ಜೀಲ್ಲಾ ಸುದ್ದಿಗಳು
ಕಲಬುರಗಿ : ಮಹಾಮಾರಿ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಚಾರಿ ವಾಹನಗಳಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರು ಚಾಲನೆ ನೀಡಿದರು.
ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಈ ಜನಜಾಗೃತಿ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಎರಡು ಆಟೋ ಮತ್ತು ಒಂದು ಟಂಟಂ ಜಾಗೃತಿ ವಾಹನಗಳಿಗೆ ಕೊರೋನಾ ಸೊಂಕಿನ ಲಕ್ಷಣಗಳು ಮತ್ತು ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ವಿವರವುಳ್ಳ ಬ್ಯಾನರ್ ಅಳವಡಿಸಿದೆ. ಇದಲ್ಲದೆ ಪ್ರತಿ ವಾಹನದಲ್ಲಿ ಇಬ್ಬರು ಸ್ವಯಂ ಸೇವಕರಿದ್ದು, ಧ್ವನಿವರ್ಧಕ ಮತ್ತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ.
ಪ್ರಸ್ತುತ ಈ ವಾಹನಗಳು ಮುಂದಿನ 5 ದಿನಗಳ ಕಾಲ ಕಲಬುರಗಿ ನಗರ ಮತ್ತು ಸುತ್ತಮುತ್ತಲಿನ 10 ಕಿ.ಮಿ. ಪ್ರದೇಶದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳಲ್ಲಿ ಸಂಚರಿಸಿ ಮಹಾಮಾರಿ ಕೊರೋನ ಸೊಂಕಿನ ಬಗ್ಗೆ ಅರಿವು ಮೂಡಿಸಲಿದೆ. ಇದಲ್ಲದೆ ಅಗತ್ಯವಿರುವವರಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡುವುದಲ್ಲದೆ ಅದರ ಬಳಕೆ ಬಗ್ಗೆಯೂ ಸ್ವಯಂ ಸೇವಕರು ತಿಳಿಹೇಳಲಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಭಾಗ್ಯಲಕ್ಷ್ಮೀ ಎಂ. ಸೇರಿದಂತೆ ಸ್ವಯಂ ಸೇವಕರು ಇದ್ದರು.
Be the first to comment