ಸಾಹಿತ್ಯ
–ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.
ಸೊಳ್ಳೆಗಿಂತ್ಲೂ ಸಣ್ ಜೀವಿ
ಇಟ್ಟ ಕೊಳ್ಳಿಗೇ….
ಗಿಜಿ ಗಿಜಿಗುಡ್ತಾ ಗೀಜ್ಗನ ಗೂಡ್ನಂತಿದ್ದ
“ನಗರ”ಗಳೀಗ ಗರ ಬಡ್ಕೊಂಡು
ಮೌನದ ಕೌದಿ ಹೊದ್ ಮಲ್ಗ್ಯಾವ…
ರಸ್ತೆಗಳೋ ಬಟಾಬಯ್ಲಾಗಿ
ಸ್ಮಶಾನ ರುದ್ರನಾಲಂಗಿಸಿ
(ಅ)ನಾಗರೀಕತೇನ ಹಂಗಿಸಿ
ನರ ಪ್ರಾಣಿಗಳ್ನ ಬಂಧಿಸ್ಯಾವ
ಜೂ ನಲ್ಲಿ ಬಂಧಿಯಾಗಿರೋ
ಕಾಡ್ ಪ್ರಾಣಿ ನಗ್ಲಿಕತ್ಯಾವ…!?
ಇಲ್ನೋಡ್ರಪ್ಪೋ…………..!?
ಹಳ್ಳ ಹರ್ದು ಬಳ್ಳ ತುಂಬೀದ್ರೂ
ಬಿಂಕ-ಬಡಿವಾರಿಲ್ದ ನಮ್ “ಹಳ್ಳಿಗಳೋ”
ಸದಾ ಪ್ರಶಾಂತತೆಯ ಪ್ರತಿರೂಪ
ಜೀವ ಕಳೆಯ ನಂದಾದೀಪ
ಭಾರತ ಸಂಸ್ಕೃತಿ ಪ್ರತಿಬಿಂಬಾಗ್ಯಾವ…
“ಕೆಟ್ಟು ಪಟ್ಣ ಸೇರು” ಗಾದೆ ಬದ್ಲಾಗೇತಿ;
‘ಕೆಟ್ಟ ಪಟ್ಣ ಯಾಕ್ ಸೇರ್ತೀ’ !?
ಬೇಂದ್ರೆ ಅಜ್ಜನ್ ಕವಿತಾ ಸಾಲು;
“ನಮ್ಮೂರು ಹಳ್ಳಿ ನಮಗ ಪಾಡ
ಯಾತಕವ್ವಾ ಹುಬ್ಬಳ್ಳಿ ಧಾರವಾಡ”
ಖರೇಗಂದ್ರೂ ಖರೇ ಐತ್ನೋಡಾ!?
Be the first to comment