ಭಾಲ್ಕಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ, ಲಾಕ್‌ಡೌನ್ ಆದೇಶ ಪಾಲನೆಗೆ ಸಹಕರಿಸಿ : ಪ್ರಭು ಚವ್ಹಾಣ್

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.'

ಜೀಲ್ಲಾ ಸುದ್ದಿಗಳು

ಬೀದರ್:- ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ದೇಶದ್ಯಾಂತ ಜಾರಿ ಮಾಡಿರುವ ಲಾಕ್‌ಡೌನ್ ಆದೇಶ ಪಾಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಶು ಸಂಗೋಪಣೆ, ವಕ್ಫ ಮತ್ತು ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಹೇಳಿದರು.

ಭಾಲ್ಕಿ ಪಟ್ಟಣದ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ಶಾಸಕರಾದ ಈಶ್ವರ ಖಂಡ್ರೆ ಅವರ ಸಮ್ಮುಖದಲ್ಲಿ ಏ.11ರಂದು ತಾಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಕರೋನಾ ಹರಡದಂತೆ ತಡೆಯಲು ಭಾಲ್ಕಿ ತಾಲೂಕಾಡಳಿತ ಏನೇನು ಕ್ರಮ ವಹಿಸಿದೆ ಎಂಬುದನ್ನು ಸಮಗ್ರ ಪರಿಶೀಲಿಸಿ ಬಳಿಕ ಮಾತನಾಡಿದರು.

ಬೀದರ್ ನಗರದಲ್ಲಿ ಕರೋನಾ ಸೋಂಕು ಹರಡುವುದು ಕಂಡು ಬರುತ್ತಿದೆ. ಇದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಮನೆಯಲ್ಲಿರುವುದು ಮತ್ತು ಮಾಸ್ಕ ಧರಿಸುತ್ತ ಪ್ರತಿಯೊಬ್ಬರು ಸಹಕರಿಸಿದಲ್ಲಿ ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಭಾಲ್ಕಿ ತಾಲೂಕಿನ ಜನರಲ್ಲಿ ಸಚಿವರು ಮನವಿ ಮಾಡಿದರು.

ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಲಾಕ್‌ಡೌನ್ ನಿಯಮ ಪಾಲನೆ ಸರಿಯಾಗಿ ಆಗಬೇಕು. ಜನರು ಅನವಶ್ಯಕವಾಗಿ ಹೊರಗಡೆ ತಿರುಗದಂತೆ ನೋಡಿಕೊಳ್ಳಬೇಕು. ಎಲ್ಲ ಚೆಕ್‌ಪೋಸ್ಟಗಳನ್ನು ಬಿಗಿಗೊಳಿಸಲು ಕ್ರಮ ವಹಿಸುವಂತೆ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಈಗಾಗಲೇ ನಿಗದಿಪಡಿಸಿದ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದವರಲ್ಲೂ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ವಿದೇಶ ಮತ್ತು ಹೊರರಾಜ್ಯಗಳಿಂದ ಬಂದಿರುವ ಶಂಕಿತರನ್ನು ಗುರುತಿಸಿ ಅವರಿಗೆ ಕನಿಷ್ಟ 28 ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ನಲ್ಲಿ ಇರಿಸಿ ಅವರ ಆರೋಗ್ಯದ ಬಗ್ಗೆ ನಿಗಾವಹಿಸಬೇಕು ಎಂದು ಸಲಹೆ ಮಾಡಿದರು.

ಭಾಲ್ಕಿ ತಾಲೂಕಿನಲ್ಲಿ ಔಷಧಿ ಸೇರಿದಂತೆ ಯಾವುದೇ ವೈದ್ಯಕೀಯ ಸೌಕರ್ಯಕ್ಕೆ ಕೊರತೆಯಾಗಬಾರದು. ಇಲ್ಲಿ ಅಗತ್ಯ ಸಂಖ್ಯೆಯಲ್ಲಿ ತಜ್ಞ ವೈದರು ಮತ್ತು ಅಂಬುಲೆನ್ಸ್ ವ್ಯವಸ್ಥೆಯಾಗಬೇಕು. ಸಾಕಷ್ಟು ಪ್ರಮಾಣದಲ್ಲಿ ಪಿಪಿ ಕಿಟ್, ಮಾಸ್ಕ್, ಸಾನಿಟೈಸರ್, ತಪಾಸಣಾ ಕಿಟ್ ಒದಗಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷರಾದ ಮಾರುತಿರಾವ್ ಮಗರ್, ತಹಸೀಲ್ದಾರ ಅಣ್ಣಾರಾವ್ ಪಾಟೀಲ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ್, ಡಿವೈಎಸ್ಪಿ ಡಾ.ದೇವರಾಜ ಬಿ ಹಾಗೂ ಇನ್ನೀತರ ಅಧಿಕಾರಿಗಳು ಹಾಜರಿದ್ದರು.

Be the first to comment

Leave a Reply

Your email address will not be published.


*