ವಿದೇಶದಿಂದ ವಾಪಸ್ ಆದ ಡಿಸಿಎಂ ಡಿಕೆ ಶಿವಕುಮಾರ್; ಶಾಸಕ ಮುನಿರತ್ನ ಬಂಧನದ ಬಗ್ಗೆ ವ್ಯಂಗ್ಯವಾಗಿ ಹೇಳಿದಿಷ್ಟು..

 

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಯುಎಸ್​ ಪ್ರವಾಸದಲ್ಲಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಇಂದು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಆರ್​.ಆರ್​.ನಗರ ಬಿಜೆಪಿ ಶಾಸಕ ಮುನಿರತ್ನ ಬಂಧನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಡಿಕೆಶಿ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಈ ವಿಚಾರದ ಬಗ್ಗೆ ನಂಗೆ ಸರಿಯಾದ ಮಾಹಿತಿ ಇಲ್ಲ. ಬಿಜೆಪಿ ಇದೆ, ಆರ್.ಆಶೋಕ್ ಇದ್ದಾರೆ, ವಿಜಯೇಂದ್ರ ಇದ್ದಾರೆ. ಇನ್ನು ದೊಡ್ಡ ದೊಡ್ಡ ನಾಯಕರು ಇದ್ದಾರೆ, ಅವರು ಮಾತಾಡಬೇಕು. ಆ ಸಮುದಾಯದ ಮುಖ್ಯಸ್ಥರು, ಸ್ವಾಮೀಜಿಗಳು ಮಾತಾಡಬೇಕು, ಸರಿ ಅಂದ್ರೆ ಸರಿ, ತಪ್ಪು ಅಂದರೆ ತಪ್ಪು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟರು. ಇನ್ನು ಈ ಬಗ್ಗೆ ಇನ್ನಷ್ಟು ಮಾಹಿತಿ ತಗೊಂಡು ಮಾತಾಡ್ತಿನಿ ಎಂದು ಹೇಳಿದರು.

ಇನ್ನು ನಾಗಮಂಗಲ ಗಣೇಶ ಮೆರವಣಿಗೆ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರ ಇದೆ ನೋಡಿಕೊಳ್ಳುತ್ತೆ, ಸರ್ಕಾರ ನಿಭಾಯಿಸುತ್ತೆ ಎಂದಷ್ಟೇ ಹೇಳಿ ನುಣುಚಿಕೊಂಡರು.

ಮರು ಪ್ರಶ್ನೆ ಹಾಕಿದ ಡಿಕೆಶಿ

ವಿದೇಶದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಕೊಂಚ ಸಿಡಿಮಿಡಿಗೊಂಡಂತೆ ಕಂಡ ಡಿಸಿಎಂ, ನಮ್ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ. ಭೇಟಿ ಮಾಡೋಕೆ ಯಾರ ಅನುಮತಿ ಕೇಳಬೇಕು. ನಾನು ಯಾರ್ ಹತ್ರ ಮಾತಾಡಬೇಕು, ಏನ್ ಮಾಡಬೇಕು ಎಲ್ಲವನ್ನು ನಿಮ್ಮಹತ್ರ ಹೇಳ್ಕೋಬೇಕಾ? ನನ್ ತಮ್ಮನ ಹತ್ರ ಏನ್ ಮಾತಾಡ್ತಿನಿ, ನನ್ ತಂಗಿ ಹತ್ರ, ಫ್ಯಾಮಿಲಿ ಹತ್ರ ಏನ್ ಮಾತಾಡ್ತಿನಿ ಎಲ್ಲವನ್ನೂ ಹೇಳಬೇಕಾ ಎಂದು ಮರು ಪ್ರಶ್ನೆ ಹಾಕಿದರು.

ಗುಲ್ಬರ್ಗ ವಿಮೋಚನಾ ದಿನಾ ಆಚರಣೆ ಮಾಡೋಣ. ಕ್ಯಾಬಿನೆಟ್ ಇದೆ ಅಲ್ಲಿಗೆ ಹೋಗಬೇಕಿದೆ, ಅಲ್ಲಿ ಮಾತಾಡ್ತಿನಿ ಎಂದು ಹೇಳಿ ಮಾತು ಮುಗಿಸಿದ್ರು.

ಅಮೆರಿಕಾದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ (Kamala Harris)​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಅವರ ಆಹ್ವಾನದ ಮೇರೆಗೆ ಡಿಕೆಶಿ ಖಾಸಗಿ ಹಾಗೂ ರಾಜತಾಂತ್ರಿಕ ಸಮಾವೇಶದಲ್ಲಿ ಭಾಗವಹಿಸಲು ಅಮೆರಿಕಾಕ್ಕೆ ತೆರಳಿದ್ದರು. ಪ್ರಜಾಪ್ರಭುತ್ವ ಮತ್ತು ಚುನಾವಣೆ ಕುರಿತ ಸಂವಾದದಲ್ಲಿ ಭಾಗಿಯಾಗಿದ್ದರು. ರಾಹುಲ್​ ಗಾಂಧಿ ಕೂಡ ಅಮೆರಿಕಾ ಪ್ರವಾಸದಲ್ಲಿದ್ದ ಹಿನ್ನೆಲೆ ಡಿಕೆಶಿ ಅವರನ್ನು ಭೇಟಿ ಮಾಡಿದ್ದರು.

Be the first to comment

Leave a Reply

Your email address will not be published.


*