ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಜನರು ತತ್ತರಿಸಿದ್ದಾರೆ. ನಗರ ಸೇರಿದಂತೆ ಜಿಲ್ಲಾದ್ಯಂತ ರಾತ್ರಿಯಿಡಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಜಾಗರಣೆ ಮಾಡುವಂತಾಗಿದೆ.
ಅಲ್ಲದೆ ರಸ್ತೆಗಳು ನದಿಯಂತಾಗಿ, ವಾಹನಗಳ ಸಂಚಾರಕ್ಕೆ ಸಂಚಕಾರ ಉಂಟಾಗಿದೆ.
ನಗರದ ದಿವಟಗೇರಿ ಗಲ್ಲಿ, ಗುಜ್ಜರಗಲ್ಲಿ, ಜಾಮಿಯಾ ಮಸೀದಿ ರಸ್ತೆ, ಬಡಿಕಮಾನ್ ರಸ್ತೆ, ರಾಮನಗರ, ಇಬ್ರಾಹಿಂರೋಜಾ ಪ್ರದೇಶದ ಬಡಾವಣೆ, ಜಿಲ್ಲಾಸ್ಪತ್ರೆ ಹಿಂಭಾಗದ ಅತಾಲಟ್ಟಿ ರಸ್ತೆ ಬಳಿಯ ಬಡಾವಣೆ, ಸ್ಟೇಶನ್ ಬ್ಯಾಕ್ ರೋಡಿನ ಬಿಲಾಲ್ ನಗರ ಪ್ರದೇಶ ಹಾಗೂ ಸೊಲ್ಲಾಪುರ ರಸ್ತೆಯ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ನಿವಾಸದ ಸುತ್ತಿಲಿನ ಬಡಾವಣೆಗಳಾದ ಕೆಸಿ ನಗರ, ಆಲಕುಂಟೆ ನಗರ, ಮುಗಳಖೋಡ ಮಠ ಆವರಣ ಸೇರಿ ಸುತ್ತಲು ಬಡಾವಣೆಗಳಲ್ಲಿ ಮೊಳಕಾಲುವರೆಗೂ ನೀರು ಮಡುಗಟ್ಟಿ ನಿಲ್ಲುವಂತಾಗಿದೆ.
ಇಲ್ಲಿನ ಕೆಲ ಬಡಾವಣೆಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಮಳೆ ನೀರು ಹೊರ ಹಾಕುತ್ತಲೇ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ. ಇಲ್ಲಿನ ಸ್ಟೇಶನ್ ರಸ್ತೆಯ ಕಾಮತ್ ಹೊಟೇಲ್ ಕೆಳ ಭಾಗದ ಸೂಪರ್ ಬಜಾರ್ ಗೆ ಮಳೆ ನೀರು ನುಗ್ಗಿ ಲಕ್ಷಾಂತರ ರೂ.ಗಳ ಮೌಲ್ಯದ ಆಹಾರ ಪದಾರ್ಥಗಳು ಹಾನಿಯಾಗಿವೆ. ಅಲ್ಲದೆ ಕೆಲ ಕಿರಾಣಿ ಅಂಗಡಿ, ಟ್ರ್ಯಾಕ್ಟರ್ ಶೂರೂಮ್, ಶಾಲೆಗಳಿಗೂ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಇನ್ನು ವಿಜಯಪುರದಲ್ಲಿ 158.8 ಎಂಎಂ ರಷ್ಟು ದಾಖಲೆ ಮಳೆಯಾಗಿದ್ದು, ಕೋಟ್ಯಾಳದಲ್ಲಿ 139 ಎಂಎಂ, ಉಕ್ಕಲಿ 112, ತಾಜಪುರ 111, ತೊರವಿ 102 ರಷ್ಟು ಸೇರಿದಂತೆ ಜಿಲ್ಲೆಯ ಇತರೆ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಡೋಣಿ ನದಿಗೆ ಪ್ರವಾಹ ಉಂಟಾಗಿದೆ.
Be the first to comment