1283 ವಾಹನ ಜಪ್ತಿ, 43 ಎಫ್‍ಐಆರ್, 7.71 ಲಕ್ಷ ರೂ. ದಂಡ ಲಾಕ್‍ಡೌನ್ ಉಲ್ಲಂಘಿಸಿದ 31 ಜನರ ಬಂಧನ -ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಸುದ್ದಿ: ಕೊರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‍ಡೌನ್ ಆದೇಶವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ.

ಇಲ್ಲಿಯವರೆಗೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ 31 ಜನರನ್ನು ಬಂಧಿಸಲಾಗಿದ್ದು, ಒಟ್ಟು 43 ಎಫ್.ಐ.ಆರ್ ದಾಖಲಾಗಿವೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್-19 ವೈರಾಣು ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತವು ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಿರುವ ಒಟ್ಟು 16 ಚೆಕ್‍ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿ ಅನವಶ್ಯಕವಾಗಿ ಓಡಾಡುತ್ತಿದ್ದವರ ಒಟ್ಟು 1,283 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ 7,71,100 ರೂ. ದಂಡ ವಿಧಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಕೋವಿಡ್-19 ಪಿ-45 ಪಾಸಿಟಿವ್ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನಲಾದ 20 ಜನರನ್ನು ನಿಗದಿತ ಯಾದಗಿರಿ ತಾಲ್ಲೂಕಿನ ಸೂಪರ್ ಕ್ವಾರಂಟೈನ್ ಸೆಂಟರ್‍ನಲ್ಲಿ ಪ್ರತ್ಯೇಕವಾಗಿರಿಸಿ, ಅವರ ಗಂಟಲಿನ ದ್ರವ ಗಳನ್ನು ಪರೀಕ್ಷಿಸಲಾಗಿ ನಕಾರಾತ್ಮಕ ಫಲಿತಾಂಶ ಬಂದಿವೆ. ಇನ್ನು ನಿಜಾಮುದ್ದೀನ್ ತಬ್ಲೀಘಿ ಮಾರ್ಕಾಜ್‍ದಿಂದ ಹಿಂದಿರುಗಿದ ಜಿಲ್ಲೆಯ 5 ಜನರ ಗಂಟಲಿನ ದ್ರವಗಳನ್ನು 2 ಬಾರಿ ಪರೀಕ್ಷಿಸಲಾಗಿ ನಕಾರಾತ್ಮಕ ಫಲಿತಾಂಶ ಬಂದಿರುತ್ತವೆ ಎಂದು ಅವರು ತಿಳಿಸಿದರು.

*ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ಬಾಕಿ*:

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಕೋವಿಡ್-19 ಪಿ-227 ಪೀಡಿತ ಮಗುವಿನ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾದ ವ್ಯಕ್ತಿಯನ್ನು ನಿಗದಿತ ಯಾದಗಿರಿ ಆಸ್ಪತ್ರೆಯಲ್ಲಿ ಹಾಗೂ ಈ ವ್ಯಕ್ತಿಯ ಸಂಪರ್ಕದಲ್ಲಿದ್ದ 15 ಜನರನ್ನು ಸುರಪೂರ ತಾಲ್ಲೂಕಿನ ಕ್ವಾರಂಟೈನ್ ಸೆಂಟರ್‍ನಲ್ಲಿ ಅವಲೋಕನೆಗಾಗಿ ಇರಿಸಲಾಗಿದೆ. ಇವರೆಲ್ಲರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಲಬುರಗಿಗೆ ರವಾನಿಸಲಾಗಿದ್ದು, ವರದಿ ಬರಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 5 ಜ್ವರ ತಪಾಸಣಾ ಕೇಂದ್ರ ತೆರೆಯಲಾಗಿದೆ ಮತ್ತು 6 ಆರ್‍ಆರ್‍ಟಿ ತಂಡಗಳ ಮೂಲಕ ಜ್ವರ ತಪಾಸಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಜ್ವರ ತಪಾಸಣೆ ಕೇಂದ್ರಗಳಲ್ಲಿ ಒಟ್ಟು 17,170 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಉಸಿರಾಟದ ತೊಂದರೆ ಮತ್ತು ಜ್ವರ ಇರುವವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಕಳಿಸಲಾಗುತ್ತಿದೆ. ಶಂಕಿತ ವ್ಯಕ್ತಿಗಳ ಮಾದರಿಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆ, ಸುರಪುರ ಮತ್ತು ಭೀಮರಾಯನಗುಡಿಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಜ್ವರ ತಪಾಸಣಾ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆ ಸರ್ವೇ ಸಮಯದಲ್ಲಿ ಉಸಿರಾಟದ ತೊಂದರೆ ಮತ್ತು ತೀವ್ರತರದ ಜ್ವರ ಇದ್ದವರನ್ನು ಈ ಮೇಲಿನ ಕೇಂದ್ರಗಳಿಗೆ ಕಳುಹಿಸಿ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡುವುದು ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

*ಮುಂಜಾಗ್ರತಾ ಕ್ರಮವಾಗಿ 850 ಬೆಡ್ ವ್ಯವಸ್ಥೆ*:

ಯಾದಗಿರಿ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಯಾವುದೇ ಪಾಸಿಟಿವ್ (ಸಕಾರತ್ಮಕ) ಪ್ರಕರಣಗಳು ಕಂಡುಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸುರಪುರದ ನಿಷ್ಠಿ ಇಂಜಿನೀಯರಿಂಗ್ ಕಾಲೇಜಿನಲ್ಲಿ 200 ಹಾಸಿಗೆಯುಳ್ಳ ಪರಿಶೀಲನಾ ಕ್ವಾರಂಟೈನ್ ಸೆಂಟರ್, ಅರಕೇರಾ(ಕೆ) ವಸತಿ ನಿಲಯದಲ್ಲಿ 50 ಹಾಸಿಗೆಯುಳ್ಳ ಪರಿಶೀಲನಾ ಕ್ವಾರಂಟೈನ್ ಸೆಂಟರ್, ಯಾದಗಿರಿ ಏಕಲವ್ಯ ಶಾಲೆಯಲ್ಲಿ 250 ಹಾಸಿಗೆಯುಳ್ಳ ಪರಿಶೀಲನಾ ಐಸೊಲೇಷನ್ ಸೆಂಟರ್, ಭೀಮರಾಯನಗುಡಿ ಕೃಷಿ ವಿದ್ಯಾಲಯದಲ್ಲಿ 250 ಹಾಸಿಗೆಯುಳ್ಳ ಪರಿಶೀಲನಾ ಐಸೊಲೇಷನ್ ಸೆಂಟರ್ ಮತ್ತು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಯುಳ್ಳ ಕೋವಿಡ್-19 ಆಸ್ಪತ್ರೆಯನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಾದ್ಯಂತ ಬಿ.ಪಿ.ಎಲ್ ಮತ್ತು ಎ.ಎ.ವೈ ಕಾರ್ಡ್ ಹೊಂದಿರುವ ಪಡಿತರ ಫಲಾನುಭಾವಿಗಳಿಗಾಗಿ 2 ತಿಂಗಳುಗಳ ಆಹಾರ ಧಾನ್ಯವನ್ನು ಬಿಡುಗಡೆ ಮಾಡಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ.85.67ರಷ್ಟು ಜನರಿಗೆ ವಿತರಿಸಲಾಗಿರುತ್ತದೆ. ನಾಗರಿಕರಿಗೆ ಅಗತ್ಯ ಇರುವ ಸರಕುಗಳನ್ನು ಖರೀದಿಸಲು ಬೆಳಿಗ್ಗೆ 4ರಿಂದ ಸಂಜೆ 4ರವರೆಗ ಕಾಲಾವಕಾಶ ನೀಡಲಾಗಿದೆ. ಪ್ರತಿದಿನ 10,000 ಅರ್ಧ ಲೀಟರ್ ಹಾಲಿನ ಪ್ಯಾಕೆಟ್‍ಗಳನ್ನು ಸ್ಲಂ/ ಕಾರ್ಮಿಕರು/ಕಾಲೋನಿಗಳು/ ಕ್ಯಾಂಪ್‍ಗಳಲ್ಲಿ ವಾಸಿಸುತ್ತಿರುವ ಬಡಜನರಿಗೆ ವಿತರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆಯನ್ನು ಜಂಟಿ ತನಿಖಾ ತಂಡದಿಂದ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

*ಕಡ್ಡಾಯವಾಗಿ ಮುಖಗವಸು ಧರಿಸಿ*:

ಜಿಲ್ಲೆಯ ನಾಗರಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಮನೆಯಿಂದ ಹೊರಬಂದಾಗ ತಪ್ಪದೇ ಮುಖಗವಸುಗಳನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಗ್ರಾಹಕರ ಮಧ್ಯ ಸಾಮಾಜಿಕ ಅಂತರ ಕಾಪಾಡುವುದು ಅಂಗಡಿ ಮಾಲೀಕರದ್ದು ಕೂಡ ಜವಾಬ್ದಾರಿಯಾಗಿದೆ ಎಂದು ಅವರು ಸಲಹೆ ನೀಡಿದರು.

ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಮತ್ತು ಮುಖಗವಸು ಧರಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತೆರಿಗೆ ಸುರಕ್ಷತಾ ಕಿಟ್‍ಗಳನ್ನು ನೀಡಲಾಗಿದೆ. ವೈದ್ಯಕೀಯ ಸೇವೆಗಳು, ಕೃಷಿ ಚಟುವಟಿಕೆ, ಮೀನುಗಾರಿಕೆ, ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದರೆ, ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸುವುದು ಕಡ್ಡಾಯ ಎಂದು ಅವರು ತಿಳಿದರು.

*ಅನುದಾನ ಕೊರತೆ ಇಲ್ಲ*:

ಕೊರೊನಾ ವೈರಸ್ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿರುವ ವಿಪತ್ತು ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಿ.ಡಿ ಖಾತೆಯಲ್ಲಿ 18 ಕೋಟಿ ರೂ. ಇದ್ದು, 3.5 ಕೋಟಿ ರೂ. ಖರ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜನರಿಗೆ ಕೊರೊನಾ ವೈರಸ್ ಬಗ್ಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕೊರೊನಾ ವೈರಸ್ ಟ್ರ್ಯಾಕ್ ಮಾಡಲು ಸರ್ಕಾರ “ಆರೋಗ್ಯ ಸೇತು” ಮೊಬೈಲ್ ಆ್ಯಪ್‍ನ್ನು ಬಿಡುಗಡೆ ಮಾಡಿದೆ. ಸದರಿ ಆರೋಗ್ಯ ಸೇತು ಆ್ಯಪ್ ಅನ್ನು ಮೊಬೈಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ:08473-253950, ವಾಟ್ಸ್‍ಆ್ಯಪ್ ಸಂಖ್ಯೆ:9449933946 ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯುವಂತೆ ಜಿಲ್ಲಾಧಿಕಾರಿಗಳು ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಅವರು ಮಾತನಾಡಿ, ಜಿಲ್ಲೆಯ ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತುರ್ತು ಸೇವೆಗಳ ವಾಹನ ಮತ್ತು ಸರಕು ಸಾಗಣೆ ವಾಹನಗಳನ್ನು ಮಾತ್ರ ಚೆಕ್‍ಪೋಸ್ಟ್‍ಗಳಲ್ಲಿ ಬಿಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಕ್ಕಾಗಿ ಅಂತರ್‍ಜಿಲ್ಲೆ ಪಾಸ್ ಇದ್ದವರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಜಿಲ್ಲೆಯಾದ್ಯಂತ ಪ್ರತಿದಿನ ಅಬಕಾರಿ ದಾಳಿಗಳನ್ನು ಕೂಡ ನಡೆಸಲಾಗುತ್ತಿದೆ. ಇನ್ನು ಅನವಶ್ಯಕವಾಗಿ ಮನೆಯಿಂದ ಹೊರಬಂದವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಈ ವಾಹನಗಳನ್ನು ಲಾಕ್‍ಡೌನ್ ಮುಗಿಯುವವರೆಗೂ ಮರಳಿಸುವುದಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*