ಎಸ್​​ಸಿ ಪಟ್ಟಿಯಿಂದ. ಲಂಬಾಣಿ (ಬಂಜಾರ) ಕೊರಮ, ಕೊರಚ ಮತ್ತು ಬೋವಿ ಜಾತಿಗಳನ್ನು ಕೈಬಿಡುವಂತೆ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ –

ಲಂಬಾಣಿ (ಬಂಜಾರ) ಕೊರಮ, ಕೊರಚ ಮತ್ತು ಬೋವಿ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ.

ಬೆಂಗಳೂರು:ಲಂಬಾಣಿ (ಬಂಜಾರ), ಬೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಕರ್ನಾಟಕದ ಪರಿಶಿಷ್ಟ ಜಾತಿ (ಎಸ್ಸಿ)ಗಳ ಪಟ್ಟಿಯಿಂದ ಕೈಬಿಡಲು ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ರಾಯಚೂರು ಜಿಲ್ಲೆಯ ಸಿವಿಲ್ ಎಂಜಿನಿಯರ್ ಆದ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಮಿತ್ರಾ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತೀಯ ಜನಗಣತಿ ಆಯುಕ್ತರು ಮತ್ತು ಪ್ರಧಾನ ರಿಜಿಸ್ಟ್ರಾರ್, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ಕೇಂದ್ರ ಚುನಾವಣಾ ಆಯೋಗ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಚುಣಾವಾಣಾ ಆಯೋಗದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.ವಿಚಾರಣೆ ವೇಳೆ ಅರ್ಜಿದಾರರು ವಾದ ಮಂಡಿಸಿ, ಸ್ಪೃಶ್ಯ ಜಾತಿಗಳಾಗಿರುವ ಹಾಗೂ ಪರಿಶಿಷ್ಟ ಜಾತಿಗಳಲ್ಲದ ಲಂಬಾಣಿ (ಬಂಜಾರ) ಕೊರಮ, ಕೊರಚ ಮತ್ತು ಬೋವಿ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇಧ 14, 16, 17, 46, 243(ಝಡ್), 330, 332, 341 ಮತ್ತು 366ರ ಉಲ್ಲಂಘನೆಯಾಗಿದೆ. ಈ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಹೊರಡಿಸಲಾದ ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತ ಮನವಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸಲ್ಲಿಸಬೇಕು. ಆಯೋಗವು ಆ ಮನವಿಯನ್ನು ಪರಿಶೀಲಿಸಿ ಸಂಬಂಧಪಟ್ಟ ಪ್ರಾಧಿಕಾರವಾದ ಸಾಮಾಜಿಕ ನ್ಯಾಯ ಮತ್ತು ಸಚಿವಾಲಯಕ್ಕೆ ವರದಿ ಸಲ್ಲಿಸಬೇಕು ಎಂದು 2020ರ ಫೆ.14ರಂದು ಆದೇಶಿಸಿತ್ತು ಎಂದು ವಿವರಿಸಿದರು.

ಅಲ್ಲದೆ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಾನು ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಅದನ್ನು ಆಧರಿಸಿ 2020ರ ಮಾ.12ರಂದು ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಪರಿಶಿಷ್ಟ ಜಾತಿಯೇತರರನ್ನು ಕೈ ಬಿಡುವ ಕುರಿತು ಪ್ರಸ್ತಾವನೆ ಕಳಿಸುವಂತೆ ತಿಳಿಸಿತ್ತು. ಆದರೆ, ಕರ್ನಾಟಕ ಸರ್ಕಾರ ಪ್ರಸ್ತಾವನೆ ಕಳಿಸಲಿಲ್ಲ. ನಂತರ ಇದೇ ಮಾದರಿಯ ಪತ್ರವನ್ನು 2020ರ ಮೇ 14ರಂದು ಮತ್ತೆ ಆಯೋಗದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿತ್ತು. ಆ ನಂತರ ಮುಖ್ಯ ಕಾರ್ಯದರ್ಶಿಗಳಿಗೂ ಮನವಿ ಪತ್ರ ನೀಡಿದ್ದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Courtಅಂತಿಮವಾಗಿ 2023ರ ಫೆ.16ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆಯೋಗಕ್ಕೆ ಪತ್ರ ಬರೆದು, ಈ ನಾಲ್ಕು ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿಯೇ ಉಳಿಸುವುದಾಗಿ ತಿಳಿಸಿದ್ದರು. ಜೊತೆಗೆ ನನ್ನ ಮನವಿ ಪತ್ರವನ್ನು ತಿರಸ್ಕರಿಸಿದ್ದರು. ನಂತರ 2023ರ ಜು.24ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಈ ವಿಚಾರದಲ್ಲಿ ಸೂಕ್ತ ಪರಿಹಾರಕ್ಕಾಗಿ ಹೈಕೋರ್ಟ್ ಮೊರೆ ಹೋಗುವಂತೆ ನನಗೆ ಸುಪ್ರೀಂ ಸೂಚಿಸಿತ್ತು. ಅದರಂತೆ ಅರ್ಜಿ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸರ್ಕಾರ ಹಾಗೂ ಆಯೋಗದಿಂದ ಪಡೆದುಕೊಳ್ಳಬೇಕು. ಲಂಬಾಣಿ (ಬಂಜಾರ), ಬೋವಿ, ಕೊರಮ ಮತ್ತು ಕೊರಚ ಜಾತಿಗಳನ್ನು ಕರ್ನಾಟಕದ ಪರಿಶಿಷ್ಟ ಜಾತಿ (ಎಸ್ಸಿ) ಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

LOGO
Logo

Be the first to comment

Leave a Reply

Your email address will not be published.


*