ಜೀಲ್ಲಾ ಸುದ್ದಿಗಳು
ಕಲಬುರಗಿ : ಕೊರೋನಾ ಸೋಂಕು ನಿಗ್ರಹದಲ್ಲಿರುವ ಎಲ್ಲಾ ಅಧಿಕಾರಿಗಳು ಮತ್ತು ವೈದ್ಯ ಸಿಬ್ಬಂದಿಗಳು ಮುಂದಿನ ಕೊರೋನಾ ಮೂರನೇ ಹಂತದ ಹೋರಾಟವನ್ನು ಸಮರ್ಥವಾಗಿ ಎದುರಿಸಲು ನಾವೆಲ್ಲ ಸಜ್ಜಾಗಬೇಕಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ , ಲೋಕೋಪಯೋಗಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ಜೊತೆ ಸಭೆ ನಡೆಸಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೊಂಕು ತಡೆಗಟ್ಟುವ ದಿಸೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 40 ವೆಂಟಿಲೇಟರ್‍ಗಳಿದ್ದು, ಇದು ಸಾಕಾಗುವುದಿಲ್ಲ. ಮಹಿಂದ್ರಾ ಕಂಪನಿಯವರು 7500 ರೂ. ಬೆಲೆಯಲ್ಲಿ ವೆಂಟಿಲೇಟರ್ ತಯಾರಿಸಿ ಕೊಡಲು ಮುಂದೆ ಬಂದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇಂತಹ 100 ವೆಂಟಿಲೇಟರ್ ಖರೀದಿಸಬೇಕು ಎಂದು ಡಿ.ಸಿ. ಶರತ್ ಬಿ. ಅವರಿಗೆ ಡಿ.ಸಿ.ಎಂ ನಿರ್ದೇಶನ ನೀಡಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಅದೇ ರೀತಿ ಗ್ರಾಮಗಳಲ್ಲಿ ಪಿ.ಡಿ.ಒ.ಗಳು ಕೇಂದ್ರಸ್ಥಾನದಲ್ಲಿದ್ದು, ಸೇವೆಗೆ ಸದಾ ಸಿದ್ಧರಿರಬೇಕು ಎಂದರು.
144 ನಿಷೇಧಾಜ್ಞೆ ಉಲ್ಲಂಘಿಸಿ ಪುಂಡಾಟಿಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
ಇದಲ್ಲದೆ ಕೆ.ಎಸ್.ಆರ್.ಪಿ ಹಾಗೂ ಪೊಲೀಸ್ ತುಕಡಿಗಳಿಂದ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಥಸಂಚಲನ ಮಾಡಿಸಬೇಕು ಎಂದು ಎಸ್.ಪಿ ಯಡಾ ಮಾರ್ಟಿನ್ ಮಾರ್ಬ್‍ನ್ಯಾಂಗ್ ಮತ್ತು ನಗರ ಪೊಲೀಸ್ ಆಯುಕ್ತಾಲಯದ ಡಿ.ಸಿ.ಪಿ. ಕಿಶೋರ ಬಾಬು ಅವರಿಗೆ ಡಿ.ಸಿ.ಎಂ ಗೋವಿಂದ ಕಾರಜೋಳ ಅವರು ನಿರ್ದೇಶನ ನೀಡಿದರು.
*ಕ್ಲಬ್ ಲೈಸೆನ್ಸ್ ರದ್ದುಗೊಳಿಸಿ*: ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಕ್ಲಬ್‍ಗಳು ತೆರೆಯುವಂತಿಲ್ಲ. ತೆರೆದಲ್ಲಿ ಕೂಡಲೇ ಅವುಗಳ ಲೈಸೆನ್ಸ್ ರದ್ದುಗೊಳಿಸುವುದಲ್ಲದೆ ಕೇಸ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಪಿ.ಗೆ ಉಪಮುಖ್ಯಮಂತ್ರಿಗಳು ಸೂಚನೆ ಕೊಟ್ಟರು.
*ಗೃಹ ಬಂಧನದಲ್ಲಿರುವವರ ಮನೆಗೆ ಚೀಟಿ ಅಂಟಿಸಿ:* ವಿದೇಶದಿಮದ ಬಂದ ಅಥವಾ ಕೊರೋನಾ ಸೋಂಕಿತರ ನೇರ ಸಂಪರ್ಕದಲ್ಲಿ ಬಂದಂತಹ ವ್ಯಕ್ತಿಗಳಿಗೆ ಗೃಹ ಬಂಧನದಲ್ಲಿರಲು ಸೂಚಿಸಲಾಗುತ್ತಿದೆ. ಇಂತಹ ವ್ಯಕ್ತಿ ಮನೆಗೆ ಹೋಂ ಕ್ವಾರಂಟೈನ್ ಕುರಿತು ಚೀಟಿ ಅಂಟಿಸಬೇಕು ಎಂದು ಡಿ.ಸಿ.ಎಂ. ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಮೃತ ವ್ಯಕ್ತಿ ಸೇರಿದಂತೆ ಇದೂವರೆಗೆ ಜಿಲ್ಲೆಯಲ್ಲಿ ಕೋವಿಡ್-19 ಮೂರು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪಾಸಿಟಿವ್ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿ ಬಂದ 99 ಜನರನ್ನು ಪ್ರೈಮೇರಿ ಕಾಂಟ್ಯಾಕ್ಟ್ ಮತ್ತು 388 ಜನರನ್ನು ಸೆಕೆಂಡರಿ ಕಾಂಟ್ಯಾಕ್ಟ್ ಎಂದು ಗುರುತಿಸಿ ನಿಗಾ ಇಡಲಾಗಿದೆ. ಕಳೆದ ಒಂದು ತಿಂಗಳಿನಲ್ಲಿ 681 ಜನ ವಿದೇಶದಿಂದ ಬಂದಿದ್ದು ಅವರೆಲ್ಲರನ್ನು ಗೃಹ ಬಂಧನದಲ್ಲಿರಿಸಲಾಗಿದೆ. 517 ಜನ ಗೃಹ ಬಂಧನ ಅವಧಿ ಮುಗಿಸಿದ್ದಾರೆ. ಉಳಿದಂತೆ 29 ವ್ಯಕ್ತಿಗಳನ್ನು ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲಾಗುವ 1465 ಪರ್ಸನಲ್ ಪ್ರೊಟೆಕ್ಷನ್ ಕಿಟ್ ಹಾಗೂ ಚಿಕಿತ್ಸೆಗೆ ಪೂರಕವಾಗಿ 40 ವೆಂಟಿಲೇಟರ್‍ಗಳು ಇವೆ. ಜಿಮ್ಸ್ ಮತ್ತು ಇ.ಎಸ್.ಐ.ಸಿ ಆಸ್ಪತ್ರೆಗಳನ್ನು ವಿಶೇಷವಾಗಿ ಕೋವಿಡ್-19 ಆಸ್ಪತ್ರೆಯೆಂದು ಘೋಷಿಸಲಾಗಿದೆ. ಇಲ್ಲಿನ ಐ.ಸಿ.ಯು.ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲು ಹಾಗೂ ಎ.ಬಿ.ಆರ್.ಕೆ. ಕಾರ್ಡ್ ಮೇಲೆ ವೈದ್ಯಕೀಯ ವೆಚ್ಚ ಪಾವತಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ. ಜಿಲ್ಲೆಯಲ್ಲಿ ಮುಂಜಾಗ್ರತವಾಗಿ ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಹೆಚ್ಚಿನ ಐಸೋಲೇಷನ್ ವಾರ್ಡ್ ಸ್ಥಾಪನೆಗೂ ಈಗಾಗಲೆ ಕಾರ್ಯಪ್ರವೃತ್ತರಾಗಿದ್ದೇವೆ. ಪ್ರತಿ ತಾಲೂಕಿನಲ್ಲಿ 5 ಐಸೋಲೇಷನ್ ವಾರ್ಡ್ ಸಹ ಸ್ಥಾಪಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಕೋವಿಡ್-19 ವಿಶೇಷ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಮಾತನಾಡಿ ಇದೂವರೆಗೆ 76 ಕೋವಿಡ್-19 ಪರೀಕ್ಷೆಗೆ ಸ್ಯಾಂಪಲ್ ಪಡೆದಿದ್ದು, ಇದರಲ್ಲಿ 3 ಪಾಸಿಟಿವ್ ಮತ್ತು 58 ನೆಗೆಟಿವ್ ಬಂದಿದೆ. 13 ಪ್ರಕರಣಗಳಲ್ಲಿ ವೈದ್ಯಕೀಯ ವರದಿ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಮಾತನಾಡಿ ಕಲಬುರಗಿ ನಗರದೆಲ್ಲೆಡೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಲಬುರಗಿ ನಗರವನ್ನು ನಾಲ್ಕು ವಲಯಗಳೆಂದು ಗುರುತಿಸಿ ಪ್ರತಿ ದಿನ ಫಾಗಿಂಗ್ ಮಾಡಲಾಗುತ್ತಿದೆ. ಮನೆ-ಮನೆಗೆ ತೆರಳಿ ತರಕಾರಿ ವಿತರಿಸಲು ಟಾಟಾ ಏಸ್ ವಾಹನಗಳ ಸೇವೆ ಪಡೆಯಲಾಗಿದೆ. ಮುಂದೆ ಕಿರಾಣಿ ದಿನಸಿಗಳನ್ನು ವಿತರಣೆಗೆ ಯೋಚಿಸಲಾಗಿದೆ ಮತ್ತು ನಗರದೆಲ್ಲಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಜಿಲ್ಲಾ ಅರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಕಲಬುರಗಿ ಜಿಮ್ಸ್ ಡೀನ್ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಮಹಮ್ಮದ್ ಶಫಿಯುದ್ದಿನ್, ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್.ನಾಗರಾಜ್, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞ ಡಾ.ಅಂಬರಾಯ ರುದ್ರವಾಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Be the first to comment