ಕಾಡಾನೆಗಳ ಬಗ್ಗೆ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಲು ಈಶ್ವರ ಖಂಡ್ರೆ ಸೂಚನೆ ಪರಿಸರ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ

ಹಾಸನ ಜು.7: ಆನೆಗಳು ಕಾಡು ಬಿಟ್ಟು ಊರಿನ ಸಮೀಪ ಬಂದಾಗ, ಕೂಡಲೇ ಗ್ರಾಮಸ್ಥರಿಗೆ ಮಾಹಿತಿ, ಮುನ್ನೆಚ್ಚರಿಕೆ ನೀಡಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು, ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಹಾಸನದ ಅರಣ್ಯ ಭವನದಲ್ಲಿ ಶನಿವಾರ ಆನೆ ಕಾರ್ಯಪಡೆ ನಿಯಂತ್ರಣ ಕೊಠಡಿ ಉದ್ಘಾಟಿಸಿದ ಬಳಿಕ, ಅರಣ್ಯ ಮತ್ತು ಪರಿಸರ ಇಲಾಖೆಯ ಪರಾಮರ್ಶನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಬೇಲೂರು, ಸಕಲೇಶಪುರ ಸುತ್ತಮುತ್ತ ಕಾಡಾನೆಗಳ ಹಾವಳಿ ಇದ್ದು ಇದನ್ನು ನಿಯಂತ್ರಿಸಲು ಕ್ರಮವಹಿಸಿ ಎಂದು ಸೂಚಿಸಿದರು.
ಸುಮಾರು 60 ಆನೆಗಳು ಹಾಸನ ವೃತ್ತದಲ್ಲಿ ಕಾಡಿನಿಂದ ಹೊರ ಬರುತ್ತಿವೆ ಎಂದು ಅಧಿಕಾರಿಗಳು ತಿಳಿಸಿದಾಗ, ರೇಡಿಯೋ ಕಾಲರ್ ಅಳವಡಿಸಲಾಗಿರುವ ಆನೆಗಳು ಮತ್ತು ಆನೆ ಹಿಂಡಿನ ಚಲನವಲನದ ಮೇಲೆ ನಿಗಾ ಇಟ್ಟು, ಊರಿನ ಸಮೀಪ ಆನೆಗಳು ಬಂದರೆ, ಮಾಹಿತಿ ಮತ್ತು ಮುನ್ನೆಚ್ಚರಿಕೆಯನ್ನು ಕೂಡಲೇ ವಾಟ್ಸ್ ಅಪ್ ಗ್ರೂಪ್ ಗಳ ಮೂಲಕ ಮತ್ತು ಮಾಧ್ಯಮ ಪ್ರಕಟಣೆ ಮೂಲಕ ಸಂಬಂಧಿತ ಗ್ರಾಮಸ್ಥರಿಗೆ ತಲುಪಿಸುವ ಕಾರ್ಯ ಮಾಡಿದರೆ, ಸಾವು, ನೋವು ತಡೆಯಬಹುದು ಎಂದರು.
ಆನೆ ಹಾವಳಿ ಇರುವ ಪ್ರದೇಶಗಳ ಪಂಚಾಯ್ತಿ ಪಿಡಿಓ, ಕಾರ್ಯದರ್ಶಿ, ಪದಾಧಿಕಾರಿಗಳ ಜೊತೆಗೆ ಊರಿನ ಪ್ರಮುಖರನ್ನೂ ಈ ವಾಟ್ಸ್ ಅಪ್ ಗ್ರೂಪ್ ನಲ್ಲಿ ಸೇರಿಸಿ ಮಾಹಿತಿ ರವಾನಿಸಿದರೆ ಅವರು ಜನರನ್ನು ಎಚ್ಚರಿಸಲು ಸಾಧ್ಯವಾಗುತ್ತದೆ ಎಂದರು.


ಜಿಲ್ಲಾಧಿಕಾರಿ, ತಹಶೀಲ್ದಾರರ ವಾಟ್ಸ್ ಅಪ್ ಗ್ರೂಪ್:
ಇದರ ಜೊತೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಉಪ ವಿಭಾಗದಾಧಿಕಾರಿಗಳು, ತಹಶೀಲ್ದಾರ್ ಅವರುಗಳ ಪ್ರತ್ಯೇಕ ಗ್ರೂಪ್ ಮಾಡಿ, ಅವರಿಗೂ ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಬೇಕು. ಅವರೂ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಸಲು ಇದರಿಂದ ಅನುಕೂಲವಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಒಂದು ಸುತ್ತೋಲೆ ಹೊರಡಿಸಲು ಕ್ರಮ ವಹಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.
ಅರಣ್ಯದ ಅಂಚಿನಲ್ಲಿ ಹಲಸು, ಬಾಳೆ, ಭತ್ತ ಬೆಳೆಗೆ ನಿಷೇಧ ಸಲಹೆ
ಅರಣ್ಯದ ಅಂಚಿನಲ್ಲಿ ಆನೆಗಳಿಗೆ ಪ್ರಿಯವಾದ ಹಲಸು, ಬಾಳೆ, ಭತ್ತ ಇತ್ಯಾದಿ ಬೆಳೆ ಬೆಳೆಯುವ ಕಾರಣ ಆನೆಗಳು ಅವುಗಳನ್ನು ಹುಡುಕಿಕೊಂಡು ಬರುತ್ತವೆ ಎಂದು ಶಾಸಕ ಶಿವಲಿಂಗೇಗೌಡ ಮತ್ತು ಕೆಲವು ಅಧಿಕಾರಿಗಳು ಸಭೆಗೆ ತಿಳಿಸಿದಾಗ, ಕನಿಷ್ಠ ಕಾಡಿನಂಚಿನ 5 ಕಿ.ಮೀ. ಅಂತರದಲ್ಲಿ ಬಾಳೆ, ಹಲಸು, ಭತ್ತ ಬೆಳೆಯದಂತೆ ರೈತರ ಮನವೊಲಿಸಲು ಅಥವಾ ನಿಷೇಧಿಸಲು ಸಾಧ್ಯವೇ ಎಂಬ ಬಗ್ಗೆ ಕಾರ್ಯಸಾಧ್ಯ ವರದಿ ಸಲ್ಲಿಸಲು ಸೂಚನೆ ನೀಡಿದರು
ಆನೆಗಳಿಗೆ ಕಾಡಿನಲ್ಲಿಯೇ ಹುಲ್ಲು, ಆಹಾರ ಮತ್ತು ನೀರು ಲಭಿಸುವಂತೆ ಮಾಡಿದರೆ, ಲಾಂಟನಾ ಕಳೆ ನಿವಾರಣೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಈ ಬಗ್ಗೆ ಆಗಸ್ಟ್ 12ರಂದು ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಮಗ್ರವಾಗಿ ಚರ್ಚಿಸಲು ಸೂಚಿಸಿದರು.
ಪರಿಸರ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ:
ಏಕ ಬಳಕೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಜಲ ಮೂಲಗಳನ್ನು ಸೇರುತ್ತಿದೆ. ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು 2016ರಲ್ಲೇ ನಿಷೇಧಿಸಿದ್ದರೂ, ಪ್ಲಾಸ್ಟಿಕ್ ತಯಾರಿಕಾ ಘಟಕ, ದಾಸ್ತಾನು ಮಳಿಗೆ, ಮಾರಾಟಗಾರರ ಅಂಗಡಿಗಳ ಮೇಲೆ ದಾಳಿ ಮಾಡಿ ಎಷ್ಟು ಪ್ಲಾಸ್ಟಿಕ್ ಸೀಜ್ ಮಾಡಿದ್ದೀರಿ. ಎಷ್ಟು ಜನರ ಮೇಲೆ ಮೊಕದ್ದಮೆ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿದ ಸಚಿವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಜಲ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವಿಷಕಾರಿ ರಾಸಾಯನಿಕ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಕೊಳವೆ ಬಾವಿ, ಜಲ ಮೂಲಗಳಿಗೆ ಕೈಗಾರಿಕೆಗಳು ಹರಿಸುತ್ತಿದ್ದರೆ, ಮಲ ತ್ಯಾಜ್ಯವನ್ನು ನದಿ, ಕೆರೆ, ತೊರೆಗಳಿಗೆ ಕೊಳವೆ ಮೂಲಕ ಹರಿಸುತ್ತಿರುವ ಕೈಗಾರಿಕಾ ಘಟಕ, ಹೋಂ ಸ್ಟೇ ಮತ್ತು ರೇಸಾರ್ಟ್ ಗಳ ತಪಾಸಣೆ ಮಾಡಿ ಕ್ರಮ ವಹಿಸಲು ಪರಿಸರ ಅಧಿಕಾರಿಗಳಿಗೆ ಪರಿಸರ ಇಲಾಖೆಯ ಸಚಿವರೂ ಆದ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡ ಮತ್ತು ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ದೀಕ್ಷಿತ್ ಮತ್ತು ಸುಭಾಷ್ ಮಾಲ್ಕಡೆ ಮತ್ತಿತರರು ಉಪಸ್ಥಿತರಿದ್ದರು.

LOGO
Logo

Be the first to comment

Leave a Reply

Your email address will not be published.


*