ಇಂದು ನಾಟೀಕಾರ ಅಮರಣಾಂತ ಉಪವಾಸ ಅಂತ್ಯ|ಭೀಮಾ ನದಿಗೆ 1 ಟಿಎಂಸಿ ನೀರು

ಅಫಜಲಪುರ:ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಕುಡಿಯುವ ನೀರಿಗಾಗಿ 1 ಟಿಎಂಸಿ ನೀರು ಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಳೆದ 12 ದಿನಗಳಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಹೋರಾಟಗಾರ ಶಿವಕುಮಾರ ನಾಟೀಕಾರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಉಪವಾಸ ಸತ್ಯಾಗ್ರಹಕ್ಕೆ ಈ ಹಿಂದೆಯೂ ಬರಬೇಕಾಗಿತ್ತು

ಆದರೆ ಒಂದು ಸಮಸ್ಯೆಗೆ ಪರಿಹಾರ ಸಿಕ್ಕ ಮೇಲೆ ಬಂದರೆ ಉತ್ತಮ ಎಂದು ನಿರಂತರವಾಗಿ ನಮ್ಮ ಅಧಿಕಾರಿಗಳ ತಂಡದೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ.ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರು,ಶಾಸಕರು ಸಹ ಸಾಕಷ್ಟು ಶ್ರಮವಹಿಸಿದ್ದಾರೆ.ಹೀಗಾಗಿ ಗಂಭೀರ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಕಾಳಜಿ ವಹಿಸಿ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಸೂಚನೆ ನೀಡಿದೆ.ಅಲ್ಲದೇ ಕುಡಿಯುವ ನೀರಿನ ಸಮಸ್ಯೆ ಆಗಲಾರದಂತೆ ನೋಡಿಕೊಳ್ಳಲು ಈಗಾಗಲೇ 200 ಖಾಸಗಿ ಕೊಳವೆ ಬಾವಿಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಈ ಹಿಂದಿನ ವರ್ಷ 2 ಟಿಎಂಸಿ ನೀರು ಬ್ಯಾರೇಜ್ ನಲ್ಲಿ ಸಂಗ್ರಹವಿತ್ತು.ಆದರೆ ಈ ಬಾರಿ ಬರಗಾಲ ಇರುವುದರಿಂದ ಕೇವಲ 0.3 ನೀರು ಮಾತ್ರ ಇದೆ.ಅಫಜಲಪುರ ಮತ್ತು ಆಳಂದ ತಾಲೂಕಿನಲ್ಲಿ ಸಾಕಷ್ಟು ನೀರಿನ ಸಮಸ್ಯೆ ಇದೆ.ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಲಬುರಗಿ ಎಸ್ಪಿ ಅಕ್ಷಯ್ ಹಾಕೆ ಮಾತನಾಡಿ,ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ 5-6 ದಿನಗಳ ಮೇಲೆ ಈ ವಿಷಯ ಹೆಚ್ಚು ಗಮನ ಸೆಳೆದಿದೆ.ಹೋರಾಟಗಾರರು ಮತ್ತು ಸಾರ್ವಜನಿಕರು ಈ ಹೋರಾಟವು ಶಾಂತಿಯುತವಾಗಿ ನಡೆಸಿದ್ದಾರೆ.ಹೀಗಾಗಿ ಪೋಲಿಸ್ ಇಲಾಖೆಯಿಂದ ಧನ್ಯವಾದಗಳು ಸಲ್ಲಿಸಲಾಗುವುದು ಎಂದರು.

ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ,ಭೀಮಾ ನದಿಗೆ ನಾರಾಯಣಪುರ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲು ಆದೇಶ ಹೊರಡಿಸಲಾಗಿದೆ.ಆದರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.ಪಕ್ಷಾತೀತವಾಗಿ ಹೋರಾಟ ನಡೆಸಿ ಭೀಮಾ ನದಿ ಉಳಿವಿಗಾಗಿ ಹೋರಾಟ ನಡೆಸಲಾಗಿದೆ.ವೈಯಕ್ತಿಕ ಹಿತದೃಷ್ಟಿಯಿಂದ ಅಲ್ಲ.ಇಂದು ಬುಧುವಾರ ಬೆಳಿಗ್ಗೆ 11 ಗಂಟೆಗೆ ಸತ್ಯಾಗ್ರಹಕ್ಕೆ ಬೆಂಬಲಿಸಿದ ಪ್ರಮುಖರನ್ನು ಕರೆಸಿ ಉಪವಾಸ ಸತ್ಯಾಗ್ರಹ ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಡಿವೈಎಸ್ಪಿ ಮಹಮ್ಮದ್ ಶರೀಫ್ ರಾವುತರ್, ಚುನಾವಣಾಧಿಕಾರಿ ಜಾವೀದ್ ಕಾರಂಗಿ,ತಹಶೀಲ್ದಾರ್ ಸಂಜೀವಕುಮಾರ ದಾಸರ, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐ ಮಹೆಬೂಬ ಅಲಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಮಠದ, ಮುಖಂಡರಾದ ಚಿದಾನಂದ ಮಠ, ರಾಜಕುಮಾರ ಉಕ್ಕಲಿ, ಶ್ರೀಕಾಂತ ದಿವಾಣಜಿ, ಶರಣು ದಾಮಾ, ದಯಾನಂದ ದೊಡ್ಮನಿ, ಶಿವಪುತ್ರಪ್ಪ ಸಂಗೋಳಗಿ, ಪ್ರಭಾವತಿ ಮೇತ್ರಿ ಅಮರಸಿಂಗ ರಜಪೂತ, ಪ್ರತಿಭಾ ಮಹಿಂದರಕರ್, ಮಹಾಂತಗೌಡ ಪಾಟೀಲ, ಮಲ್ಲು ಆಲಮೇಕರ್, ನವೀನ ಜಮಾದಾರ ಶ್ರೀ ಶೈಲ ನಾಟೀಕಾರ, ಬಸವರಾಜ ಚಾಂದಕವಟೆ, ಸೇರಿದಂತೆ ನೂರಾರ ಜನ ರೈತರು , ಮತ್ತು ವಿವಿಧ ಸಂಘ ಸಂಸ್ಥೆ ಸಂಘಟನೆ ಮುಖಂಡರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*