ಉಡುಪಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ರಾಜೀನಾಮೆ ಕೇಳಿರುವ ಪ್ರಮೋದ್ ಮಧ್ವರಾಜ್ ಅವರೇ, ತಾವು ಸಚಿವರಾಗಿದ್ದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ 193 ಕೋಟಿ ರೂಪಾಯಿ ಮೊತ್ತದ ವಂಚನೆ ದೂರು ದಾಖಲಿಸಿದ್ದ ವೇಳೆ ತಾವು ರಾಜೀನಾಮೆ ನೀಡಿದ್ದೀರಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.
ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪತ್ರಿಕಾ ಹೇಳಿಕೆಯಲ್ಲಿ ತಿರುಗೇಟು ನೀಡಿದ ಕಾಂಚನ್ ಅವರು, ಪ್ರಮೋದ್ ಮಧ್ವರಾಜ್ ವಿರುದ್ಧ ವಾಗ್ದಾಳಿ ನಡೆಸಿದರು. ಅಂದು ತಮ್ಮ ವಿರುದ್ಧ ಇದೇ ಟಿ ಜೆ ಆಬ್ರಹಾಂ ವಂಚನೆ ದೂರು ದಾಖಲಿಸಿದ್ದ ಸಂದರ್ಭದಲ್ಲಿ ತಮ್ಮ ರಾಜೀನಾಮೆಯನ್ನು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೇಳಿರಲಿಲ್ಲ. ಅಂದು ಕೂಡ ಆ ವ್ಯಕ್ತಿ ತಮ್ಮ ವಿರುದ್ದ ಸುಳ್ಳು ದೂರನ್ನು ದಾಖಲಿಸಿದ್ದು, ತಾವು ಕೂಡ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಪಡೆದು ಹೊರಬಂದಿದ್ದಿರಿ ಎನ್ನುವುದು ಮರೆಯಬೇಡಿ. ಅಂತೆಯೇ ಸಿದ್ದರಾಮಯ್ಯ ಅವರು ಕೂಡ ಮೂಡ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ. ಆದ್ದರಿಂದ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿರುಗೇಟು ನೀಡಿದರು.
ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಇಂದು ಬಿಜೆಪಿಯಲ್ಲಿ ಇರಬಹುದು. ಆದರೆ ತಮಗೆ ಹಿಂದೆ ಇದೇ ಅಬ್ರಹಾಂ ನೀಡಿದ ಮಾನಸಿಕ ಕಿರುಕುಳ ಮರೆಯಬಾರದು. ಆರೋಪ ಮಾಡುವಾಗ ಕೂಡ ಹಿಂದೆ ಮುಂದೆ ನೋಡುವ ಜಾಯಮಾನ ಇರಲಿ. ತಾವು ಇಂದು ಬಿಜೆಪಿ ಪಕ್ಷದಲ್ಲಿ ಕೂಡ ಎಲ್ಲಿಯೂ ಸಲ್ಲದವರಂತೆ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದೀರಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗಾಗಿ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲಾಗದ ತಾವು ಮತ್ತು ತಮ್ಮ ಬಿಜೆಪಿ ಪಕ್ಷ ಇಂತಹ ಮೋಸದ ವ್ಯಕ್ತಿಗಳೊಂದಿಗೆ ಸೇರಿಕೊಂಡು ನಡೆಸುತ್ತಿರುವ ಕೆಟ್ಟ ರಾಜಕೀಯವನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ಸಿದ್ದರಾಮಯ್ಯ ಅವರ ಬದುಕು ತೆರೆದ ಪುಸ್ತಕವಾಗಿದ್ದು ಕೂಡಲೇ ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Be the first to comment