ವಿಜಯಪುರ :: ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲವೆಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆಯನ್ನು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅಲ್ಲಗಳೆದಿದ್ದಾರೆ.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಯರೆಡ್ಡಿ ಏನು ಮಾತನಾಡಿದ್ದಾರೆಂದು ನನಗೆ ಸರಿಯಾದ ಮಾಹಿತಿ ಇಲ್ಲ.
ಅಂಥದ್ದು ಯಾವುದೂ ಇಲ್ಲ, ಅದು ಏನೇ ಇದ್ದರೂ ರಾಯರೆಡ್ಡಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾತನಾಡುತ್ತಾರೆ ಎಂದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕಾರಣ ಕ್ರಮ ಕೈಗೊಳ್ಳುವಂತಡ ಆಗ್ರಹಿಸಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮನವಿ ನೀಡಿರುವುದಕ್ಕೆ ತಿರುಗೇಟು ನೀಡಿದ ಅವರು, ಯತ್ನಾಳ ಸಂಸದರಾ? ರಾಜ್ಯಸಭಾ ಸದಸ್ಯರಾ? ಅವರು ಶಾಸಕರು ಮಾತ್ರ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಹಣ ಮೊದಲು ಬರಲಿ ಎಂದು ಯತ್ನಾಳಗೆ ಹೇಳಿ ಎಂದು ಕುಟುಕಿದ ಎಂ.ಬಿ.ಪಾಟೀಲ, ಕಳೆದ ಬಾರಿ ಕೋರ್ಟಿಗೆ ಹೋಗಿ ಜಿಎಸ್.ಟಿ. ಹಣ ಪಡೆದುಕೊಳ್ಳುವ ಪರಸ್ಥಿತಿ ಬಂತು. ಬರ ಪರಿಹಾರಕ್ಕೆ ಕೇಳಿದಷ್ಟು ಹಣ ಬರಲಿಲ್ಲ. ಕೇಳಿದ್ದಕ್ಕಿಂತಲೂ ಕಡಿಮೆ ಹಣ ಕೊಟ್ಟರು ಎಂದು ಕಿಡಿ ಕಾರಿದರು.
ಚಂದ್ರಬಾಬು ನಾಯ್ಡು, ನಿತೀಶಕುಮಾರ್ ಅವರಂತೆ ಯತ್ನಾಳ ಕೂಡ ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯಕ್ಕೆ ಹಣ ಕೊಡಿಸುವ ಕೆಲಸ ಮಾಡಲಿ ಎಂದು ಸಿಡುಕಿದರು.
ರಾಜ್ಯಕ್ಕೆ ಬೇಕಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ಕೊಡದೆ ಅಕ್ಕಿಯನ್ನು ಹರಾಜು ಮಾಡಿದರು. ಹಣ ಕೊಟ್ಟರೂ ಅಕ್ಕಿ ಕೊಡಲಿಲ್ಲ. ಇದಕ್ಕೆಲ್ಲ ಯತ್ನಾಳ ಉತ್ತರಿಸಲಿ ಎಂದು ಆಗ್ರಹಿಸಿದರು.
Be the first to comment