ನೋವೆಲ್ ಕೊರೋನಾ ವೈರಸ್ ವಿಸ್ತರಣೆ ತಡೆಗಟ್ಟಲು ‘’ಕೊರೋನಾ ಪ್ರಭಾವಿತ ರಾಜ್ಯ-ಜಿಲ್ಲೆಗಳಿಂದ ಆಗಮಿಸಿದವರ ಮೇಲೆ ತೀವ್ರ ನಿಗಾ’’ -ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್

ವರದಿ:-ಚೇತನ ಶಿವಸಿಂಪಿ ಮುದ್ದೇಬಿಹಾಳ

ಜೀಲ್ಲಾ ಸುದ್ದಿಗಳು


ವಿಜಯಪುರ ಮಾ 28: ಕೊರೋನಾ ವೈರಸ್ ಸೊಂಕಿತರಿಂದ ಪ್ರಭಾವಕ್ಕೆ ಒಳಗಾಗಿರುವ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸಿದವರನ್ನು ಕೂಡಾ ಹೋಮ್‍ಕ್ವಾರಂಟೈನ್ ಮಾಡುವಂತಹ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್-19 ಮುನ್ನೆಚ್ಚರಿಕೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಈವರೆಗೆ ವಿದೇಶದಿಂದ ಜಿಲ್ಲೆಗೆ ಆಗಮಿಸಿರುವವರನ್ನು ಹೋಮ್‍ಕ್ವಾರಂಟೈನ್ ಮಾಡಲಾಗಿದೆ. ರಾಜ್ಯದಲ್ಲಿ ಇದೇ ಪ್ರಥಮಬಾರಿಗೆ ಇನ್ನೊಂದು ಪರಿಣಾಮಕಾರಿಯಾದ ನಿರ್ಣಯಕೈಗೊಂಡಿದ್ದು, ಕೊರೋನಾ ವೈರಸ್‍ನಿಂದ ಪ್ರಭಾವಿತವಾಗಿರುವ ಮಹಾರಾಷ್ಟ್ರ, ಕೇರಳ, ತೆಲಂಗಾಣ ಸೇರಿದಂತೆ ಇನ್ನಿತರ ರಾಜ್ಯಗಳಿಂದ ಮತ್ತು ರಾಜ್ಯದ 11 ಜಿಲ್ಲೆಗಳಾದ ಬೆಂಗಳೂರು ನಗರ, ಗ್ರಾಮಿಣ, ಮಂಗಳೂರು, ಮೈಸೂರ, ದಾವಣಗೆರೆ, ಧಾರವಾಡ, ತುಮಕೂರ, ಚಿಕ್ಕಬಳ್ಳಾಪೂರ, ಕಲಬುರ್ಗಿ, ಕಾರವಾರ, ಉಡುಪಿ, ಕೊಡಗು ಜಿಲ್ಲೆಗಳಿಂದ ವಿಜಯಪುರ ಜಿಲ್ಲೆಗೆ ಆಗಮಿಸಿದವರನ್ನು ಗುರುತಿಸಿ ಹೋಮ್‍ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಪ್ರತಿಗ್ರಾಮ ಮತ್ತು ತಾಂಡಾಗಳಿಗೆ ಮರಳಿರುವ ಇಂತಹ ಜನರನ್ನು ಗುರುತಿಸಿ ತಪಾಸಣೆಗೆ ಒಳಪಡಿಸಲು ಈಗಾಗಲೆ ಆರೋಗ್ಯ ಇಲಾಖೆ ಮತ್ತು ಇತರ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹೋಮ್‍ಕ್ವಾರಂಟೈನ್‍ದಲ್ಲಿ ಸೂಕ್ತ ತಪಾಸಣೆಗೆ ನಿಗಾಇಡಲು ಪೊಲೀಸ್ ಇಲಾಖೆಯ ಸಿಬ್ಬಂದಿ, ಇತರ ಅವಶ್ಯಕ ಸಿಬ್ಬಂದಿ ನಿಯೋಜಿಸಲಾಗುವುದು. ಸಂಬಂಧಪಟ್ಟ ಮನೆಗೆ ಕರಪತ್ರ ಅಂಟಿಸಲಾಗುವುದು. ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚು ಜನರು ಬಂದ ಪರಿಶೀಲನೆ ಆಧಾರದ ಮೇಲೆ ಆಯಾ ಕುಟುಂಬ ಮತ್ತು ತಾಂಡಾಗಳನ್ನೆ ಹೋಮ್‍ಕ್ವಾರಂಟೈಗಳಾಗಿ ಘೋಷಣೆಗೂ ಸಹ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ದೇಶನದಂತೆ ರಾಷ್ಟ್ರದಾದ್ಯಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಇರುವ ಸ್ಥಳಗಳಿಲ್ಲಿಯೇ ಇರುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಜಿಲ್ಲೆಗೆ ಆಗಮಿಸಿರುವ ಅಸಂಘಟಿತ ಸುಮಾರು 1500 ಕಾರ್ಮಿಕರು ಇಂಡಿ ತಾಲೂಕಿನಲ್ಲಿ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಎಲ್ಲ ನಿರಾಶ್ರಿತ ಕಾರ್ಮಿಕರಿಗೆ 40 ಎಕರೆ ವಿಸ್ತಾರವುಳ್ಳ ಪ್ರದೇಶದಲ್ಲಿ ಸಾಧಕ-ಬಾಧಕಗಳನ್ನು ಅವಲೋಕಿಸಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಸತಿಗೆ ಸೌಲಭ್ಯ ಕಲ್ಪಿಸಲು ಸಮಾಜಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧಿಕಾರಿಗಳನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಈ ಎಲ್ಲ ನಿರಾಶ್ರಿತರನ್ನು ವಸತಿ ವಲಯಕ್ಕೆ ಸ್ಥಳಾಂತರಿಸಲು ಬಸ್‍ಗಳ ವ್ಯವಸ್ಥೆ, ವಸತಿ ಸಂದರ್ಭದಲ್ಲಿ ಆರೋಗ್ಯ ಚಿಕಿತ್ಸೆ, ಊಟ-ಉಪಹಾರ, ಕುಡಿಯುವ ನೀರು ಸೇರಿದಂತೆ ಅವಶ್ಯಕ ಸಾಮಗ್ರಿಗಳ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತದ ಮೂಲಕ ಮಾಡಲಾಗುತ್ತಿದ್ದು, ಜಿಲ್ಲೆಯ ಅಥವಾ ಗಡಿ ತಾಲೂಕಿನ ಹೊರವಲಯದಲ್ಲಿ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯ ನಾಗರಿಕರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಸಾಮಾಜಿಕ ಅಂತರದೊಂದಿಗೆ ದಿನಸಿ ಅಂಗಡಿಗಳು, ತರಕಾರಿ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು-ಹೆಚ್ಚು ತಳ್ಳುವ ಗಾಡಿಗಳಿಗೆ ಅನುಮತಿ ಸಹ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ನೆರವಾಗಲು ತೋಟಗಾರಿಕೆ ಇಲಾಖೆ ಹಾಗೂ ಹಾಫ್‍ಕಾಮ್ಸ್ ಮೂಲಕ ಹೆಚ್ಚುವರಿ ನಾಲ್ಕು ವಾಹನಗಳಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಹಾಗೂ ಜಿಲ್ಲೆಯ ರೈತರಿಂದ ನೇರವಾಗಿ ಸಾರ್ವಜನಿಕರಿಗೆ ತರಕಾರಿ ಮಾರಾಟ ಮಾಡಲು ಸಹ ವಿಶೇಷ ಅವಕಾಶ ಇಂದಿನಿಂದ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಜಾರಿಯಿರುವ ಅಗತ್ಯ ವಸ್ತುಗಳ ಮಾರಾಟಕುರಿತು ತಾವೂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಖುದ್ದಾಗಿ ಪರಿಶೀಲನೆ ಸಹ ಮಾಡುತ್ತಿದ್ದು, ಗ್ರಾಹಕರು ಹಾಗೂ ಮಾರಾಟಗಾರರು ಸಂಯಮದಿಂದ ಇದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ವಿಶ್ವ, ರಾಷ್ಟ್ರ ಹಾಗೂ ರಾಜ್ಯದಲ್ಲಿ ಆಯಾ ಅಪಾಯಕಾರಿ ರೀತಿಯಲ್ಲಿ ಕೋವಿಡ್-19 ಹರಡುತ್ತಿದ್ದು, ಈ ಕುರಿತು ಎಲ್ಲರು ಎಚ್ಚರದಿಂದ ಇರುವಂತೆ ತಿಳಿಸಿರುವ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಲಾಭಪಡೆದು ದುರುಪಯೋಗ ಪಡಿಸದಂತೆ, ಯಾವುದೇ ರೀತಿಯ ವದಂತಿ ಹರಡಿಸದಂತೆ ಎಚ್ಚರಿಕೆ ನೀಡಿದ್ದು, ಯಾವುದೇ ರೀತಿಯ ದೂರುಗಳಿದ್ದಲ್ಲಿ 1077 ಆರೋಗ್ಯ ಸಹಾಯವಾಣಿಗೆ, ಆಯಾ ತಾಲೂಕಾ ತಹಶಿಲ್ದಾರರಿಗೆ, ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.
ಇಂದು ಪೂರ್ವಾಹ್ನವರೆಗೆ 329 ಜನರು ವಿದೇಶದಿಂದ ಬಂದಿರುವ ಬಗ್ಗೆ ವರದಿಯಾಗಿದೆ. 41 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 186 ಜನ 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 102 ಜನ ಹೋಮ್‍ಕ್ವಾರಂಟೈನ್‍ದಲ್ಲಿದ್ದಾರೆ. ಈವರೆಗೆ ಕಳುಹಿಸಿದ 10 ಪ್ರಕರಣಗಳಲ್ಲಿ 8 ಪರೀಕ್ಷಾ ನೆಗೆಟಿವ್ ಬಂದಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿಯವರು ಮಾತನಾಡಿ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಹೋಮ್‍ಕ್ವಾರಂಟೈನ್ ಆಗುವವರ ಮತ್ತು ಕೋವಿಡ್ ನಿಯಂತ್ರಣ ಚಟುವಟಿಕೆಗಳನ್ನು ಕೈಗೊಳ್ಳಲು ಇಗಾಗಲೇ ಆಯಾ ಗ್ರಾಮಪಂಚಾಯತಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಆರೋಗ್ಯ, ಕಂದಾಯ, ಪಿ.ಡಿ.ಓ, ಪೊಲೀಸ್ ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಹಾಗೂ ಗ್ರಾಮ ಸೇವಕರು ಮತ್ತು ಗ್ರಾಮ ಪಂಚಾಯತಿ ಸಿಬ್ಬಂಧಿಗಳನ್ನು ಸಹ ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ನೇಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್.ಪಿ ಲಕ್ಷ್ಮೀ ನಾರಾಯಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*