ಧರ್ಮ ಯುದ್ಧ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ: ಡಿಸಿಎಂ ಡಿ.ಕೆ. ಶಿವಕುಮಾರ್

ವರದಿ : ಚೇತನ ಕಂಟೆಪ್ಪಗೋಳ

ಮಂಗಳೂರು, ಮಾರ್ಚ್ 26: “ಈ ಬಾರಿಯ ಧರ್ಮ ಯುದ್ಧ ಆರಂಭಿಸುವ ಮುನ್ನ ಧರ್ಮಸ್ಥಳದ ಮಂಜುನಾಥನ ಹಾಗೂ ಅಣ್ಣಪ್ಪ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು;

“ನಾನು ಪ್ರತಿ ಬಾರಿ ಧರ್ಮ ಯುದ್ಧದ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯುತ್ತೇನೆ. ಶ್ರೀ ಮಂಜುನಾಥ, ಗಂಗಾಧರ ಅಜ್ಜ ನನ್ನ ಬದುಕಿನಲ್ಲಿ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ”

ಲೋಕಸಭೆ ಚುನಾವಣೆ ತಯಾರಿ ಹೇಗಿದೆ ಎಂದು ಕೇಳಿದಾಗ, “ನಾನೀಗ ಮಂಜುನಾಥನ ಸನ್ನಿಧಿಯಲ್ಲಿ ಇದ್ದೇನೆ. ಧರ್ಮಸ್ಥಳ ಹಾಗೂ ಮಂಜುನಾಥನ ಶಕ್ತಿಯನ್ನು “ಮಾತು ಬಿಡದ ಮಂಜುನಾಥ” ಎಂದೇ ಬಣ್ಣಿಸುತ್ತಾರೆ. ಅದೇ ರೀತಿ ನಾವು ಕೂಡ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಬಿಡದೆ ಪಾಲಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ, ಜನರ ಮಧ್ಯೆ ಹೋಗಿ ನಮಗೆ ಮತ್ತಷ್ಟು ಹೆಚ್ಚಿನ ಶಕ್ತಿ ಕೊಡಿ ಎಂದು ಮತ ಕೇಳುತ್ತೇವೆ. ಈ ದೇವರು ನಮಗೆ ನುಡಿದಂತೆ ನಡೆಯಲು ಶಕ್ತಿ ನೀಡಿರುವುದೇ ನಮ್ಮ ಭಾಗ್ಯ.

ನಾವು ನಮ್ಮ ಕೆಲಸ ಮಾಡಿದ್ದೇವೆ. ಇದರ ಮೇಲೆ ಜನ ತೀರ್ಮಾನ ಮಾಡುತ್ತಾರೆ. ಮಹಿಳೆಯರು ಇಲ್ಲಿಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿ ಬರುತ್ತಿದ್ದಾರೆ. ಆ ಮೂಲಕ ತೀರ್ಥಯಾತ್ರೆ ಧರ್ಮ ಯಾತ್ರೆ ನಡೆಯುತ್ತಿದೆ. ಇದಕ್ಕೆ ಜನ ಕೊಟ್ಟ ಶಕ್ತಿ ಕಾರಣ. ನಾವು ಜನರ ಋಣ ತೀರಿಸಿದ್ದೇವೆ. ಜನರೂ ಕೂಡ ಉಪಕಾರ ಸ್ಮರಣೆ ಇಟ್ಟುಕೊಳ್ಳುವ ವಿಶ್ವಾಸವಿದೆ” ಎಂದು ತಿಳಿಸಿದರು.

Be the first to comment

Leave a Reply

Your email address will not be published.


*