ಜೀಲ್ಲಾ ಸುದ್ದಿಗಳು
ಅಂಬಿಗ ನ್ಯೂಸ್ ಸುದ್ದಿ:ನೋವೆಲ್ ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಒಟ್ಟು 52 ಮಾದರಿಗಳ ವರದಿ ಈಗಾಗಲೇ ನೆಗೆಟಿವ್ ಬಂದಿದ್ದು, ಜಿಲ್ಲೆಯಲ್ಲಿ ಸೋಮವಾರ ಸಂಗ್ರಹಿಸಲಾದ 22 ಹೊಸ ಮಾದರಿಗಳು ಸೇರಿದಂತೆ 40 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಕೇರಾ (ಕೆ) ಹಾಸ್ಟೆಲ್ನ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ 19 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್ನಲ್ಲಿ 15 ಜನರನ್ನು ಪತ್ಯೇಕವಾಗಿರಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಖಚಿತ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿರುವುದಿಲ್ಲ. ವೈರಸ್ ತಡೆಗೆ ಜಿಲ್ಲಾಡಳಿತವು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡಬಾರದು ಅವರು ಮನವಿ ಮಾಡಿದ್ದಾರೆ.
*ನಿಜಾಮುದ್ದೀನ್ ಸಭೆಗೆ ಹೋದವರ ಮಾಹಿತಿ ನೀಡಿ*:
ನಿಜಾಮುದ್ದೀನ್ ತಬ್ಲಿಘಿ ಮಾರ್ಕಾಜ್ ಸಭೆಯಲ್ಲಿ ಭಾಗವಹಿಸಿ ಯಾದಗಿರಿ ಜಿಲ್ಲೆಗೆ ವಾಪಸ್ಸಾಗಿರುವ ಜನರು ಕಂಡುಬಂದಲ್ಲಿ ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಗೆ ಕರೆ ಮಾಡಿ ಮಾಹಿತಿ ನೀಡಲು ಅಪರ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
*ಹೋಮ್ ಕ್ವಾರಂಟೈನ್ ನಲ್ಲಿ 16 ಜನ*:
ಯಾದಗಿರಿ ತಾಲ್ಲೂಕಿನಲ್ಲಿ 30 ಜನ, ಶಹಾಪೂರ ತಾಲ್ಲೂಕಿನಲ್ಲಿ 19 ಹಾಗೂ ಸುರಪುರ ತಾಲ್ಲೂಕಿನಲ್ಲಿ 22 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 71 ಜನ ವಿದೇಶಗಳಿಂದ ಜಿಲ್ಲೆಗೆ ಮರಳಿ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಯಾವುದೇ ರೋಗಲಕ್ಷಣಗಳು ಕಂಡುಬಂದಿರುವುದಿಲ್ಲ. ಕಾರಣ ಇವರಿಗೆ ಹೋಮ್ ಐಸೊಲೇಷನ್ ವ್ಯವಸ್ಥೆ ಮಾಡಲಾಗಿದೆ. ಈ 71 ಜನರ ಪೈಕಿ ಒಟ್ಟು 55 ಜನ 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದು, ಬಾಕಿ 16 ಜನರನ್ನು ಅವರ ಮನೆಯಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.
ವಿದೇಶಗಳಿಂದ ಬಂದವರನ್ನು ಮುಂಜಾಗ್ರತಾ ಕ್ರಮವಾಗಿ ದಿನಕ್ಕೆ 2 ಬಾರಿಯಂತೆ 14 ದಿನಗಳ ಕಾಲ ವೈದ್ಯಕೀಯ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದೆ. ಇವರ ಕುಟುಂಬದ ಸದಸ್ಯರ ಮೇಲೆಯೂ ನಿಗಾವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವೈರಸ್ ಸೋಂಕಿತ ರೋಗಿಗಳಿಗಾಗಿ ಯಾದಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 15 ಹಾಗೂ ಹೊಸ ಜಿಲ್ಲಾಸ್ಪತ್ರೆಯಲ್ಲಿ 100 ಐಸೊಲೇಷನ್ ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಆರೋಗ್ಯ ಸಹಾಯವಾಣಿ-104 ಕ್ಕೆ ಬರುವ ಕರೆಗಳಿಗಾಗಿ 3 ಸಿಬ್ಬಂದಿಗಳನ್ನು ಮೀಸಲಿರಿಸಿದೆ. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಗೆ 8 ಕರೆಗಳು ಸ್ವೀಕೃತವಾಗಿವೆ ಎಂದು ಅವರು ತಿಳಿಸಿದ್ದಾರೆ.
*ಸಾರ್ವಜನಿಕರಿಗೆ ಮನವಿ*:
ಕೋವಿಡ್-19 ಪೀಡಿತ ದೇಶಗಳಿಂದ ಹಿಂತಿರುಗಿರುವ ಅಥವಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿರುವ ಯಾರಾದರು ಭಾರತಕ್ಕೆ ಹಿಂತಿರುಗಿದ ದಿನದಿಂದ 14 ದಿನಗಳವರೆಗೆ ರೋಗ ಲಕ್ಷಣಗಳು ಇರಲಿ ಅಥವಾ ಇಲ್ಲದಿರಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಹಾಗೂ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಜಿಲ್ಲಾಡಳಿತದ ಕಂಟ್ರೋಲ್ ರೂಮ್ ಸಹಾಯವಾಣಿ ಸಂಖ್ಯೆ 08473-253950 ಅಥವಾ 24*7 ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರ/ಟಿಶ್ಯೂ ಪೇಪರನ್ನು ಬಳಸಿ. ಕೈ ಸ್ವಚ್ಛಗೊಳಿಸುವ ದ್ರಾವಣ ಅಥವಾ ನೀರು ಮತ್ತು ಸೋಪು ಬಳಸಿ ಆಗಾಗ ಕೈಗಳನ್ನು ತೊಳೆದುಕೊಳ್ಳಿ ಮತ್ತು ಸಾಮಾಜಿಕ ಸಮೂಹ ಗುಂಪು ಸೇರುವುದನ್ನು ಮಾಡಬಾರದು ಎಂದು ಅವರು ಸಲಹೆ ನೀಡಿದ್ದಾರೆ.
Be the first to comment