ಜೀಲ್ಲಾ ಸುದ್ದಿಗಳು
ಬೀದರ:- ಲಾಕ್ ಡೌನ್ ಮಧ್ಯೆ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರವು ದಿಟ್ಟ ಕ್ರಮ ತೆಗೆದುಕೊಂಡು, ಜಿಲ್ಲಾ ಮತ್ತು ರಾಜ್ಯಮಟ್ಟದ ಬಾರ್ಡರಗಳನ್ನು ಓಪನ್ ಮಾಡಿ, ಆಹಾರ ಧಾನ್ಯ, ಹಣ್ಣು, ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳ ಸರಕು ಸಾಗಣೆ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏ.7ರಂದು ಬೀದರನ ರೈತರು, ರೈತ ಮುಖಂಡರು, ಜಿಪಂ ಅಧ್ಯಕ್ಷರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, ಹಮಾಲರು ಮತ್ತು ಲಾರಿಗಳು ಬರುತ್ತಿಲ್ಲ ಎನ್ನುವ ದೂರುಗಳು ಕೆಲವು ಕಡೆಗಳಲ್ಲಿ ಕೇಳಿ ಬಂದಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸಹಕರಿಸಲು ಅವರಿಗೆ ಮನವೊಲಿಸಿ ಎಂದು ಸೂಚಿಸಲಾಗಿದೆ. ರೈತರ ಪರವಾಗಿ ಸರ್ಕಾರ ಏನು ಮಾಡಬೇಕೋ ಎಲ್ಲವನ್ನು ಮಾಡುತ್ತಿದೆ ಎಂದು ಹೇಳಿದರು.
ನಾವು ಯಾರು ಕೂಡ ಊಹಿಸದಂತಹ ಸನ್ನಿವೇóಶ ಎದುರಾದಾಗ, ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಲಾಕ್‍ಡೌನ್ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಆಗುವ ಅನ್ಯಾಯ ಮತ್ತು ತೊಂದರೆಗಳನ್ನು ನಿವಾರಿಸಲಿಕ್ಕೆ ಮುಕ್ತ ಮಾರುಕಟ್ಟೆಯ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡ ಪರಿಣಾಮ ಈಗ ಪರಿಸ್ಥಿತಿಯು ತುಸು ಹತೋಟಿಗೆ ಬಂದಿದೆ ಎಂದರು.
ತಾವು ಕೂಡ ರೈತರ ಮಗನಾಗಿದ್ದು, ಮುಂದಿನ ದಿನಗಳಲ್ಲಿ, ರೈತರಿಗೆ ಆದಂತಹ ನಷ್ಟಕ್ಕೆ ಪರಿಹಾರ ಕೊಡಲು ಮತ್ತು ಅವರ ಕಷ್ಟವನ್ನು ಪರಿಹರಿಸಲಿಕ್ಕೆ ಖಂಡಿತಾ ಸರ್ಕಾರ ಚಿಂತನೆ ಮಾಡಲಿದೆ. ತಮಗೆ ಮುಖಾಮುಖಿ ಭೇಟಿ ಮಾಡಿ, ಸ್ಥಳೀಯ ರೈತರು ಮತ್ತು ಜನಪ್ರತಿನಿಧಿಗಳು ತಿಳಿಸಿದ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು. ಸರ್ಕಾರದ ಮಟ್ಟದಲ್ಲಿ ಏನಾದರೊಂದು ಪರಿಹಾರವನ್ನು ಮಾಡಬೇಕು ಎನ್ನುವ ಉದ್ದೇಶವಿಟ್ಟುಕೊಂಡೇ ತಾವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೆ ಭೇಟಿ ಕಾರ್ಯಕ್ರಮ ಹಾಕಿಕೊಂಡಿದ್ದಾಗಿ ಸಚಿವರು ತಿಳಿಸಿದರು.
ಲಾಕ್‍ಡೌನ್ ಇದ್ದಾಗಲೂ ಕೃಷಿ ಚಟುವಟಿಕೆ ನಡೆಯಲು ಅನುಮತಿ ನೀಡಲಾಗಿದೆ. ಸಾಕಷ್ಟು ಅಂತರ ಕಾಯ್ದುಕೊಂಡು ಕೃಷಿಕರು ತಮ್ಮ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಬೇಕು ಎಂದು ರೈತರಿಗೆ ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲಾವಾರು ಎದುರಾಗುವ ಕೃಷಿಕರ ಸಮಸ್ಯೆಗಳಿಗೆ ಆಯಾ ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಸೇರಿ ಚರ್ಚಿಸಿ ಅಂತಹ ಸಮಸ್ಯೆಗಳಿಗೆ ತಾತ್ಕಾಲಿಕ ತಡೆ ನೀಡಲು ಮತ್ತು ಕೋವಿಡ್-19ರಿಂದ ಪಾರಾಗುವ ಬಗ್ಗೆ ಸಮಾಲೋಚನೆ ಮಾಡಲಾಗುತ್ತಿದೆ ಎಂದರು.
ಮುಂಗಾರು ಬಿತ್ತನೆಗಾಗಿ ರೈತರಿಗೆ ಸಾಕಾಗುಷ್ಟು ಬೀಜ ಮತ್ತು ಗೊಬ್ಬರ ಪೂರೈಕೆಗೆ ಕೃಷಿ ಇಲಾಖೆಯು ಸಿದ್ಧವಾಗಿದೆ. ಕೃಷಿ ಯಂತ್ರೋಪಕರಗಳ ದುರಸ್ತಿ ಮಾಡುವ, ಪೈಪ್ ಮತ್ತು ಕೇಬಲ್ ಸೇರಿದಂತೆ ಕೃಷಿಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರಾದ ಪಾಟೀಲ ತಿಳಿಸಿದರು.
ಶಾಸಕರಾದ ಬಂಡೆಪ್ಪ ಖಾಶೆಂಪೂರ ಅವರು ಮಾತನಾಡಿ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಉತ್ಪನ್ನ ಮಾರಾಟದ ವಿಷಯದಲ್ಲಿ ರೈತರಿಗೆ ಸಾಕಷ್ಟು ಅನುಕೂಲಕರವಾಗುವ ಪ್ರಮುಖ ನಿರ್ಣಯವೊಂದು ತಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಅತೀ ತುರ್ತಾಗಿ ಹೋಗಬೇಕು. ಕೃಷಿ ಉತ್ಪನ್ನವನ್ನು ಬೇರೆಡೆ ಸಾಗಿಸುವ ವಿಷಯದಲ್ಲಿ ರೈತರಿಗೆ ತೊಂದರೆಯಿಲ್ಲ. ಲಾಕ್‍ಡೌನ್‍ದಂತಹ ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮತ್ತು ಬೇಡಿಕೆ ಇಲ್ಲದಂತಹ ಸಂದರ್ಭದಲ್ಲಿ ಹಣ್ಣುಗಳನ್ನು ಕೆಲವು ಸಮಯದವರೆಗೆ ಕೆಡದ ಹಾಗೆ ಇಡಲು ರೈತರಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಬಿ.ಸಿ.ಪಾಟೀಲ, ರೈತ ಬೆಳೆದ ಫಸಲನ್ನು ಅಂತಾರಾಜ್ಯಗಳಿಗೆ ಕೊಂಡೊಯ್ಯಲು ಅನುಕೂಲವಾಗುವಂತೆ ಸರ್ಕಾರವು ಗ್ರೀನ್ ಪಾಸ್ ವ್ಯವಸ್ಥೆ ಕಲ್ಪಿಸಿದೆ. ಜಿಲ್ಲಾ ಕೇಂದ್ರದಲ್ಲಿ ಡಿಸಿ ಮತ್ತಿ ಎಸ್‍ಪಿಗಳು ಈ ಪಾಸನ್ನು ವಿತರಿಸುತ್ತಾರೆ. ಈ ವಿಷಯದಲ್ಲಿ ಏನಾದರು ತೊಂದರೆಯಾದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕು. ಹುಮಾನಾಬಾದ್ ಪಟ್ಟಣದಲ್ಲಿ 400 ಮೆಟ್ರಿಕ್ ಟನ್‍ನಷ್ಟು ಕೃಷಿ ಉತ್ಪನ್ನಗಳ ಶೇಖರಣೆಗೆ ಅವಕಾಶವಿದೆ. ಇಲ್ಲಿ ಶೇಖರಿಸಿಡಲು ರೈತರಿಗೆ ಲಾಕಡೌನ್ ಅವಧಿ ಮುಗಿವವರೆಗೆ ಚಾರ್ಜ್ ಮಾಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ರೈತರು ನೀಡಿದ ಕಬ್ಬಿಗೆ ಸಂಬಂಧಿಸಿದ ಕಾರ್ಖಾನೆಗಳು ಇದುವರೆಗೆ ಸಮರ್ಪಕ ಹಣ ಪಾವತಿಸುತ್ತಿಲ್ಲ ಎಂದು ಜಿಲ್ಲೆಯ ರೈತರು ತಿಳಿಸುತ್ತಿದ್ದಾರೆ ಎಂದರು. ಇದರಿಂದ ಕಬ್ಬು ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ ಎಂದು ರೈತ ಮುಖಂಡರು ಕೂಡ ಧ್ವನಿಗೂಡಿಸಿದರು.
ಕಬ್ಬಿನ ಕಾರ್ಖಾನೆಗಳ ಮುಖ್ಯಸ್ಥರೊಂದಿಗೆ ಈ ಕುರಿತು ಚರ್ಚಿಸಿ, ರೈತರ ಹಣ ಪಾವತಿ ಬೇಡಿಕೆಗೆ ಸ್ಪಂದಿಸುವಂತೆ ತಿಳಿಸಲಾಗಿದೆ ಎಂದು ಪಶು ಸಂಗೋಪಣೆ, ವಕ್ಫ ಮತ್ತು ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದರು. ಸಂಬಂಧಿಸಿದ ಕಾರ್ಖಾನೆಗಳಿಗೆ ನೋಟೀಸ್ ಜಾರಿ ಮಾಡಿದ್ದು, ರೈತರಿಗೆ ತುರ್ತಾಗಿ ಹಣ ಪಾವತಿ ಮಾಡದಿದ್ದಲ್ಲಿ ಕಾರ್ಖಾನೆಗಳ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿದರು.
ಶಾಸಕರಾದ ಬಿ.ನಾರಾಯಣರಾವ್ ಅವರು ಮಾತನಾಡಿ, ಮೊನ್ನೆ ಮೊನ್ನೆ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬಸವಕಲ್ಯಾಣದ ಭಾಗದಲ್ಲಿ ದ್ರಾಕ್ಷಿ ಮತ್ತು ಇನ್ನಿತರ ತೋಟಗಾರಿಕೆ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಕೃಷಿ ಸಚಿವರಿಗೆ ತಿಳಿಸಿದರು.
ಲಾಕ್‍ಡೌನ್‍ದಿಂದ ಅನ್ನದಾತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಜಿಲ್ಲೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಮುಖ್ಯವಾಗಿ ಬೀದರ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಲ್ಲಂಗಡಿ ಮತ್ತು ಟೊಮೆಟೊ ಸಂಗ್ರಹವಾಗಿದ್ದು ಅದನ್ನು ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಈ ವಿಷಯವನ್ನು ಪ್ರಾದೇಶಿಕ ಆಯುಕ್ತರಿಗೆ ಕೂಡ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ್ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ, ಬೀದರ ಸಂಸದರಾದ ಭಗವಂತ ಖೂಬಾ, ಕಲಬುರಗಿ ಸಂಸದರಾದ ಡಾ.ಉಮೇಶ ಜಾದವ್, ಶಾಸಕರಾದ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಣ ಈಶ್ವರ ಬುಳ್ಳಾ, ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಎಸ್‍ಪಿ ಡಿ.ಎಲ್.ನಾಗೇಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸಿ.ವಿದ್ಯಾನಂದ, ರೈತ ಮುಖಂಡರು ಹಾಗೂ ಇತರರು ಇದ್ದರು.
Be the first to comment