಅರ್ಜಿ ಸಲ್ಲಿಕೆಗೆ ಕೊನೇದಿನವಾಗಿದ್ದ ಎಸ್‌ಸಿಪಿ, ಟಿಎಸ್‌ಪಿ ಟೆಂಡರ್‌ನ್ನೂ ಮುಂದೂಡುವ ನಿರೀಕ್ಷೆ ಇತ್ತು. ಆದರೆ ಇಇ ಏ.೨೦ರಂದೇ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಿದ್ದು ಗೊತ್ತಾಯಿತು. ಹೀಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿದ್ದ ಲೈನ್ ಆಫ್ ಕ್ರೆಡಿಟ್ (ಬ್ಯಾಂಕರ್ ಸರ್ಟಿಫಿಕೇಟ್) ತರಲು ವಿಜಯಪುರ ನಗರದಲ್ಲಿನ ಬ್ಯಾಂಕ್‌ಗೆ ಹೋಗಲು ಕೊರೊನಾ ಪೊಜಿಟಿವ್ ಹಿನ್ನೆಲೆ ಚಕ್‌ಪೋಸ್ಟ್ ಸಿಬ್ಬಂದಿ ಅವಕಾಶ ನೀಡದ್ದರಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಈ ಪ್ರಕ್ರಿಯೆಯನ್ನೂ ಮುಂದೂಡುವಂತೆ ಮನವಿ ಸಲ್ಲಿಸಿದರೂ ಇಇ ಪರಿಗಣಿಸಲಿಲ್ಲ. ತಮಗೆ ಬೇಕಾದವರಿಂದ ಅರ್ಜಿ ಹಾಕಿಸಿಕೊಂಡು ಏ.೨೦ರಂದೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿದ್ದಾರೆ. ಇದು ಏಕಪಕ್ಷೀಯವಾಗಿದ್ದು ಜಿಲ್ಲೆಯ ಎಸ್ಸಿ, ಎಸ್ಟಿ ಮೀಸಲಾತಿಯವರೂ ಸೇರಿ ಬಹಳಷ್ಟು ಗುತ್ತಿಗೆದಾರರಿಗೆ ಅನ್ಯಾಯವಾದಂತಾಗಿದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡರು.
ಇಲಾಖೆಯ ಸಚಿವರು, ಹಿರಿಯ ಅಧಿಕಾರಿಗಳು ಈ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸದಿದ್ದಲ್ಲಿ ಕೆಬಿಜೆಎನ್ನೆಲ್ ಕಚೇರಿ ಮುಂದೆ ಧರಣಿ ನಡೆಸುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಗುತ್ತಿಗೆದಾರರಾದ ಮಲ್ಲಿಕಾರ್ಜುನ ಮದರಿ, ರಾಯನಗೌಡ ತಾತರಡ್ಡಿ, ಪ್ರೇಮಸಿಂಗ್ ಚವ್ಹಾಣ, ಎಚ್.ಎಂ.ನಾಯಕ, ವೈ.ಕೆ.ಹಳೇಮನಿ, ಎಚ್.ಎಂ.ಬೊಮ್ಮನಳ್ಳಿ, ಎಂ.ಎ.ಗೂಳಿ, ರಾಜು ಕೊಂಗಿ, ಶ್ರೀಶೈಲ ಮರೋಳ, ಸುರೇಶಗೌಡ ಪಾಟೀಲ, ಬಿ.ಎಂ.ಇಸ್ಲಾಂಪುರ, ಎಚ್.ಟಿ.ಕುರಿ, ಎಚ್.ಬಿ.ಸಂಗಮ, ಬಸನಗೌಡ ಪಾಟೀಲ, ಎಂ.ಎಸ್.ಜಲಪುರ, ಜೆ.ಟಿ.ಇಲಕಲ್ಲ, ಸಂತೋಷ ಲಮಾಣಿ, ಬಿ.ಆರ್.ಯರಝರಿ, ವಾಲು ಲಮಾಣಿ, ಮಾರುತಿ ಹೊಸೂರ, ಮಲ್ಲಣ್ಣ ಕೆಸರಟ್ಟಿ ತಿಳಿಸಿದ್ದಾರೆ.
Be the first to comment