ಜೀಲ್ಲಾ ಸುದ್ದಿಗಳು
ಯಾದಗಿರಿ:-ಈಗಾಗಲೇ ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಜಿಲ್ಲೆಯ ನಾಗರಿಕರಿಗೆ ಆಹಾರಧಾನ್ಯ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆದ್ಯತಾ ಕುಟುಂಬ (ಬಿಪಿಎಲ್) ಪಡಿತರ ಚೀಟಿ ಕೋರಿ ಸಲ್ಲಿಸಿರುವ 4934 ಅರ್ಜಿಗಳು ಹಾಗೂ ಆದ್ಯತೇತರ ಕುಟುಂಬ (ಎಪಿಎಲ್) ಪಡಿತರ ಚೀಟಿ ಕೋರಿ ಸಲ್ಲಿಸಿರುವ 146 ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ.
ಕೊರೊನಾ ವೈರಸ್ ಹರಡುತ್ತಿರುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಏಪ್ರಿಲ್ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಕುಟುಂಬಗಳಿಗೆ ತಾತ್ಕಾಲಿಕವಾಗಿ ಆಹಾರಧಾನ್ಯ ವಿತರಿಸಲು ಸರ್ಕಾರ ಆದೇಶವನ್ನು ಹೊರಡಿಸಿರುತ್ತದೆ.
ಅದರನ್ವಯ ಅರ್ಜಿದಾರರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಹಂಚಿಕೆ ಮಾಡಬೇಕಾದ ಪಡಿತರ ಅಕ್ಕಿಯ ಪ್ರಮಾಣ ಮತ್ತು ಹಂಚಿಕೆ ಮಾಡಲು ಅನುಸರಿಸಬೇಕಾದ ಕ್ರಮಗಳು ಈ ಕೆಳಗಿನಂತಿದೆ.
ಅರ್ಜಿದಾರರು ಆನ್‍ಲೈನ್‍ನಲ್ಲಿ ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಯ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ಒದಗಿಸಬೇಕು. ನಂತರ ಅರ್ಜಿದಾರರ ಆಧಾರ್ ಸಂಖ್ಯೆಯನ್ನು ಮತ್ತು ಸಂಬಂಧಿಸಿದ ದಾಖಲೆ ಪ್ರತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಬೇಕು. ನ್ಯಾಯಬೆಲೆ ಅಂಗಡಿ ವರ್ತಕರು ಆಧಾರ್ ಸಂಖ್ಯೆಯನ್ನು ಇಲಾಖೆಯ ದತ್ತಾಂಶದಲ್ಲಿ ನಮೂದಿಸಿ ಸದರಿ ಆಧಾರ್ ಸಂಖ್ಯೆಗೆ ಈಗಾಗಲೇ ಪಡಿತರ ಚೀಟಿಯನ್ನು ವಿತರಿಸಲಾಗಿದೆಯೇ ಅಥವಾ ಸದರಿ ಆಧಾರ್ ಸಂಖ್ಯೆ ಬೇರೆ ಇನ್ಯಾವುದಾದರೂ ಚಾಲ್ತಿ ಪಡಿತರ ಚೀಟಿಯಲ್ಲಿ ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು. ದತ್ತಾಂಶದಲ್ಲಿ ಸದರಿ ಆಧಾರ್ ಸಂಖ್ಯೆಗೆ ಯಾವುದೇ ಪಡಿತರ ಚೀಟಿ ವಿತರಣೆಯಾಗದೇ ಇದ್ದಲ್ಲಿ ಅಥವಾ ಚಾಲ್ತಿ ಪಡಿತರ ಚೀಟಿಯಲ್ಲಿ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಅಂತಹ ಅರ್ಜಿದಾರರಿಗೆ ಪಡಿತರ ಅಕ್ಕಿ ವಿತರಿಸಲಾಗುವುದು.
ಆದ್ಯತಾ (ಬಿಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿದಾರರಿಗೆ ಪ್ರತಿ ಮಾಹೆ ಉಚಿತವಾಗಿ 10 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು. ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಾಗಿ ಅರ್ಜಿ ಸಲಿಸಿದ್ದಲ್ಲಿ ಎ.ಪಿ.ಎಲ್. ದರದಲ್ಲಿ ಪಡಿತರ ಖರೀದಿಸಲು ಸಮ್ಮತಿ ಸೂಚಿಸಿರುವ ಅರ್ಜಿಗಳಿಗೆ ಸಹಾಯಧನಯುಕ್ತ ದರ ಪ್ರತಿ ಕೆ.ಜಿ.ಗೆ ರೂ.15ರಂತೆ ಪ್ರತಿ ಅರ್ಜಿದಾರರಿಗೆ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುವುದು.
ಪಡಿತರ ಪಡೆಯುವ ಅರ್ಜಿದಾರರಿಂದ ಆಧಾರ್ ದೃಢೀಕೃತ ಓಟಿಪಿ ಅನ್ನು ಪಡೆದು ಪಡಿತರವನ್ನು ವಿತರಿಸಲಾಗುತ್ತದೆ.
ಈ ಸೌಲಭ್ಯವನ್ನು ಏಪ್ರಿಲ್, ಮೇ ಮತ್ತು ಜೂನ್ -2020 ರ ಈ ಮೂರು ಮಾಹೆಗಳ ಅವಧಿಗಾಗಿ ಒದಗಿಸಲಾಗಿದೆ. ಈ ವಿಶೇಷ ಸೌಲಭ್ಯವನ್ನು ಸರ್ಕಾರದ ಆದೇಶದಂತೆ ಕೊರೊನಾ ವೈರಸ್ ತುರ್ತು ಪರಿಸ್ಥಿತಿಯಲ್ಲಿ ಜಾರಿಗೊಳಿಸಿದ್ದು, ಈ ಸಂಬಂಧ ಜಾರಿಯಲ್ಲಿರುವ ನಿಯಮಗಳಾದ ಸಾಮಾಜಿಕ ಅಂತರ, ಸ್ವಚ್ಛತೆ ಇತ್ಯಾದಿ ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕು.
ಮೇಲಿನಂತೆ ಪಡಿತರ ಪಡೆಯುವಂತಹ ಅರ್ಜಿದಾರರಿಗೆ ಅವರ ಪಡಿತರದ ವಿವರವನ್ನು ಆಹಾರ ಇಲಾಖೆಯಿಂದ ಎಸ್.ಎಂ.ಎಸ್. ಮೂಲಕ ಕಳುಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Be the first to comment