ಜೀಲ್ಲಾ ಸುದ್ದಿಗಳು
ಕಲಬುರಗಿ : ದೇಶದಲ್ಲಿ ಕೋವಿದ್-19 ಸೋಂಕಿನ ಮೊದಲ ಸಾವಿನಿಂದ ಗಮನಸೆಳೆದಿದ್ದ ಕಲಬುರಗಿಯಲ್ಲಿ, ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ತೃಪ್ತಿತಂದಿದ್ದು, ಮುಂದಿನ ದಿನಗಳಲ್ಲಿ ಈ ಸೋಂಕು ಹರಡದಂತೆ ಇನ್ನಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವಂತೆ ಮೂಲಸೌಕರ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ
ಶನಿವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೋನಾ ಹರಡದಂತೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಜಿಲ್ಲಾಡಳಿತ ಸೇರಿದಂತೆ ಇತರ ಇಲಾಖೆಗಳು ಕೈಗೊಂಡಿರುವ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದು ವೇಳೆ ಕೊರೋನಾ ಪ್ರಕರಣಗಳು ಹೆಚ್ಚಾದಲ್ಲಿ ರೋಗಿಗಳ ಮಾದರಿ ಪರೀಕ್ಷೆಗಳನ್ನು ನಡೆಸಲು ಜಿಮ್ಸ್‍ನಲ್ಲಿರುವ ಲ್ಯಾಬ್ ಸಾಮಾಥ್ರ್ಯ ಹೆಚ್ಚಿಸಬೇಕೆಂದು ಅವರು ಸೂಚಿಸಿದರು. ಪ್ರತಿದಿನ ಗರಿಷ್ಠ 90 ಮಾದರಿಗಳನ್ನು ಪರೀಕ್ಷೆ ನಡೆಸಬಹುದಾಗಿದೆ ಎಂದು ಹೇಳುತ್ತೀರಿ, ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳಗೊಂಡಲ್ಲಿ ಪರೀಕ್ಷಾ ಸಾಮಥ್ರ್ಯ ಕೂಡ ಹೆಚ್ಚಿಸಬೇಕು. ಈ ಸಂಬಂಧ ರ್ಯಾಪಿಡ್ ಟೆಸ್ಟಿಂಗ್‍ಗೆ ಬೇಕಾದ ಲ್ಯಾಬ್ ಕಿಟ್‍ಗಳಿಗಾಗಿ ಬೇಡಿಕೆ ಸಲ್ಲಿಸುವಂತೆ ಅವರು ಜಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬಿ. ಶರತ್ ಅವರು, ಬೆಂಗಳೂರು ಸೇರಿದಂತೆ ಹೊರರಾಜ್ಯದಿಂದ 57 ಸಾವಿರ ಜನ ಜಿಲ್ಲೆಗೆ ಬಂದಿದ್ದು, ಎಲ್ಲರ ಮಾಹಿತಿ ಸಂಗ್ರಹಿಸಿ, ನಿಗಾವಹಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಅಫ್ಜಲ್‍ಪುರ ಹಾಗೂ ಜೇವರ್ಗಿಯಲ್ಲಿ ವಲಸಿಗರ ಕ್ಯಾಂಪ್ ತೆರೆಯಲಾಗಿದ್ದು, ಅವರನ್ನು ಅಲ್ಲಿಯೇ ಇರಿಸಿ ನಿಗಾವಹಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದ್ದು, ಲಾಕ್ ಡೌನ್ ನಿಂದ ಕೊಂಡುಕೊಳ್ಳದಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ರೈತರು ಹೈದ್ರಾಬಾದ್‍ಗೆ ಕೊಂಡೊಯ್ದರೂ ಸರಿಯಾದ ಬೆಲೆಸಿಗುತ್ತಿಲ್ಲ. ಕೆಜಿಗೆ 2ವರೆಯಿಂದ 3 ರೂಪಾಯಿ ಬೆಲೆ ಇದೆ. ಪಪ್ಪಾಯ, ಬಾಳೆಹಣ್ಣು ಯಥಾಪ್ರಕಾರ ಮಾರಾಟವಾಗ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ್ ಸಪಂದಿ ಅವರು ಸಭೆಗೆ ಮಾಹಿತಿ ನೀಡಿದರು.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನ ಸಾಗಿಸಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಬೆಂಗಳೂರಿಗೆ ಸರಕು ಸಾಗಾಣೆ ರೈಲು ಪ್ರಾರಂಭಿಸಿದ್ದು, ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ರಸ್ತೆ ಮಾರ್ಗದ ಮೂಲಕ ಸಾಗಾಟ ಮಾಡುವುದಕ್ಕಿಂತ ತುಂಬಾ ಅಗ್ಗವಾಗಿದೆ ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಪಡಿತರ ವಿತರಣೆ ಕುರಿತು ಮಾಹಿತಿ ಕೇಳಿದ ಕಾರ್ಯದರ್ಶಿಗಳು, ಮೊಬೈಲ್‍ಗೆ ಓಟಿಪಿ ಬರದಿದ್ದರೆ ಯಾವ ರೀತಿ ಪಡಿತರ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಕೇಳಲಾಗಿ, ಜಿಲ್ಲೆಯಲ್ಲಿ ಶೇಕಡ 85 ರಷ್ಟು ಓಟಿಪಿ ಮೂಲಕ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಒಟಿಪಿ ಬರದಿದ್ದರೆ, ದಾಖಲೆಗಳನ್ನು ಪರಿಶೀಲಿಸಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಲಾಕ್‍ಡೌನ್ ಇದ್ದರೂ ತೊಗರಿ ಖರೀದಿ ಮಾಡಲಾಗುತ್ತಿದೆ. ಪ್ರತಿದಿನ 5000 ಕ್ವಿಟಂಲ್ ಖರೀದಿಸುತ್ತಿದ್ದು, ದಾಲ್‍ಮಿಲ್‍ಗಳು ಕೂಡ ಕಾರ್ಯನಿರ್ವಹಿಸುತ್ತಿವೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಅವರು ಸಭೆಗೆ ಮಾಹಿತಿ ನೀಡಿದರು.
ಇನ್ನು ನಗರದಲ್ಲಿರುವ ನಿರ್ಗತಿಕರು ಮುಂತಾದವರಿಗೆ ಉಚಿತ ಆಹಾರ ಮತ್ತು ಹಾಲು ವಿತರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ವಿವರಿದರು.
ಬೀದರ್ – ಯಾದಗಿರಿ ಜಿಲ್ಲೆ ಒಳಗೊಂಡ ಕಲಬುರಗಿ ಹಾಲು ಒಕ್ಕೂಟದಿಂದ ಪ್ರತಿದಿನ 55ಸಾವಿರ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಈ ಪೈಕಿ 54 ಸಾವಿರ ಲೀಟರ್ ಮಾರಾಟವಾಗ್ತಿದೆ. ಬಳ್ಳಾರಿ ಮತ್ತು ಬಿಜಾಪುರ ಡೈರಿಯ ಹೆಚ್ಚುವರಿಯಾಗುವ 14 ಸಾವಿರ ಲೀಟರ್ ಹಾಲನ್ನು ನಾಳೆಯಿಂದ ಖರೀದಿಸುತ್ತಿದ್ದು, ಉಚಿತ ಹಾಲು ವಿತರಣೆ ಸೇರಿದಂತೆ ಯಾವುದಕ್ಕೂ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಾಣಿಕ ರಘೋಜಿ ಅವರು, ಲಾಕ್‍ಡೌನ್‍ದಿಂದ ಮುಚ್ಚಲಾಗಿದ್ದ ಚಿಂಚೋಳಿಯ ಚೆಟ್ಟಿನಾಡು ಹಾಗೂ ಕಲಬುರಗಿ ಸಿಮೆಂಟ್ ಗಳು ಕಾರ್ಖಾನೆ ಪುನಾರರಂಭಕ್ಕೆ ಪ್ರಸ್ತಾಪ ಸಲ್ಲಿಸಿವೆ ಎಂದು ತಿಳಿಸಲಾಗಿ, ಈ ಪ್ರಸ್ತಾಪಗಳನ್ನು ಸರ್ಕಾರಕ್ಕೆ ಕಳುಹಿಸುವಂತೆ ಕಾರ್ಯದರ್ಶಿಗಳು ಹೇಳಿದರು.
ಮಾರುಕಟ್ಟೆ, ದಾಲ್‍ಮಿಲ್, ದಿನಸಿ ಅಂಗಡಿ ಮುಂತಾದೆಡೆ ಜನರು ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಈ ನಿಟ್ಟನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ,ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿ.ಸಿ.ಪಿ ಕಿಶೋರ ಬಾಬು, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Be the first to comment