ಹುಣಸೂರು :: ಈ ಚುನಾವಣೆ ಸತ್ಯ ಹಾಗೂ ಸುಳ್ಳಿನ ನಡುವಣ ಸಮರ. ಕೆಲವರು ಈ ಚುನಾವಣೆಯನ್ನು ಧರ್ಮ ಯುದ್ಧ ಎಂದು ಹೇಳುತ್ತಿದ್ದಾರೆ. ಆದರೆ ಇದು ಧರ್ಮ ಯುದ್ಧವೇ ಅಲ್ಲ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವಾ ಇಲ್ಲವಾ ಎಂಬ ತೀರ್ಮಾನ ಮಾಡುವ ಚುನಾವಣೆ.
ಕಾಂಗ್ರೆಸ್ ಅಧ್ಯಕ್ಷನಾಗಿ ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಇಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ಸರ್ವಜ್ಞ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದು ಹೇಳಿದ್ದಾರೆ. ನಾವು 25 ವರ್ಷಗಳ ನಂತರ ಈ ಕ್ಷೇತ್ರದಲ್ಲಿ ಸ್ವಾಭಿಮಾನಿ ಒಕ್ಕಲಿಗ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ.
ರಾಜ್ಯದಲ್ಲಿ ಕಾಂಗ್ರೆಸ್ 8 ಜನ ಒಕ್ಕಲಿಗರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದೆ. ಎಲ್ಲಾ ವರ್ಗದವರಿಗೆ ಸರ್ವರಿಗೂ ಸಮಪಾಲು, ಸಮಬಾಳು ತತ್ವದ ಮೇಲೆ ಆಡಳಿತ ಮಾಡುತ್ತಿದ್ದೇವೆ.
ನಮ್ಮ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ನಮ್ಮ ಸಂಪುಟದಲ್ಲಿ ಮೊದಲ ಬಾರಿಗೆ ಮೂವರು ಪರಿಶಿಷ್ಟ ಜಾತಿಯವರಿಗೆ ಮಂತ್ರಿ ಸ್ಥಾನ ನೀಡಿದ್ದೇವೆ. ಆ ಮೂಲಕ ನೊಂದ ಜನರಿಗೆ ಅವಕಾಶ ನೀಡಿದ್ದೇವೆ.
ಈ ಜಿಲ್ಲೆಯಲ್ಲಿ ನೀವು ನಮಗೆ ಶಕ್ತಿ ತುಂಬಿದ್ದೀರಿ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ.
ನಾವು ಕಳೆದ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಅಧಿಕಾರ ತೆಗೆದುಕೊಂಡ ಮೊದಲ ದಿನವೇ ಮೊದಲ ತಾಸಿನಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಅನುಮೋದನೆ ನೀಡಿದೆವು.
ಬಿಜೆಪಿ ಕಳೆದ ಚುನಾವಣೆಯಲ್ಲಿ 300 ಸೀಟು ಗೆದ್ದು ಏನು ಮಾಡಿದ್ದಾರೆ? ಅವರು ಏನು ಹೇಳಿದ್ದರು? ವಿದೇಶಿ ಕಪ್ಪುಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಹಾಕಿದ್ದಾರಾ? ಇಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈ ಭಾಗದ ರೈತರ ಆದಾಯ ಡಬಲ್ ಆಯಿತಾ? ಇಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ಉದ್ಯೋಗ ಕೊಟ್ಟರೆ? ಇಲ್ಲ. ಉದ್ಯೋಗ ಕೇಳಿದ ಯುವಕರಿಗೆ ಪಕೋಡಾ ಮಾರಿ ಎಂದರು.
ನಾವು ತಿಂಗಳಿಗೆ 200 ಯೂನಿಟ್ ವಿದ್ಯುತ್, ಬಡ ಕುಟುಂಬದ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ, ಅನ್ನಭಾಗ್ಯ ಯೋಜನೆ, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುತ್ತಿದ್ದೇವೆ. ಇದು ಸತ್ಯವಲ್ಲವೇ?
ಹೀಗಾಗಿ ಇದು ಸತ್ಯ ಹಾಗೂ ಸುಳ್ಳಿನ ನಡುವಣ ಸಮರವಾಗಿದೆ. ನೀವು ಸತ್ಯಕ್ಕೆ ಮತ ನೀಡುತ್ತಿರೋ, ಸುಳ್ಳಿಗೆ ಮತ ನೀಡುತ್ತೀರೋ? ಜೆಡಿಎಸ್ ಕಾರ್ಯಕರ್ತರು ಈಗ ಅಂತಂತ್ರರಾಗಿದ್ದಾರೆ. ದೇವೇಗೌಡರ ಅಳಿಯನೇ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವಾಗ ಪಕ್ಷದ ಕಾರ್ಯಕರ್ತರು ಯಾಕೆ ಆ ಪಕ್ಷದಲ್ಲಿ ಇರಬೇಕು. ನಿಮ್ಮ ರಕ್ಷಣೆಗೆ ನಾವು ಇದ್ದೇವೆ. ನೀವು ಅವಕಾಶವಾದಿಗಳ ವಿರುದ್ಧ ಹೋರಾಟ ಮಾಡಿ.
ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ, ರಾಮನಗರದಲ್ಲಿ ಅವರ ಮಗನನ್ನು ನಿಲ್ಲಿಸಿದ್ದರು. ರಾಮನಗರದಿಂದ ಅವರು ಸಂಸದರು ಆಗಿದ್ದರು, ಮುಖ್ಯಮಂತ್ರಿ ಕೂಡ ಆಗಿದ್ದರು. ಅವರ ತಂದೆ ಪ್ರಧಾನಿಯೂ ಆಗಿದ್ದರು. ಅಂತಹ ಕ್ಷೇತ್ರದಲ್ಲಿ ಅವರ ಕುಟುಂಬದ ಅಳಿಯನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಹಾಸನ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಮ ಕುಟುಂಬದವರಿಗೆ ಟಿಕೆಟ್ ನೀಡಿದ್ದೀರಿ. ನಿಮ್ಮ ಪಕ್ಷದಲ್ಲಿ ಬೇರೆ ಕಾರ್ಯಕರ್ತರು ಇರಲಿಲ್ಲವೇ? ನಿಮ್ಮ ಪಕ್ಷದಲ್ಲಿ ಒಬ್ಬ ಕಾರ್ಯಕರ್ತ ಇಲ್ಲವೇ?
ನೀವು ಸ್ವಾಭಿಮಾನಿಗಳು. ನಾವು ಬದುಕಿನ ಬಗ್ಗೆ ಆಲೋಚಿಸಿದರೆ, ಬಿಜೆಪಿ ಭಾವನೆ ಮೇಲೆ ರಾಜಕಾರಣ ಮಾಡುತ್ತದೆ. ದೇವರು ಅವಕಾಶ ಕೊಟ್ಟಾಗ ನಾವು ಅದನ್ನು ಬಳಸಿಕೊಳ್ಳಬೇಕು. ಆ ಮೂಲಕ ದೇಶದಲ್ಲಿ ಬದಲಾವಣೆ ತನ್ನಿ.
ನಮ್ಮ ಅಭ್ಯರ್ಥಿ ಬಡವ. ಆತ ನಿಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಹೋರಾಟ ಮಾಡಬಲ್ಲ. ಆತ ಪ್ರತಿ ಕಚೇರಿಯಲ್ಲಿ ಬೀದಿಯಲ್ಲಿ ನಿಂತು ಹೋರಾಟ ಮಾಡಬಲ್ಲ.
ನಿಮ್ಮ ಜಿಲ್ಲೆ ಹಾಗು ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನೀವು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು.
400 ಸೀಟು ಗೆಲ್ಲುತ್ತೇವೆ ಎನ್ನುವ ಬಿಜೆಪಿ 120 ಕಡೆಗಳಲ್ಲಿ ಅಭ್ಯರ್ಥಿ ಬದಲಿಸಿದ್ದಾರೆ. ಯಾಕೆ? ಪ್ರತಾಪ್ ಸಿಂಹ ಮುಖ ನೋಡಿ ಜನ ಮತ ಹಾಕುವುದಿಲ್ಲವೇ? ಶ್ರೀನಿವಾಸ್ ಪ್ರಸಾದ್ ಅವರಿಗೆ ಅಪಮಾನ ಮಾಡಿದ್ದಾರೆ. ಹೀಗೆ ಕೇಂದ್ರ ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಟಿಕೆಟ್ ನೀಡಿಲ್ಲ. ಕಾರಣ ಅವರನ್ನು ನಿಲ್ಲಿಸಿದರೆ ಗೆಲ್ಲಲ್ಲ ಎಂದು ಟಿಕೆಟ್ ನೀಡಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಹೇಗೆ 136 ಸೀಟು ಕೊಟ್ಟಿದ್ದೀರಿ ಅದೇರೀತಿ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸೀಟು ಗೆಲ್ಲಿಸುವುದು ಖಚಿತ.
ಚುನಾವಣೆ ನಂತರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕೇವಲ ಈ ಐದು ವರ್ಷದ ಸರ್ಕಾರವಲ್ಲ, ಮುಂದಿನ ಅವಧಿಯ ಐದು ವರ್ಷದ ಸರ್ಕಾರ.
ನಮ್ಮ ರಾಜ್ಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ನಮ್ಮ ಹೈಕಮಾಂಡ್ ನಾಯಕರಾಗಿದ್ದಾರೆ.
ನಮ್ಮ ರಾಜ್ಯದ ಗ್ಯಾರಂಟಿ ಯೋಜನೆ ನೋಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗೆ ಖರ್ಗೆಯವರು ಹಾಗು ರಾಹುಲ್ ಗಾಂಧಿ ಅವರು ಸಹಿ ಹಾಕಿದ್ದಾರೆ. ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ, 25 ಲಕ್ಷ ವರೆಗೂ ಆರೋಗ್ಯ ವಿಮೆ, ರೈತರ ಸಾಲಮನ್ನಾ, ಯುವಕರಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ ನೀಡುವುದಾಗಿ ಘೋಷಿಸಲಾಗಿದೆ.
ಎಲ್ಲಾ ವರ್ಗದವರಿಗೆ ಕೊಡುಗೆ ನೀಡಬೇಕು ಎಂದು ನಮ್ಮ ಪಕ್ಷ ಐದು ನ್ಯಾಯ ಗ್ಯಾರಂಟಿ ಘೋಷಣೆ ಮಾಡಿದೆ. ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಯುವ ನ್ಯಾಯ ಹಾಗೂ ಪಾಲುದಾರಿಕೆ ನ್ಯಾಯ ಘೋಷಿಸಿದ್ದಾರೆ. ಹೀಗಾಗಿ ನಿಮ್ಮ ಬದುಕು ಬದಲಿಸಿಕೊಳ್ಳಲು ಹಾಗು ಎಲ್ಲಾ ಸಮಾಜದ ಅಭಿವೃದ್ಧಿಗೆ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಕು ಹೇಳಿದರು.
Be the first to comment