ಹೊರಗಡೆಯಿಂದ ಯಾರೇ ಬಂದರೂ ಅವರಿಗೆ ಮನೆಯೊಳಗಡೆ ಸೇರಿಸಬೇಡಿ: ಜಿಲ್ಲಾಧಿಕಾರಿ ಜನರಲ್ಲಿ ಮನವಿ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಹಳ್ಳಿ ಮನೆ ಮನೆಗೆ   ವಿಷಯ ತಲುಪಲು ಡಂಗೂರ ಹೊಡೆಸಿ

ಬೀದರ, ಹೊರಗಡೆಯಿಂದ ಯಾರೇ ಬಂದರೂ ಅವರನ್ನು ಮನೆಯೊಳಗಡಿ ಸೇರಿಸಬೇಡಿ ಎಂದು ಜನರಲ್ಲಿ ತಿಳಿವಳಿಕೆ ಮೂಡಿಸಲು ಜಿಲ್ಲಾದ್ಯಂತ ಎಲ್ಲ ಹಳ್ಳಿಗಳಲ್ಲಿ ಈ ಕೂಡಲೇ ಡಂಗೂರ ಹೊಡೆಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಎಲ್ಲ ತಹಸೀಲ್ದಾರರಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.18ರಂದು ಎಲ್ಲ ತಾಲೂಕುಗಳ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.
ಈ ವಿಷ ವೈರಾಣು ಕರೋನಾದಿಂದ ಒಬ್ಬರು ಸೋಂಕಿತರಾದರೆ ಅದು ಮನೆಯಲ್ಲಿನ ಎಲ್ಲರಿಗೂ, ಜೊತೆಗೆ ಅವರನ್ನು ಸಂಪರ್ಕಿಸಿದವರಿಗೂ ಹರಡಿ ಇಡೀ ಸಮೂಹಕ್ಕೆ ವ್ಯಾಪಿಸಲಿದೆ. ಈ ಗಂಭೀರ ವಿಷಯವನ್ನು ಜಿಲ್ಲೆಯ ಎಲ್ಲ ಜನರೂ ಅರಿಯಬೇಕು. ಜಿಲ್ಲೆಯಲ್ಲಿನ ಯಾವುದೇ ಹಳ್ಳಿಗಳಿಗೆ ಹೊರಗಿನಿಂದ ಯಾರಾದರು ಬಂದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲೇಬೇಕು. ಹೊರಗಿನಿಂದ ಬರುವವರಿಗೆ ಊರೊಳಗೆ ಪ್ರವೇಶ ನೀಡಕೂಡದು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಜಿಲ್ಲೆಯ ಎಲ್ಲ ಜನರಲ್ಲಿ ಮನವಿ ಮಾಡಿದರು.
ಕಳೆದೆರಡು ದಿನದಲ್ಲಿ ಹೊರಗಡೆಯಿಂದ ಬಸವಕಲ್ಯಾಣಕ್ಕೆ ಮಹಾರಾಷ್ಟ್ರ ದಿಂದ 42, ತೆಲಂಗಾಣದಿಂದ 37 ಮತ್ತು ಇನ್ನೀತರೆ 12 ಜನರು ಬಂದಿದ್ದಾರೆ. ಔರಾದ್ ತಾಲೂಕಿಗೆ ಹೊರಗಡೆಯಿಂದ 106 ಜನರು ಬಂದಿದ್ದಾರೆ. ಮುಂಬೈ ಮತ್ತು ಪುಣೆಯಿಂದ ನಾಲ್ಕು ಜನ ಮತ್ತು ಹೈದ್ರಾಬಾದ್‌ನಿಂದ 30 ಜನರು ಹುಮಾನಾಬಾದ್ಗೆ ಬಂದಿದ್ದಾರೆ. ಪುಣೆಯಿಂದ ಒಬ್ಬರು ಮತ್ತು ಬಾಂಬೆಯಿಂದ ಮೂವರು ಭಾಲ್ಕಿಗೆ ಬಂದಿದ್ದಾರೆ. ಇದು ಆಶಾ ಕಾರ್ಯಕರ್ತೆಯರು ನೀಡಿದ ಮಾಹಿತಿ ಎಂದು ಎಲ್ಲ ತಹಸೀಲ್ದಾರರು ತಿಳಿಸಿದರು.  
ಹೊರಗಡೆಯಿಂದ ಯಾರೂ ಕೂಡ ಜಿಲ್ಲೆಯನ್ನು ಪ್ರವೇಶಿಸಬಾರದೆಂದೇ ಲಾಕ್‌ಡೌನ್ ಆದೇಶ ಜಾರಿ ಮಾಡಿದೆ. ಆದಾಗ್ಯೂ ಹೊರಗಿನವರು ಜಿಲ್ಲೆಯನ್ನು ಪ್ರವೇಶಿಸಿದರೆ ಹೇಗೆ? ಇದಕ್ಕೆ ಕಡಿವಾಣ ಹಾಕಬಾರದೇ ನೀವು? ಏಕೆ ಸುಮ್ಮನಿದ್ದೀರಿ? ಎಂದು ಜಿಲ್ಲಾಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿರುವ ತಹಸೀಲ್ದಾರ, ತಾಪಂ ಇಓ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ನೊಟೀಸ್ ಜಾರಿಗೆ ಆದೇಶಿಸಿದರು.
ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲನೆಗೆ ಕ್ರಮ ವಹಿಸಲು ಮಾನ್ಯ ಮುಖ್ಯಮಂತ್ರಿಗಳು ಎಲ್ಲ ಜಿಲ್ಲಾಧಿಕಾರಿಗಳಿಗೆ ಪ್ರತಿನಿತ್ಯ ಕರೆ ಮಾಡಿ ತಿಳಿಸುತ್ತಿದ್ದಾರೆ. ಮೇಲಿಂದ ಮೇಲೆ ವಿಡಿಯೋ ಸಂವಾದ ನಡೆಸಿ ಕಟ್ಟುನಿಟ್ಟಿನ ಕ್ರಮ ವಹಿಸಲು ತಮಗೆ ತಿಳಿಸಲಾಗಿದೆ. ಪಕ್ಕದ ಮಹಾರಾಷ್ಟ್ರ ತೆಲಂಗಾಣದಲ್ಲಿ ಪರಿಸ್ಥಿತಿ ಸರಿ ಇಲ್ಲ. ಹೀಗಿರುವಾಗ ಹೊರಗಿನ ಜನರು ಜಿಲ್ಲೆಯೊಳಗಡೆ ಪ್ರವೇಶ ಮಾಡಲೇಬಾರದು. ತಮ್ಮ ತಮ್ಮ ತಾಲೂಕುಗಳಲ್ಲಿ ಚೆಕ್‌ಪೋಸ್ಟಗಳನ್ನು ಇನ್ನೂ ಬಿಗಿಗೊಳಿಸಲು ಕ್ರಮ ವಹಿಸಬೇಕು. ಮನೆಮನೆ ಸಮೀಕ್ಷೆ ಕಾರ್ಯವನ್ನು ಸರಿಯಾಗಿ ನಡೆಸುವಂತೆ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರಾಥಮಿಕ ಮತ್ತು ಎರಡನೇ ಸಂಪರ್ಕಕ್ಕೆ ಬಂದವರ ಗಂಟಲು ದ್ರವ ಮತ್ತು ರಕ್ತದ ಮಾದರಿಯನ್ನು ಕೂಡಲೇ ಪರೀಕ್ಷೆಗೆ ಕಳುಹಿಸಿ ಬಾಕಿ ಇರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಬಸವಕಲ್ಯಾಣದ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಒಲ್ಡ್ ಸಿಟಿನಲ್ಲಿ ಕೆಲವರಿಗೆ ಅಗತ್ಯ ವಸ್ತುಗಳು ಲಭ್ಯವಾಗುತ್ತಿಲ್ಲ ಎನ್ನುವ ದೂರುಗಳಿದ್ದು, ಈ ಬಗ್ಗೆ ನೋಡಿಕೊಳ್ಳಲು ಮತ್ತು ಬೇಡಿಕೆ ಬರುವ ಎಲ್ಲ ಕಡೆಗಳಲ್ಲಿ ಸಮರ್ಪಕ ಆಹಾರಧಾನ್ಯಗಳ ಪೂರೈಕೆಗೆ ಎಲ್ಲ ರೀತಿಯ ಸುವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಿಸಿ ಅವರು ಇದೆ ವೇಳೆ ಸಿಎಂಸಿ ಕಮಿಷನರ್ ಬಸಪ್ಪ ಅವರಿಗೆ ಸೂಚಿಸಿದರು.
ಊಟಕ್ಕೆ ಆಹಾರಧಾನ್ಯ ಸಿಗುತ್ತಿಲ್ಲ ಎಂದು ಕಡುಬಡವರು ಕೇಳುತ್ತಿರುವಾಗ, ಆಹಾರ ಧಾನ್ಯಗಳ ಅಕ್ರಮ ಮಾರಾಟ ನಡೆಯುತ್ತಿದೆ ಎಂದು ಎಲ್ಲಾದರು ಒಂದೇ ಒಂದು ದೂರು ಬಂದಲ್ಲಿ ಸಂಬಂಧಿಸಿದವರ ಮೇಲೆ ಅತೀ ಕಠೀಣ ಕಾನೂನು ಕ್ರಮ ಜರುಗಿಸಲಾಗುವುದು. ತಹಸೀಲ್ದಾರ ಸೇರಿದಂತೆ ಯಾವ ಅಧಿಕಾರಿಗಳೂ ಇಂತಹ ಹೀನ ಕೆಲಸಕ್ಕೆ ಅವಕಾಶ ಮಾಡಿಕೊಡಬಾರದು. ಇಂತಹ ಕೃತ್ಯದ ಬಗ್ಗೆ ಎಚ್ಚರಿಕೆಯಿಂದ ಗಮನಿಸಬೇಕು. ಎಲ್ಲ ತಹಸೀಲ್ದಾರರು ಹದ್ದಿನ ಕಣ್ಣಿಡಬೇಕು ಎಂದು ಡಿಸಿ ಅವರು ತಿಳಿಸಿದರು.
ವಿಡಿಯೋ ಸಂವಾದದಲ್ಲಿ ಜಿಪಂ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಭಂವರಸಿಂಗ್ ಮೀನಾ, ಡಿಎಚ್‌ಓ ಡಾ.ವಿ.ಜಿ.ರೆಡ್ಡಿ, ಬ್ರಿಮ್ಸ್ ಡೈರೆಕ್ಟರ್ ಶಿವಕುಮಾರ ಹಾಗೂ ಇತರರು ಇದ್ದರು.

Be the first to comment

Leave a Reply

Your email address will not be published.


*